ಗದಗ ಜಿಲ್ಲೆಯಲ್ಲಿ ಖಾಸಗಿ ವಾಹನಗಳು only! – ನಾಳೆಯಿಂದ ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತ..
ವರದಿ: ಮಹಲಿಂಗೇಶ್ ಹಿರೇಮಠ. ಗದಗ
ಗದಗ, ಆಗಸ್ಟ್ 04:
ರಾಜ್ಯವ್ಯಾಪಿ ಸಾರಿಗೆ ನೌಕರರ ಮುಷ್ಕರದ ಭಾಗವಾಗಿ ಗದಗ ಜಿಲ್ಲೆಯಲ್ಲಿ ನಾಳೆ (ಆಗಸ್ಟ್ 05) ಬೆಳಗ್ಗೆ 6 ಗಂಟೆಯಿಂದಲೇ ಸಾರಿಗೆ ಬಸ್ಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಜಂಟಿ ಕ್ರಿಯಾ ಸಮಿತಿಯ ಗದಗ ಘಟಕದ ಅಧ್ಯಕ್ಷ ಶಾಂತಣ್ಣ ಮಾಳವಾಡ ಅವರ ಮಾಹಿತಿ ಪ್ರಕಾರ, ಜಿಲ್ಲೆಯ ಯಾವುದೇ ಸಾರಿಗೆ ನೌಕರರು ಸೇವೆಗೆ ಹಾಜರಾಗುವುದು ಇಲ್ಲ. ಸರ್ಕಾರದ ಎಸ್ಮಾ ಬೆದರಿಕೆಗೆಗೂ ಗದಗ ನೌಕರರು ಬಗ್ಗದೆ, ಹೋರಾಟದ ನಿರ್ಧಾರವನ್ನು ಗಟ್ಟಿಯಾಗಿ ಮುಂದಿಟ್ಟಿದ್ದಾರೆ.
“ಎಸ್ಮಾ ಜಾರಿಯಾದರೆ ಸರ್ಕಾರವೇ ಭಸ್ಮ” ಎಚ್ಚರಿಕೆ
ಶಾಂತಣ್ಣ ಮಾಳವಾಡ ಅವರು ತೀವ್ರವಾಗಿ ಎಚ್ಚರಿಸುವ ಮೂಲಕ “ಈ ಹಿಂದೆ ಎಸ್ಮಾ ಜಾರಿಗೆ ಹೋದ ಸರ್ಕಾರಗಳು ಭಸ್ಮವಾಗಿದೆ. ಭೀಮಣ್ಣ ಖಂಡ್ರೆ, ಪಿಜಿಆರ್ ಸಿಂಧಿಯಾ, ಬೀಳಗಿ ಅವರು ಎಸ್ಮಾ ಜಾರಿಗೆ ಸಾಯದಂತೆ ಹೋಗಿದ್ದಾರೆ. ಈಗಲೂ ಸರಕಾರ ಹಳೆಯ ತಪ್ಪು ಮರುಕಳಿಸಿದರೆ, ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಕೂಡ ಶಾಪದ ಬಲಿಗೆ ಬೀಳಲಿದೆ,” ಎಂದು ಎಚ್ಚರಿಸಿದರು.
ಸಿಬ್ಬಂದಿಗೆ ಬೆದರಿಕೆ ಬೇಡ – ಶಾಂತಿಯುತ ಹೋರಾಟಕ್ಕೆ ಕರೆ
“ಯಾವುದೇ ಸಿಬ್ಬಂದಿಗೆ ಸರ್ಕಾರದ ಪದಾಧಿಕಾರಿಗಳು ಬೆದರಿಕೆ ಹಾಕಬಾರದು. ಯಾರೂ ಹಾಜರಾಗದಂತೆ ನಿರ್ಧಾರ ಕೈಗೊಳ್ಳಲಾಗಿದೆ. ಬಸ್ ಸಂಚಲನ ಸಂಪೂರ್ಣ ನಿಲ್ಲಲಿದೆ. ಶಕ್ತಿ ಯೋಜನೆ ಯಶಸ್ವಿಯಾಗಲು ನಾವು ದುಡಿದಿದ್ದೇವೆ. ಈಗ ನಾವು ಸರ್ಕಾರದ ನೆರವು ಕೇಳುತ್ತಿದ್ದೇವೆ,” ಎಂಬುದು ಮಾಳವಾಡ ಅವರ ವಾದ.
ಖಾಸಗಿ ವಾಹನ ವ್ಯವಸ್ಥೆ ಸಿದ್ಧ – ಸಂಚಾರ ನಿಯಂತ್ರಣ ವಿಭಾಗೀಯ ನಿಯಂತ್ರಣಾಧಿಕಾರಿ ಸ್ಪಷ್ಟನೆ
ಇತ್ತ ಗದಗ ಸಂಚಾರ ನಿಯಂತ್ರಣ ವಿಭಾಗದ ಅಧಿಕಾರಿ ದೇವರಾಜು ಅವರು ಪ್ರತಿಕ್ರಿಯಿಸಿ, “ನಾವು ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗುವ ಸೂಚನೆ ನೀಡಿದ್ದೇವೆ. ಕೆಲವರು ಸಹಿ ಹಾಕಿದ್ದಾರೆ. ಆದರೆ ನಾಳೆ ಏನಾಗಲಿದೆ ಎಂಬುದು ಈಗಲೇ ಹೇಳಲು ಸಾಧ್ಯವಿಲ್ಲ. ಆದ್ದರಿಂದ RTO ಹಾಗೂ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ, ಖಾಸಗಿ ವಾಹನಗಳ ಮೂಲಕ ಪ್ರಯಾಣಿಕರ ಅನುಕೂಲಕ್ಕಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ,” ಎಂದಿದ್ದಾರೆ.
ರಾಜ್ಯದಲ್ಲಿ ಮುಷ್ಕರ ಫಿಕ್ಸ್ – ಹೈಕೋರ್ಟ್ ಆದೇಶದ ನಡುವೆಯೂ ಬಸ್ ಸಂಚಾರ ಸ್ಥಗಿತ
ಬೆಂಗಳೂರು, ಆಗಸ್ಟ್ 04:
ಕರ್ನಾಟಕ ಹೈಕೋರ್ಟ್ ನಾಳಿನ (ಆಗಸ್ಟ್ 05) ಬಸ್ ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಲು ಸೂಚನೆ ನೀಡಿದ್ದರೂ, ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಅವರು ನಾಳೆ ಮುಷ್ಕರ ಖಚಿತ ಎಂದು ಘೋಷಿಸಿದ್ದಾರೆ. ರಾಜ್ಯಾದ್ಯಂತ ಬೆಳಗ್ಗೆ 6 ಗಂಟೆಯಿಂದ ಬಸ್ಗಳು ಡಿಪೋಗಳಿಂದ ಹೊರಡಲೇ ಇಲ್ಲ ಎಂಬುದಾಗಿ ತಿಳಿದುಬಂದಿದೆ.
ಮುಷ್ಕರಕ್ಕೆ ಕಾರಣವಾದ ಬೇಡಿಕೆಗಳು:
38 ತಿಂಗಳ ವೇತನ ಬಾಕಿ ಬಿಡುಗಡೆ
ಶೇ.15ರಷ್ಟು ವೇತನ ಹೆಚ್ಚಳ
2024ರ ವೇತನ ಪರಿಷ್ಕರಣೆ ಜಾರಿಗೆ ಸ್ಪಷ್ಟ ಭರವಸೆ
ಶಕ್ತಿ ಯೋಜನೆಗೆ ಕೊಡುಗೆ ನೀಡಿದ ನೌಕರರಿಗೆ ಮಾನ್ಯತೆ
ಸಿಎಂ ಸಿದ್ಧರಾಮಯ್ಯ ಜೊತೆಗಿನ ಸಮಾಲೋಚನೆ ವಿಫಲ:
ಸಿಎಂ ಸಿದ್ದರಾಮಯ್ಯ ಅವರು ಇಂದು ನೌಕರರ ಜಂಟಿ ಸಮಿತಿಯವರ ಜೊತೆ ಸಮಾಲೋಚನೆ ನಡೆಸಿದರೂ, ಬೇಡಿಕೆಗಳನ್ನು ಈಡೇರಿಸುವಲ್ಲಿ ಸರಕಾರ ವಿಫಲವಾಗಿದೆ. ಕೇವಲ 14 ತಿಂಗಳ ಬಾಕಿ ವೇತನ ನೀಡುವುದಾಗಿ ಭರವಸೆ ನೀಡಿದ್ದು, ಉಳಿದ ಬೇಡಿಕೆಗಳ ಕುರಿತು ಅಧಿವೇಶನದ ನಂತರ ಮಾತನಾಡುವುದಾಗಿ ತಿಳಿಸಲಾಗಿದೆ. ಈ ಮಧ್ಯೆ, ಹೈಕೋರ್ಟ್ ನೀಡಿರುವ ತಾತ್ಕಾಲಿಕ ಆದೇಶವನ್ನೂ ಲೆಕ್ಕಿಸದೆ ನೌಕರರು ಮುಷ್ಕರದ ನಿರ್ಧಾರವನ್ನು ಮುಂದುವರಿಸಿದ್ದಾರೆ.
ಪ್ರತಿಭಟನೆಯು ಶಾಂತಿಯುತವಾಗಿರಲಿ ಎಂದು ಕಿವಿಮಾತು
ಅನಂತ ಸುಬ್ಬರಾವ್ ಅವರು ನೌಕರರಿಗೆ ಸಂದೇಶ ನೀಡುತ್ತಾ, “ಸರ್ಕಾರದ ಬೆದರಿಕೆಗೆ ಬಗ್ಗಬೇಡಿ. ಶಾಂತಿಯುತವಾಗಿ ಮುಷ್ಕರ ನಡೆಸಿ. ಯಾರೂ ಬಸ್ ಓಡಿಸಬೇಡಿ,” ಎಂದು ಕಿವಿಮಾತು ನೀಡಿದ್ದಾರೆ.