ಗದಗ: ಯಶಸ್ವಿಯಾಗಿ ಬದುಕಬೇಕು ಎನ್ನುವುದು ಎಲ್ಲರ ಕನಸು ಮತ್ತು ಅಭಿಲಾಷೆ. ಯಶಸ್ಸು ಎಂಬ ಪದದ ವ್ಯಾಖ್ಯಾನ ಬಹು ವಿಶಾಲವಾಗಿದೆ. ಭಿಕ್ಷುಕ ಸಾಮ್ರಾಟನಾದರೆ ಯಶಸ್ವಿ ಎಂದು ಹೇಳುತ್ತೇವೆ. ಆದರೆ, ಸಾಮ್ರಾಟ ಅಶೋಕ ಕೊನೆಯ ಜೀವನದಲ್ಲಿ ಭಿಕ್ಷುಕನೂ ಆಗುತ್ತಾನೆ. ಹಾಗಾದರೆ ಯಶಸ್ಸು ಎಂದರೇನು ಎಂಬುದರ ಕುರಿತು ಗವಿಸಿದ್ದೇಶ್ವರ ಶ್ರೀ ಚಿಂತನೆಯನ್ನು ಹಂಚಿಕೊಂಡರು.
ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ನಡೆದ ಗದಗ ವಾಣಿಜ್ಯೋದ್ಯಮ ಸಂಸ್ಥೆಯ ಸುವರ್ಣ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಪೂಜ್ಯರು ಮಾತನಾಡಿದರು.
“ಮಕ್ಕಳಿಗೆ ನಾವು ನೀಟ್ ಪರೀಕ್ಷೆ ಬರೆಯುವುದನ್ನು ಕಲಿಸುತ್ತೇವೆ. ಆದರೆ, ನೀಟಾಗಿ ಬದುಕುವುದನ್ನು ಕಲಿಸಲಿಲ್ಲ. ಆರೋಗ್ಯ ಮತ್ತು ಆನಂದದಿಂದ ಬದುಕುವುದನ್ನು ಕಲಿಸಬೇಕು. ಮನೆಯಲ್ಲಿ ನೋಟಿನ ಕಟ್ಟು ಇದ್ದವರು ಶ್ರೀಮಂತರಲ್ಲ; ಮನುಷ್ಯನಿಗೆ ಮೊಣಕಾಲು ಗಟ್ಟಿ ಇದ್ದವನು ಶ್ರೀಮಂತ” ಎಂದು ಅವರು ಅಭಿಪ್ರಾಯಪಟ್ಟರು.
ವಾಣಿಜ್ಯೋದ್ಯಮಿಗಳಿಗೆ ಉದ್ಯಮ ಹೇಗೆ ಮಾಡಬೇಕು ಎಂದು ಹೇಳುವ ಅಗತ್ಯವಿಲ್ಲ. ಆದರೆ, “ಹಣ ಜಗತ್ತನ್ನು ಆಳುವುದಿಲ್ಲ, ವಿಚಾರಗಳೇ ಜಗತ್ತನ್ನು ಆಳುತ್ತವೆ. ದುಡಿಮೆ ಆರೋಗ್ಯಕ್ಕೆ ಅವಶ್ಯಕ. ಸಾಹಸಿಗಳಿಗೆ ಮಾತ್ರ ಫಲ ಸಿಗುತ್ತದೆ. ಸಾಹಸಿಗಳೇ ಆರೋಗ್ಯವಂತರು” ಎಂದು ಪಾಠ ನೀಡಿದರು.

“ಮನೆ ವಾಸ್ತು ಪ್ರಕಾರ ಕಟ್ಟಬೇಕು; ಅದೇ ರೀತಿಯಾಗಿ ಮನಸ್ಸನ್ನೂ ವಾಸ್ತು ಪ್ರಕಾರ ಕಟ್ಟಬೇಕು. ಆಗ ಮಾತ್ರ ನೆಮ್ಮದಿ ಲಭಿಸುತ್ತದೆ. ಜೀವನ ಬದಲಾಗುತ್ತಲೇ ಇರುತ್ತದೆ, ಸಂಬಂಧಗಳು ಮುರಿಯುತ್ತವೆ, ಸಂಪತ್ತು ಕರಗುತ್ತದೆ—ಇದು ನಿಸರ್ಗದ ನಿಯಮ. ಇತರರನ್ನು ನೋಡಿ ಬದುಕುವುದು ಬದುಕಲ್ಲ; ಆರೋಗ್ಯ ಮತ್ತು ಆನಂದವೇ ಜೀವನದ ಸರಳ ಸೂತ್ರಗಳು” ಎಂದು ಗವಿಸಿದ್ದೇಶ್ವರ ಶ್ರೀಗಳ ಸಂದೇಶ ನೀಡಿದರು.
ಸ್ಥಳೀಯ ಕೈಗಾರಿಕೆಗಳಿಗೆ ಪ್ರತ್ಯೇಕ ನೀತಿ ಅಗತ್ಯ: ಎಚ್.ಕೆ. ಪಾಟೀಲ
ನಂತರ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಸ್ಥಳೀಯ ಕೈಗಾರಿಕೆಗಳಿಗೆ ಪ್ರತ್ಯೇಕ ಕೈಗಾರಿಕಾ ನೀತಿ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. “ಸಣ್ಣ ಕೈಗಾರಿಕೆ ಉದ್ಯಮಿಗಳ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಕಣ್ಣು ತೆರೆಸಬೇಕು. ಬೆಂಗಳೂರಿನಲ್ಲಿ ಹೆಚ್ಚಿನ ಅನುಕೂಲತೆಗಳಿದ್ದರೂ, ಗದಗನಂತಹ ಜಿಲ್ಲೆಗಳಲ್ಲಿ ಸಣ್ಣ ಕೈಗಾರಿಕೆಗಳಿಗೆ ‘ಈಸ್ ಆಫ್ ಬ್ಯುಸಿನೆಸ್’ ಸೌಲಭ್ಯ ಕಡಿಮೆ. ಸಣ್ಣ ಕೈಗಾರಿಕೆಗಳು ಹೋರಾಟದ ಮೂಲಕವೇ ಅಸ್ತಿತ್ವ ಕಂಡುಕೊಳ್ಳುತ್ತಿವೆ” ಎಂದು ಹೇಳಿದರು.
ಅವರು ಬೇಸರ ವ್ಯಕ್ತಪಡಿಸಿ, “ಬೃಹತ್ ಕೈಗಾರಿಕೆಗಳಿಗೆ ಸಿಗುವಂತೆ ಸುಲಭ ಅನುಮತಿಗಳು ಸಣ್ಣ ಕೈಗಾರಿಕೆಗಳಿಗೆ ಸಿಗುತ್ತಿಲ್ಲ. ಇದರ ನೋವು ನನಗೂ ಇದೆ. ವಾಣಿಜ್ಯೋದ್ಯಮ ಸಂಸ್ಥೆಯವರಿಗೂ ಇದೆ” ಎಂದರು.
50 ವರ್ಷಗಳ ಸೇವೆ ಅಭಿನಂದನಾರ್ಹ: ಜಿ.ಎಸ್. ಪಾಟೀಲ
ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಉದ್ಯಮಿಗಳಿಗೆ ಉಪಯೋಗವಾಗುವ ಎಲ್ಲ ಕಾರ್ಯಗಳನ್ನು ಗದಗ ವಾಣಿಜ್ಯೋದ್ಯಮ ಸಂಸ್ಥೆ 50 ವರ್ಷಗಳಿಂದ ನಿರಂತರವಾಗಿ ಮಾಡುತ್ತ ಬಂದಿದೆ ಎಂದು ಪ್ರಶಂಸಿಸಿದರು. “ಆಧುನಿಕ ವ್ಯವಸ್ಥೆಯಲ್ಲಿ ಬದಲಾವಣೆ ಕಂಡುಬರುತ್ತಿದೆ. ಇಂತಹ ಸಂದರ್ಭದಲ್ಲಿ ಸಂಸ್ಥೆ 50 ವರ್ಷ ಸೇವೆ ಸಲ್ಲಿಸಿರುವುದು ಅಭಿನಂದನಾರ್ಹ” ಎಂದರು.
ಅವರು ಮುಂದುವರಿದು, “ಇಂದು ವಾಣಿಜ್ಯೋದ್ಯಮ ಬೆಂಗಳೂರು ಕೇಂದ್ರಿತವಾಗಿದೆ. ಆದರೆ, ‘ಬಿಯಾಂಡ್ ಬೆಂಗಳೂರು’ ಯೋಜನೆಯ ಮೂಲಕ ಸರ್ಕಾರವು ಜಿಲ್ಲೆಯ ಮಟ್ಟದಲ್ಲಿಯೂ ಕೈಗಾರಿಕೆ ಬೆಳೆಸಲು ಪ್ರಯತ್ನಿಸುತ್ತಿದೆ. 2 ಎಕರೆ ಒಳಗಡೆ ಭೂಮಿಯಲ್ಲೇ ಕೈಗಾರಿಕೆ ಪ್ರಾರಂಭಿಸಲು ಕೈಗಾರಿಕಾ ನೀತಿಯನ್ನು ಜಾರಿಗೆ ತಂದಿದೆ. ಉದ್ಯಮಿಗಳು ಇದರ ಸದುಪಯೋಗ ಪಡೆಯಬೇಕು” ಎಂದು ಸಲಹೆ ನೀಡಿದರು.
ನಗರ ಅಭಿವೃದ್ಧಿ ಕುರಿತು ಮಾತನಾಡಿದ ಅವರು, “ಗದಗಕ್ಕೆ ಎಚ್.ಕೆ. ಪಾಟೀಲರು ವ್ಯಾಪಾರ, ಅಭಿವೃದ್ಧಿ, ಸಾಂಸ್ಕೃತಿಕ ಬೆಳವಣಿಗೆಗೆ ಉತ್ತಮ ಪ್ರಾಧಿಕಾರ ತಂದಿದ್ದಾರೆ. ಪಿಪಿಪಿ ಮಾಡಲ್‌ನಲ್ಲಿ ನೀಲನಕ್ಷೆ ಸಿದ್ಧಪಡಿಸಿದ್ದಾರೆ. ಸರ್ಕಾರದಿಂದ ವಕಾರು ಸಾಲು ಅಭಿವೃದ್ಧಿ ಪ್ರಾಧಿಕಾರಕ್ಕೆ ಎಲ್ಲ ರೀತಿಯ ಸಹಕಾರ ಸಿಗಲಿದೆ. ಇದರ ಮೂಲಕ ಜಿಲ್ಲೆಯಲ್ಲಿ ಉದ್ಯೋಗಾವಕಾಶಗಳು ಹೆಚ್ಚುತ್ತವೆ” ಎಂದರು.
ಉದ್ಯಮಿಗಳ ಪರಿಶ್ರಮ ಶ್ಲಾಘನೀಯ: ಸಂಶಿಮಠ
ಹುಬ್ಬಳ್ಳಿ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎಸ್.ಪಿ. ಸಂಶಿಮಠ ಮಾತನಾಡಿ, ಗದಗ ಅಧ್ಯಕ್ಷ ತಾತನಗೌಡ ಪಾಟೀಲ ಅವರ ಕಾರ್ಯಪ್ರವೃತ್ತಿಯನ್ನು ಮೆಚ್ಚಿದರು.
ಮಾಜಿ ಅಧ್ಯಕ್ಷ ಚಂದ್ರು ಬಾಳಿಹಳ್ಳಿಮಠ ಮಾತನಾಡಿ, ನರಸಾಪುರ ಕೈಗಾರಿಕಾ ವಲಯದ ನಿವೇಶನಗಳನ್ನು ಮೂಲ ದರಕ್ಕೆ ಹಂಚಿಕೆ ಮಾಡಬೇಕೆಂದು ಆಗ್ರಹಿಸಿದರು.
ಗೌರವ ಸಮರ್ಪಣೆ
ಈ ಸಂದರ್ಭದಲ್ಲಿ ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳಿಗೆ ವಾಣಿಜ್ಯೋದ್ಯಮ ಸಂಸ್ಥೆಯಿಂದ ಗೌರವ ಸಮರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಪಿ. ಸಂಶಿಮಠ, ಸೋಮನಾಥ ಜಾಲಿ, ಆನಂದ ಎಲ್. ಪೋತ್ನಿಸ್, ಶರಣಬಸಪ್ಪ ಗುಡಿಮನಿ, ವಿಜಯಕುಮಾರ ಎಸ್. ಮಾಟಲದಿನ್ನಿ, ಶಿವಯ್ಯ ಆರ್. ನಾಲತ್ವಾಡಮಠ, ಅಶೋಕಗೌಡ ಕೆ. ಪಾಟೀಲ, ರಾಘವೇಂದ್ರ ಎಸ್. ಕಾಲವಾಡ, ದಾನಯ್ಯ ಗಣಾಚಾರಿ, ಸಂಜಯ ಸಿ. ಬಾಗಮಾರ, ನಂದಾ ಸಿ. ಬಾಳಿಹಳ್ಳಿಮಠ, ದೀಪಾ ಎಸ್. ಗದಗ, ಸುಷ್ಮಾ ಎಸ್. ಜಾಲಿ, ಸುಜಾತ ಎಸ್. ಗುಡಿಮನಿ, ಜ್ಯೋತಿ ಆರ್. ದಾನಪ್ಪಗೌಡ್ರ, ಲಲಿತಾ ಜಿ. ತಡಸದ, ಸುಧಾ ಸಿ. ಹುಣಸಿಕಟ್ಟಿ, ಪೂರ್ಣಿಮಾ ಕೆ. ಆಟದ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.