ಲಕ್ಷ್ಮೇಶ್ವರ (ಗದಗ ಜಿಲ್ಲೆ):
ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರ ಹಾಗೂ ಅಮರಾಪೂರ ಗ್ರಾಮಗಳ ಮಧ್ಯೆ ನಿನ್ನೆ (ಅ.15) ರಾತ್ರಿ ಸಂಭವಿಸಿದ ಅಪಘಾತದಲ್ಲಿ ಗ್ರಾಮ ಸಹಾಯಕನೊಬ್ಬ ಸಾವನ್ನಪ್ಪಿರುವ ಘಟನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮರಳು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ ಹಾಗೂ ಬೈಕ್ ನಡುವೆ ಸಂಭವಿಸಿದ ಈ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇದರಿಂದ ಮರಳು ಮಾಫಿಯಾ ಕೈವಾಡದ ಬಗ್ಗೆ ಗಂಭೀರ ಅನುಮಾನ ವ್ಯಕ್ತವಾಗಿದೆ.

ಮೃತನನ್ನು ಮಹ್ಮದರಫಿ ಹುಸೇನಸಾಬ್ ನದಾಫ್ (25) ಎಂದು ಗುರುತಿಸಲಾಗಿದ್ದು, ಹುಲ್ಲೂರು ಗ್ರಾಮದಲ್ಲಿ ಗ್ರಾಮ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದನು. ನಿನ್ನೆ ರಾತ್ರಿ ಮಹ್ಮದರಫಿ ತನ್ನ ಬೈಕ್‌ನಲ್ಲಿ ಅಮರಾಪುರ ಗ್ರಾಮದಿಂದ ಹುಲ್ಲೂರ ಗ್ರಾಮದ ಕಡೆ ಪ್ರಯಾಣಿಸುವ ವೇಳೆ, ಮರಳು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.ಸದ್ಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಟ್ರ್ಯಾಕ್ಟರ್ ಅಪಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಪ್ರಕರಣ ದಾಖಲಾಗಿದೆ.
ದುಃಖದ ಸಂಗತಿ ಎಂದರೆ, ಮಹ್ಮದರಫಿ ಕುಟುಂಬಕ್ಕೆ ಒಬ್ಬನೇ ಮಗನಾಗಿದ್ದು, ಸಂಪೂರ್ಣ ಕುಟುಂಬದ ಆಧಾರಸ್ತಂಭವಾಗಿದ್ದನು. ಅವರ ಆಕಸ್ಮಿಕ ಸಾವಿನಿಂದ ಕುಟುಂಬ ಆರ್ಥಿಕ ಹಾಗೂ ಮಾನಸಿಕ ಸಂಕಟಕ್ಕೆ ಸಿಲುಕಿದೆ.
ಆದರೆ ಈ ಘಟನೆ ಬಳಿಕ, ತಾಲೂಕು ಗ್ರಾಮ ಸಹಾಯಕರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. “ಈ ಅಪಘಾತ ಕೇವಲ ಸಾಮಾನ್ಯ ರಸ್ತೆ ಅಪಘಾತವಲ್ಲ, ಉದ್ದೇಶಪೂರ್ವಕ ಕೊಲೆ. ಗ್ರಾಮದ ಮಟ್ಟದಲ್ಲಿ ಅಕ್ರಮ ಮರಳು ಸಾಗಾಟವನ್ನು ತಡೆಯಲು ನದಾಫ್ ಆಗಾಗ ಕಾರ್ಯಚಟುವಟಿಕೆ ನಡೆಸುತ್ತಿದ್ದರು. ಅದೇ ಕಾರಣಕ್ಕೆ ಮರಳು ಮಾಫಿಯಾ ಕಣ್ಣಿಗೆ ಬೀದ್ದಿದ್ದರು” ಎಂದು ಸಂಘದ ಪ್ರತಿನಿಧಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನೆಯ ನಂತರ ಸಂಘದ ಪ್ರತಿನಿಧಿಗಳು ಲಕ್ಷ್ಮೇಶ್ವರ ತಹಶೀಲ್ದಾರರಿಗೆ ಮನವಿ ಸಲ್ಲಿಸಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪೊಲೀಸರು ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕೆಂದು ಹಾಗೂ ಮೃತನ ಕುಟುಂಬಕ್ಕೆ ಸರ್ಕಾರದಿಂದ ತಕ್ಷಣವೇ ನ್ಯಾಯಸಮ್ಮತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ತಾಲೂಕಿನ ಹಲವೆಡೆ ಅಕ್ರಮ ಮರಳು ದಂಧೆ ವ್ಯಾಪಕವಾಗಿದ್ದು, ಅನಧಿಕೃತವಾಗಿ ಟ್ರ್ಯಾಕ್ಟರ್ ಹಾಗೂ ಟಿಪ್ಪರ್ ಮೂಲಕ ಮರಳನ್ನು ಸಾಗಾಟ ಮಾಡುವ ಮಾಫಿಯಾಗಳು ಪ್ರಭಾವ ಬೀರುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ನಿತ್ಯವೂ ಇಂತಹ ಮಾಫಿಯಾಗಳ ದೌರ್ಜನ್ಯ ಮುಂದುವರಿದಿದ್ದರೂ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮೌನ ವಹಿಸಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಅಪಘಾತಕ್ಕೆ ಸಂಬಂಧಿಸಿದಂತೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಾರಂಭವಾಗಿದೆ. ಆದರೆ ಇದು ಸಾಮಾನ್ಯ ರಸ್ತೆ ಅಪಘಾತವೋ ಅಥವಾ ಮರಳು ಮಾಫಿಯಾ ಸಂಚಿನ ಫಲಿತಾಂಶವೋ ಎಂಬುದನ್ನು ಪೊಲೀಸರು ಸೂಕ್ತ ತನಿಖೆಯಿಂದ ಮಾತ್ರ ಹೊರಹಾಕಬೇಕಿದೆ.
ಗ್ರಾಮೀಣ ಜನತೆ ಹಾಗೂ ಗ್ರಾಮ ಸಹಾಯಕರ ಸಂಘ ಈಗಾಗಲೇ ಪೊಲೀಸ್ ಇಲಾಖೆ ಹಾಗೂ ಆಡಳಿತದ ಮೇಲಿನ ಒತ್ತಡವನ್ನು ಹೆಚ್ಚಿಸಿದ್ದು, “ಅಕ್ರಮ ಮರಳು ದಂಧೆಯನ್ನು ತಡೆಯದಿದ್ದರೆ ಇಂತಹ ಘಟನೆಗಳು ಮುಂದುವರಿಯುತ್ತವೆ” ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.