ಅ.7
ಗದಗ: ತಾಲೂಕಿನ ಲಿಂಗದಾಳ ಗ್ರಾಮದಲ್ಲಿ ಮುಂಗಾರು ಮಳೆಯ ಕಾರಣದಿಂದಾಗಿ ಮೇಲ್ಜಮೀನುಗಳಿಂದ ಹರಿದು ಬಂದ ಹೊರಕೋಡಿ ನೀರು ಹಾಗೂ ಕೆರೆ ತುಂಬಿದ ನೀರೂ ಸಹ ಜಮೀನಿಗೆ ಹರಿದು ಬರುತ್ತಿದೆ. ಹೀಗೆ ಬರುತ್ತಿರುವ ಮಳೆ ನೀರನ್ನ ಹೊರಸೂಸಬೇಕಾದಾಗ, ನಿರ್ವಹಣೆಯ ಕೊರತೆಯಿಂದ ರೈತನ ಜಮೀನಿನ ಮೂಲಕವೇ ಹರಿದ ಪರಿಣಾಮ ಅಲ್ಲಿ ಬಿತ್ತನೆ ಮಾಡಿದ್ದ ಹೆಸರು, ಶೇಂಗಾ ಸೇರಿದಂತೆ ಹಲವಾರು ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ.
ಹೆಚ್ಚುವರಿ ನೀರಿನ ಒತ್ತಡಕ್ಕೆ ತಡೆ ನೀಡುವ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ, ನೀರು ನೇರವಾಗಿ ರೈತನ ಹೊಲಕ್ಕೆ ನುಗ್ಗಿದ್ದು, ಬಿತ್ತನೆ ಹಂತದಲ್ಲಿದ್ದ ಬೆಳೆಗಳಿಗೆ ದೊಡ್ಡ ಹೊಡೆತವಾಗಿದೆ. ಈ ಅನಾಹುತದಿಂದ ರೈತನಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಸ್ಥರು, ಗ್ರಾಮ ಆಡಳಿತ ಅಧಿಕಾರಿ ಮತ್ತು ಸಂಬಂಧಿತ ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನೀರನ್ನು ನಿಯಂತ್ರಿತವಾಗಿ ಕೆರೆಗೆ ಹರಿಸಬೇಕಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮೇಲ್ಜಮೀನುಗಳ ಹೊರಕೋಡಿ ನೀರು ಮತ್ತು ತುಂಬಿದ ಕೆರೆಯ ನೀರೇ ನಮ್ಮ ಹೊಲಗಳನ್ನು ದಾಟಿ ಬೆಳೆಗಳನ್ನು ನಾಶಮಾಡಿದೆ,” ಎಂದು ರೈತ ಸಂಜೀವಕುಮಾರ ಜೀನಗಿ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ.
ರೈತನಿಗಾದ ಅನ್ಯಾಯಕ್ಕೆ ಸರ್ಕಾರದಿಂದ ತನ್ನ ಬೆಳೆ ನಷ್ಟದ ನ್ಯಾಯಸಮ್ಮತ ಪರಿಹಾರ ಒದಗಿಸುವಂತೆ, ಹಾಗೂ ಮುಂಚಿತವಾಗಿಯೇ ವ್ಯವಸ್ಥೆ ಕೈಗೊಳ್ಳದ ಗ್ರಾಮ ಮಟ್ಟದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ಸಂಬಂಧಿತ ತಹಶೀಲ್ದಾರ್, ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಇತ್ತ ಗಮನ ಹರಿಸಿ ಕೆರೆ ಸುತ್ತಲೂ ಇರುವ ಜಮೀನಿನ ರೈತರಿಗಾಗುತ್ತಿರುವ ನಷ್ಟವನ್ನು ಸಮೀಕ್ಷಿಸಿ, ಈಸಮಸ್ಯೆಗೆ ಖಾಯಂ ಪರಿಹಾರ ಹಾಗೂ ನಷ್ಟದ ಪರಿಹಾರ ಘೋಷಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.