ಮುಂಡರಗಿ:
ಮಕ್ಕಳ ಅಂಕಗಳಿಗೆ ಮಾತ್ರ ಪೋಷಕರು ಅರ್ಥ ನೀಡುವುದಕ್ಕಿಂತ, ಅವರಲ್ಲಿರುವ ಆಂತರಿಕ ಪ್ರತಿಭೆಗಳಿಗೆ ಆದ್ಯತೆ ನೀಡಿ, ಅವರಿಗೆ ತಕ್ಕಂತಹ ಕ್ಷೇತ್ರಗಳಲ್ಲಿ ಅವರನ್ನ ಪ್ರೋತ್ಸಾಹಿಸಿ ಸಾಧಕರನ್ನಾಗಿ ರೂಪಿಸಬೇಕು ಎಂದು ಮುಂಡರಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಂ.ಜಿ. ಗಚ್ಚಣ್ಣವರ ಸಲಹೆ ನೀಡಿದರು.
ಪಟ್ಟಣದ ಎಸ್.ಎಫ್.ಎಸ್ ಶಾಲೆಯಲ್ಲಿ ಇತ್ತೀಚೆಗೆ ನಡೆದ “ಮಕ್ಕಳ ಕಲರವ – ಕಿಡ್ಟೋಪಿ” ಶೀರ್ಷಿಕೆಯ ವಿಶೇಷ ಮಕ್ಕಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
‘‘ನಿಮ್ಮ ಮಕ್ಕಳನ್ನು ಮೊಬೈಲ್‍ನ ಚಟದಿಂದ ದೂರವಿಡಿ. ಅವರಿಗೆ ಮೌಲ್ಯಮಯವಾದ ಮಾನವೀಯ ಅಧಾರಗಳನ್ನು ಕಲಿಸಿ. ಪ್ರತಿ ಮಕ್ಕಳಲ್ಲಿಯೂ ಎಲ್ಲ ಪ್ರತಿಭೆಗಳು ಇರಲ್ಲ. ಆದರೆ ಮಕ್ಕಳಲ್ಲಿ ಇರುವ ಪ್ರತಿಭೆಯನ್ನೇ ನೀವು ಗುರುತಿಸಿ ಬೆಳೆಸಿದರೆ, ಅಂಥವರು ಸಾಧಕರ ಪಟ್ಟಿಯಲ್ಲಿ ಬರುವದು ನಿಶ್ಚಿತ ಎಂದು ಬೋಧನಾತ್ಮಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ, ಎಸ್.ಎಫ್.ಎಸ್ ಶಾಲಾ ಸಂಸ್ಥೆಯ ಆಡಳಿತಾಧಿಕಾರಿ ಫಾದರ್ ಪ್ರಶಾಂತ್ ಕುಮಾರ್ ಅವರು, ಇಂತಹ ಕಾರ್ಯಕ್ರಮಗಳು ಮಕ್ಕಳ ಆತ್ಮವಿಶ್ವಾಸ ಮತ್ತು ಪ್ರತಿಭೆಗಳ ಬೆಳವಣಿಗೆಗೆ ಉತ್ತಮ ವೇದಿಕೆ ಆಗುತ್ತವೆ ಎಂದು ತಿಳಿಸಿದರು.
ಶಾಲೆಯ ಪ್ರಾಂಶುಪಾಲರಾದ ಫಾದರ್ ನಿರ್ಮಲ್ ಜೋಸ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಒಂದು ಭಾಗವಾಗಿ LKG ಹಾಗೂ UKG ವಿಭಾಗದ ಪುಟಾಣಿ ಮಕ್ಕಳಿಗೆ ಫ್ಯಾನ್ಸಿ ಡ್ರೆಸ್, ಭಾಷಣ ಸ್ಪರ್ಧೆ ಹಾಗೂ ನೃತ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪುಟಾಣಿ ಮಕ್ಕಳ ಅತ್ಯುತ್ತಮ ಹಾಗೂ ಮನಸೂರೆಗೊಳ್ಳುವ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಫಾದರ್ ನಿರ್ಮಲ್ ಜೋಸ್ ಪ್ರಶಸ್ತಿ ಫಲಕಗಳನ್ನು ನೀಡಿ ಗೌರವಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಯುಕೆಜಿ ಮಕ್ಕಳಿಂದ ಸೊಬಗಿನ ಪ್ರಾರ್ಥನಾ ನೃತ್ಯ ನಡೆಯಿತು.ಶ್ರೀ ಎಜಲಿಟಾ ಅವರು ಆತಿಥ್ಯ ಭಾಷಣ ನೀಡಿ, ಬೆಲ್ಲಾ ಅವರು ವಂದನಾರ್ಪಣೆ ಗೈದರು.
ಕಾರ್ಯಕ್ರಮ ನಿರ್ವಹಣೆಯನ್ನು ಜಾಸ್ಮಿನ್ ಮತ್ತು ಫ್ಲೋರಿಡಾ ಯಶಸ್ವಿಯಾಗಿ ಕೈಗೊಂಡರು. ವಿಶೇಷವಾಗಿ ಕೆಜಿ ಸೆಕ್ಷನ್‌ನ ಶಿಕ್ಷಕಿಯರಾದ ಸಹೋದರಿ ಹಿಮಾ, ಶ್ರೀಮತಿ ಉಮಾ ಎಂ. ಗೊಂಡಬಾಳ, ಶ್ರೀಮತಿ ವಾಣಿ ವಿ. ಗಡಾದ್, ಶ್ರೀಮತಿ ಉಮಾದೇವಿ ಮಠಪತಿ, ಶ್ರೀಮತಿ ರಮಂತೀನಾ ಫೆರ್ನಾಂಡಿಸ್ ಹಾಗೂ ಭೈರಪ್ಪ ವಾರದ, ಚಂದ್ರು ಶೀರಿ ಸೇರಿದಂತೆ ಶಾಲಾ ಶಿಕ್ಷಕ ಬಳಗ ಹಾಗೂ ಪಾಲಕರ ಉಪಸ್ಥಿತಿ ಕಾರ್ಯಕ್ರಮಕ್ಕೆ ಶೋಭೆ ತಂದಿತು.