ಗದಗ, ಆ.6:
ಗದಗ-ಬೆಟಗೇರಿ ಅವಳಿ ನಗರದಲ್ಲಿ ಅಕ್ರಮವಾಗಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಗಳ ವಿರುದ್ಧ ಸಂಚಾರಿ ಪೊಲೀಸರ ತಂಡ ಬುಧವಾರ ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಿದೆ. ಈ ಕಾರ್ಯಾಚರಣೆ ಭಾರತೀಯ ಮೋಟಾರ್ ವಾಹನ ಕಾಯ್ದೆ ಉಲ್ಲಂಘನೆ ಮಾಡುತ್ತಿರುವ ವಾಹನ ಸವಾರರಿಗೆ ಬುದ್ಧಿವಾದವಾದಂತೆ ಆಗಿದೆ.
ಗದಗ ಎಸ್ಪಿ ಜಿಲ್ಲೆ ರೋಹನ್ ಜಗದೀಶ ರವರ ಮಾರ್ಗದರ್ಶನದಲ್ಲಿ, ಡಿ.ಎಸ್.ಪಿ. ಮುರ್ತುಜಾ ಖಾದ್ರಿ ರವರ ನೇತೃತ್ವದಲ್ಲಿ, ಸಿಪಿಐ ಧೀರಜ್ ಶಿಂಧೆ (ಬೆಟಗೇರಿ) ರವರ ಸಲಹೆಯೊಂದಿಗೆ ಹಾಗೂ ಪಿಎಸ್ಐ ಕಿರಣಕುಮಾರ ಮತ್ತು ಪಿಎಸ್ಐ ಶ್ರೀಮತಿ ಬಿ.ಎಸ್. ತಳವಾರ ರವರ ನೇತೃತ್ವದ ಗದಗ ಸಂಚಾರಿ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಮೂಹದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ.
ಕಾರ್ಯಾಚರಣೆಯ ಹಿನ್ನೆಲೆ
ನಗರದ ಪ್ರಮುಖ ರಸ್ತೆಗಳ ಮೇಲೆ ನೋಂದಣಿ ಸಂಖ್ಯೆ ಇಲ್ಲದೇ ಅಥವಾ ದೋಷಪೂರಿತ ನಂಬರ್ ಪ್ಲೇಟುಗಳನ್ನು ಅಳವಡಿಸಿಕೊಂಡು ಸಂಚರಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದಾರೆ. ಅಲ್ಲದೆ, ನಂಬರ್ ಪ್ಲೇಟುಗಳ ಮೇಲೆ ಅಡ್ಡ ಧೋರಣೆಯ ಸ್ಟಿಕ್ಕರ್ಗಳನ್ನು ಅಂಟಿಸಿಕೊಂಡು ಕಾನೂನು ಉಲ್ಲಂಘನೆ ಮಾಡುತ್ತಿರುವ ವಾಹನಗಳ ವಿರುದ್ಧ ಕೂಡ ಕ್ರಮ ಕೈಗೊಳ್ಳಲಾಗಿದೆ.
ಫಲಿತಾಂಶ:
ಒಟ್ಟು 56 ದ್ವಿಚಕ್ರ ವಾಹನಗಳು ಪರಿಶೀಲನೆಗೆ ಒಳಪಟ್ಟು, ಕಾನೂನು ಬಾಹಿರ ವರ್ತನೆ ದೃಢಪಟ್ಟ ಹಿನ್ನೆಲೆಯಲ್ಲಿ ಪೊಲೀಸರು ವಾಹನಗಳನ್ನ ವಶಕ್ಕೆ ಪಡೆದಿದ್ದಾರೆ. ಎಲ್ಲ ವಾಹನಗಳ ಮೇಲೂ ಪ್ರಸ್ತುತ ಮೋಟಾರ್ ವಾಹನ ಕಾಯ್ದೆಯ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಬೈಕ್ ಮಾಲೀಕರು, ಸಂಚಾರಿ ಠಾಣೆಯಲ್ಲಿ ಸರತಿ ಸಾಲಿನಲ್ಲಿ ನಿಂತು, ಮಾಡಿದ ತಪ್ಪಿಗೆ ಪ್ರಾಯಶ್ಚಿತ ಎನ್ನುವಂತೆ, ದಂಡವನ್ನ ಕಟ್ಟುವ ಮೂಲಕ ತಮ್ಮ, ನೊಂದಣಿ ಫಲಕಗಳ ದೋಷಗಳನ್ನ ಸರಿಪಡಿಸಿಕೊಳ್ಳುತ್ತಿದ್ದಾರೆ.
ಪೊಲೀಸರ ಎಚ್ಚರಿಕೆ:
“ಇದೇ ರೀತಿಯಲ್ಲಿ ಮುಂದಿನ ದಿನಗಳಲ್ಲಿ ನೋಂದಣಿ ಸಂಖ್ಯೆ ಇಲ್ಲದ, ತಪ್ಪು ನಂಬರ್ ಪ್ಲೇಟ್ ಹಾಗೂ ಮರೆಮಾಚುವ ರೀತಿಯ ಸ್ಟಿಕ್ಕರ್ಗಳ ಬಳಕೆ ಕಂಡು ಬಂದರೆ, ಅಂತಹ ವಾಹನ ಸವಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಪೊಲೀಸ್ ಇಲಾಖೆಯು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದೆ.
ಸಾರ್ವಜನಿಕರಿಗೆ ವಿನಂತಿ:
ಸಂಚಾರಿ ಪೊಲೀಸರು ಸಾರ್ವಜನಿಕರ ಸುರಕ್ಷತೆಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಾಹನ ಸವಾರರು ಕಾನೂನು ಪಾಲನೆ ಮಾಡುವುದು ಅವರ ಕರ್ತವ್ಯ. ನೋಂದಣಿ ಸಂಖ್ಯೆ ಪ್ಲೇಟ್ ನಿಬಂಧನೆಗಳನ್ನು ಪಾಲಿಸದಿದ್ದರೆ ಕಠಿಣ ಕಾನೂನು ಕ್ರಮ ಅನಿವಾರ್ಯ ಎಂಬುದನ್ನು ಜನತೆ ಮನಗಂಡು ಇನ್ನಾದರೂ ಜಾಗೃತರಾಗಬೇಕು.