ಬೆಂಗಳೂರು :
ರಾಜ್ಯ ರಾಜಕೀಯ ವಲಯದಲ್ಲಿ ಮತ್ತೊಮ್ಮೆ ದೊಡ್ಡ ಚರ್ಚೆಗೆ ಕಾರಣವಾಗುವಂತ ಬೆಳವಣಿಗೆ ಕಾಂಗ್ರೆಸ್ ಸರ್ಕಾರದಲ್ಲಿ ನಡೆದಿದೆ. ಹೈಕಮಾಂಡ್ ನ ನೇರ ಸೂಚನೆಯಂತೆ, ರಾಜ್ಯದ ಪ್ರಮುಖ ದಲಿತ ಮುಖಂಡ ಹಾಗೂ ಸಚಿವರಾದ ಕೆ.ಎನ್. ರಾಜಣ್ಣ ಅವರು ತಕ್ಷಣವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಹೈಕಮಾಂಡ್ ಈ ತತ್ಕ್ಷಣ ರಾಜೀನಾಮೆಯ ಸೂಚನೆ ನೀಡಲು ಕಾರಣವಾಗಿರುವುದೇನೆಂದರೆ, ಇತ್ತೀಚೆಗೆ ರಾಜಣ್ಣ ಅವರು ತಮ್ಮದೇ ಪಕ್ಷದ ರಾಜಕೀಯ ನಿಲುವಿಗೆ ವಿರುದ್ಧವಾಗಿ ನೀಡಿದ ವಿವಾದಾತ್ಮಕ ಹೇಳಿಕೆ. ಕಾಂಗ್ರೆಸ್ನ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ಮಹಾದೇವಪುರ ವಾರ್ಡ್ ಗೆ ಸಂಬಂಧಿಸಿದಂತೆ “ಮತಗಳ್ಳತನ” ಆರೋಪ ಮಾಡಿದ್ದ ವೇಳೆ, ರಾಜಣ್ಣ ಇದಕ್ಕೆ ಪ್ರತಿಯಾಗಿ “ಆ ಸಮಯದಲ್ಲಿ ನಮ್ಮದೇ ಸರ್ಕಾರವಿತ್ತು. ಅದರಲ್ಲಿ ನಮ್ಮದೂ ಲೋಪವಿದೆ, ಆಗಲೇ ಈ ಆರೋಪ ಮಾಡಬೇಕಾಗಿತ್ತು.ಅಧಿಕಾರಿಗಳ ಮೂಲಕ ಇದನ್ನ ಕಂಡು ಹಿಡಿಯಬಹುದಿತ್ತು ಎಂದು ಹೇಳಿ, ತಮ್ಮದೇ ಪಕ್ಷದ ನಿಲುವಿಗೆ ವಿರುದ್ಧವಾದ ಅಭಿಪ್ರಾಯವನ್ನು ವ್ಯತಿರಿಕ್ತವಾಗಿ ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದರು. ಈ ಹೇಳಿಕೆಯೇ ಹೈಕಮಾಂಡ್ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ.
ಅಲ್ಲದೆ, ಈ ಹಿಂದೆ ಕಾಂಗ್ರೆಸ್ ಮುಖ್ಯಸ್ಥ ಸುರ್ಜೆವಾಲಾ ರಾಜ್ಯದ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಸಂದರ್ಭದಲ್ಲಿ ರಾಜಣ್ಣ ಸಭೆಗೆ ಹಾಜರಾಗದೇ, ಅಸಮಾಧಾನದ ಸೂಚನೆಯನ್ನು ತೋರಿದ ಘಟನೆಯೂ ಹೈಕಮಾಂಡ್ ಗಮನ ಸೆಳೆದಿತ್ತು. ಪಕ್ಷದ ಶಿಸ್ತಿನ ವಿಷಯದಲ್ಲಿ ನಿರಂತರವಾಗಿ ಮೂಡಿಬಂದಿರುವ ಇಂತಹ ಅಸಹಕಾರದ ಘಟನೆಗಳು, ಹೈಕಮಾಂಡ್ ತಾಳ್ಮೆ ಕಳೆದುಕೊಳ್ಳುವಂತಾಗಿಸಿದೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆ, ಕಾಂಗ್ರೆಸ್ ಹೈಕಮಾಂಡ್ ಈಗ ರಾಜಣ್ಣ ಅವರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸ್ಪಷ್ಟ ಸೂಚನೆ ನೀಡಿದ್ದು, ಅವರು ಸ್ವಯಂ ರಾಜೀನಾಮೆ ನೀಡಲು ಒಪ್ಪದಿದ್ದಲ್ಲಿ ಪಕ್ಷದಿಂದಲೇ ಉಚ್ಚಾಟನೆ ಮಾಡುವ ಗಂಭೀರ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂಬ ಮಾಹಿತಿ ಪಕ್ಷದ ವಲಯಗಳಲ್ಲಿ ಹರಿದಾಡುತ್ತಿದೆ.
ರಾಜ್ಯದಲ್ಲಿ ದಲಿತ ಸಮುದಾಯದ ಪ್ರಮುಖ ನಾಯಕರಲ್ಲಿ ಒಬ್ಬರಾಗಿರುವ ಕೆ.ಎನ್. ರಾಜಣ್ಣ ಅವರ ರಾಜೀನಾಮೆ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಈ ವಿಷಯದಲ್ಲಿ ಯಾವ ರೀತಿಯ ರಾಜಕೀಯ ತಂತ್ರ ಅನುಸರಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಮಹದೇವಪುರದಿಂದ ಆರಂಭವಾದ ಈ ಬೆಳವಣಿಗೆ, ರಾಜ್ಯ ರಾಜಕೀಯದಲ್ಲಿ ಇನ್ನೂ ಹಲವು ತಿರುವುಗಳನ್ನು ಕಾಣಬಹುದೆಂಬ ನಿರೀಕ್ಷೆ ಹುಟ್ಟಿಸಿದೆ.