ನರಗುಂದ: ಊಟಕ್ಕೆಂದು ಬಿರಿಯಾನಿ ಹೋಟೆಲ್ ಗೆ ಬಂದಿದ್ದ ಯುವಕನೋರ್ವನನ್ನ, ದುಷ್ಕರ್ಮಿಗಳು ಮಚ್ಚಿನಿಂದ (ಡ್ರ್ಯಾಗರ್) ಇರಿದು ಕೊಲೆ ಮಾಡಿರುವ ಘಟನೆ ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ನಡೆದಿದೆ.
ಇಂದು ಮಧ್ಯಾಹ್ನ ಈ ಘಟನೆ ಜರುಗಿದ್ದು, ಪಟ್ಟಣದ ತಾಜ್ ಹೊಟೇಲ್ ಗೆ, ಊಟ ಮಾಡಲು ಬಂದಿದ್ದ ಬಸವರಾಜ್ ಮಮ್ಮಟಗೇರಿ (21) ಎಂಬ ಯುವಕನನ್ನು ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು,ಕಣ್ಣಿಗೆ ಖಾರದ ಪುಡಿ ಎರಚಿ, ಹೋಟೆಲ್ ಒಳಗಡೆಯೇ ಮಚ್ಚಿನಿಂದ ಇರಿದು ಹತ್ಯೆಗೈದಿದ್ದಾರೆ.
ಘಟನೆ ನಡೆದ ತಕ್ಷಣವೇ ನರಗುಂದ ವಿಭಾಗದ ಡಿವೈಎಸ್ಪಿ ಪ್ರಭು ಕಿರೇದಹಳ್ಳಿ ಸೇರಿದಂತೆ ಪೊಲೀಸ್ ಠಾಣೆಯ ಅಧಿಕಾರಿವರ್ಗ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಕೊಲೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲದಿದ್ದರೂ, ಹಳೆಯ ವೈಮನಸ್ಸು ಅಥವಾ ವೈಯಕ್ತಿಕ ದ್ವೇಷ ಹಿನ್ನಲೆ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಕೊಲೆ ನಡೆದ ಸ್ಥಳದಲ್ಲಿ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ. ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೊಲೆ ಮಾಡಿದವರ ಜಾಡು ಹಿಡಿದು ಖಾಕಿ ಬೆನ್ನುಹತ್ತಿದೆ. ತನಿಖೆ ಬಳಿಕವಷ್ಟೇ ಘಟನೆಯ ಸತ್ಯಾಸತ್ಯತೆ ಹೊರಬರಲಿದೆ.