ಗದಗ:
ಅಂದರ್ ಬಾಹರ್ ಜೂಜಾಟದ ನಂಟು ಗದಗ ಜಿಲ್ಲೆಯಲ್ಲಿ ಮತ್ತೇ ತನ್ನ ಅಲೆ ಎಬ್ಬಿಸಿದ್ದು, ಬೆಟಗೇರಿ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಕಣ್ಣವರ ಕಟ್ಟಡದ ಮೊದಲ ಮಹಡಿಯಲ್ಲಿ ಜೂಜಾಟ ಅಡ್ಡೆ ಮೇಲೆ ಬಡಾವಣೆ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ.
ಬುಧವಾರ (ಅ.6) ರಾತ್ರಿ ಈ ದಾಳಿ ನಡೆದಿದ್ದು, ಜೂಜಾಟದಲ್ಲಿ ತೊಡಗಿದ್ದ ಗಣ್ಯರು, ವ್ಯಾಪಾರಸ್ಥರು ಹಾಗೂ ಮೆಕ್ಯಾನಿಕ್ ಸೇರಿ 20 ಕ್ಕೂ ಹೆಚ್ಚು ಜನರನ್ನ ಪೊಲೀಸರು ವಶಕ್ಕೆ ಪಡೆದು ನೋಟಿಸ್ ನೀಡಿದ್ದಾರೆ.
ದಿನಾಂಕ 06-08-2025 ರಂದು ರಾತ್ರಿ 10.20 ಗಂಟೆಗೆ, 20 ಮಂದಿ ತಮ್ಮ ಸ್ವಂತ ಲಾಭಕ್ಕಾಗಿ, ನಗದು ಹಣವನ್ನು ಹೂಡಿ, ಇಸ್ಪೀಟ್ ಎಲೆಗಳ ಮೂಲಕ ಜೂಜಾಟದಲ್ಲಿ ತೊಡಗಿರುವ ಖಚಿತ ಮಾಹಿತಿ ಮೇರೆಗೆ ಮಾಹಿತಿ ಬೆಟಗೇರಿ ಬಡಾವಣೆ ಠಾಣೆ ಸಿಪಿಐ ಧೀರಜ್ ಬಿ. ಶಿಂಧೆ ಅವರ ನೇತೃತ್ವದಲ್ಲಿ ವಿಶೇಷ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಆರೋಪಿಗಳಿಂದ ₹30,400 ನಗದು, 156 ಇಸ್ಪೀಟ್ ಎಲೆಗಳು (ಮೌಲ್ಯ ₹1,161) ಹಾಗೂ 6 ಇಸ್ಪೀಟ್ ಎಲೆಗಳ ಸೆಟ್ಗಳು (ಮೌಲ್ಯ ₹30) ಸ್ಥಳದಲ್ಲೇ ವಶಪಡಿಸಿಕೊಂಡಿದ್ದಾರೆ. ಜೂಜಾಟ ಅಡ್ಡೆಯೊಳಗೆ ಇದ್ದ ಎಲ್ಲಾ ಆರೋಪಿಗಳನ್ನು ಸ್ಥಳದಲ್ಲೇ ಬಂಧಿಸಿ ಠಾಣೆಗೆ ಕರೆತಂದು,ನಂತರ ನೋಟೀಸ್ ನೀಡಿದ್ದಾರೆ.
ಇನ್ನು ದಾಳಿ ವೇಳೆ, ಜೂಜಾಟದಲ್ಲಿ ಪ್ರಭಾವಿ ಗಣ್ಯ ವ್ಯಕ್ತಿಗಳು, ಹಾಗೂ ಗಣ್ಯ ವ್ಯಾಪಾರಸ್ಥರು ಸಿಕ್ಕಿಬಿದ್ದಿದ್ದು, ಅಪಾರ ಪ್ರಮಾಣದಲ್ಲಿ ಹಣ ಪತ್ತೆಯಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಡಾವಣೆ ಪೊಲೀಸ್ ಠಾಣೆಯಲ್ಲಿ ಗೂ.ಸಂ. 70/2025, ಕಲಂ 79 ಕೆ.ಪಿ. ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯದಿಂದ ತನಿಖೆ ಮುಂದುವರಿಸಲು ಅನುಮತಿ ಪಡೆಯಲಾಗಿದೆ. ಪೊಲೀಸರು ಆರೋಪಿಗಳ ಹಿಂದೆ ಇರುವ ಪ್ರಮುಖ ಸಂಘಟಕರು, ಹಣದ ಹರಿವು ಮತ್ತು ಇತರೆ ಜೂಜಾಟ ಜಾಲದ ಸಂಪರ್ಕಗಳ ಕುರಿತು ಆಳವಾದ ತನಿಖೆ ನಡೆಸುತ್ತಿದ್ದಾರೆ.
ಆದರೆ ಅವಳಿ ನಗರದಲ್ಲಿ,ಹಲವು ಕಡೆಗಳಲ್ಲಿ ಅಂದರ್ ಬಾಹರ್ ಜೂಜಾಟದ ಅಡ್ಡಾಗಳು ತಲೆಯೆತ್ತಿದ್ದು, ಪೊಲೀಸರು ತಮ್ಮ ತೀಕ್ಷ್ಣ ಕಣ್ಣಿನಿಂದ ಪತ್ತೆ ಹಚ್ಚಿ, ಅಕ್ರಮ ಅಪರಾಧ ಚಟುವಟಿಕೆಗಳನ್ನ ಬಯಲಿಗೆ ತರಬೇಕಾಗಿದೆ.