ಗದಗ: ಪಾಲಕರು ತಮ್ಮ ಮಕ್ಕಳ ಅಂಕಗಳಿಗಿಂತ ವಿಶೇಷವಾದ ಜ್ಞಾನದ ಕೌಶಲ್ಯಕ್ಕೆ ಪ್ರಥಮ ಆದ್ಯತೆ ನೀಡಬೇಕು ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ರೋಹನ್ ಜಗದೀಶ್ ಹೇಳಿದರು.
ಅವರು ನಗರದ ಪ್ರತಿಷ್ಠಿತ ಚಿಕ್ಕಟ್ಟಿ ಸಮೂಹ ಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ಭೌತಶಾಸ್ತ್ರ ವಿಷಯದ ಪ್ರಾಯೋಗಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಮಕ್ಕಳು ವ್ಯಾಸಂಗ ಮಾಡುತ್ತಿರುವಾಗ ಕೆಲವು ವಿದ್ಯಾರ್ಥಿಗಳು ಆಸಕ್ತಿಯಿಂದ ಅತ್ಯುತ್ತಮವಾಗಿ ಓದು-ಬರಹ ಮಾಡುತ್ತ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದು ಉನ್ನತ ಸ್ಥಾನದಲ್ಲಿರುತ್ತಾರೆ. ಸರಿಯಾಗಿ ಓದು-ಬರಹಗಳ ಬಗ್ಗೆ ಆಸಕ್ತಿ ವಹಿಸದೆ ಇರುವಂತಹ ತುಂಟ ವಿದ್ಯಾರ್ಥಿಗಳು ಕನಿಷ್ಟ ಫಲಿತಾಂಶದೊಂದಿಗೆ ಉತ್ತೀರ್ಣರಾಗಿ ತಮಗೆ ಯಾವ ಸ್ಥಾನವು ದೊರೆಯದಿದ್ದಾಗ ಅವರು ತಮ್ಮಲ್ಲಿ ಅಡಗಿರುವ ಯಾವುದೋ ಒಂದು ಕೌಶಲ್ಯದಿಂದ ಯಾವುದಾದರೊಂದು ತಮ್ಮದೇ ಆದ ಸ್ವಂತ ಉದ್ಯೋಗ, ವ್ಯಾಪಾರ ಅಥವಾ ಕಂಪನಿಗಳನ್ನು ಸೃಷ್ಠಿಮಾಡಿ ತಮ್ಮೊಂದಿಗೆ ಓದಿ ರ‍್ಯಾಂಕ ಪಡೆದವರಿಗೆ ಕೆಲಸಕೊಡುವಂತಹ ಉದ್ಯಮಿಗಳಾಗುತ್ತಾರೆ.
ನನಗೆ ಸನ್ಮಾನ ಮಾಡುವ ಬದಲಾಗಿ ಇಲ್ಲಿ ಯಾರಾದರೂ ತುಂಟ ವಿದ್ಯಾರ್ಥಿಗಳನ್ನು ಕರೆದು ಅವರನ್ನು ಸನ್ಮಾನಿಸೊಣ ಎಂದು ತುಂಟ ವಿದ್ಯಾರ್ಥಿಗಳಾದ ICSE ಶಾಲೆಯ ೯ನೇ ತರಗತಿಯ ವಿದ್ಯಾರ್ಥಿ ಹರ್ಷಿತ ಜೈನ ಮತ್ತು ಬಿಪಿನ್ ಚಿಕ್ಕಟ್ಟಿ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿನಿ ಪ್ರತಿಭಾ ಮುಳಗುಂದ ಅವರನ್ನು ಕರೆಯಿಸಿ ಗೌರವಿಸಿದರು. ನೀವುಗಳು ಯಾವುದೇ ದುಶ್ಚಟ ಮತ್ತು ಅಪರಾಧಗಳಿಗೆ ಬಲಿಯಾಗದೆ ವಿಶೇಷವಾದ ನಿಮ್ಮದೇ ಆದ ಜ್ಞಾನದ ಕೌಶಲ್ಯವನ್ನು ಹೊಂದಿರಬೇಕು. ಅಂತಹ ವಿದ್ಯಾರ್ಥಿಗಳು ನಿಮ್ಮ ಮುಂದಿನ ಜೀವನದಲ್ಲಿ ನೀವು ಕಂಡ ಕನಸನ್ನು ನನಸಾಗಿಸಿಕೊಂಡು ಸಾಧಕರಾಗಲಿ ಎಂದು ಮಕ್ಕಳಿಗೆ ಶುಭಕೋರಿದರು.
ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಎಸ್. ವಾಯ್. ಚಿಕ್ಕಟ್ಟಿಯವರು ಮಾತನಾಡಿ, ಸಾಧನೆ ಮಾಡುವ ಮನಸ್ಸಿರುವ ಸಾಧಕರಿಗೆ ವಯಸ್ಸಿನ ಮಿತಿ ಯಾವ ಲೆಕ್ಕಕ್ಕೂ ಇರಬಾರದು. ಇಂತಹ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ ಗದಗ ಜಿಲ್ಲೆಗೆ ನೂತನ ಪೊಲೀಸ್ ವರಿಷ್ಠಾಧಿಕಾರಿಗಳು ಆದಂತಹ ಶ್ರೀ ರೋಹನ್ ಜಗದೀಶರವರನ್ನು ಮಾದರಿಯನ್ನಾಗಿ ಮಾಡಿಕೊಳ್ಳಿರಿ ಎಂದು ಹೇಳಿದರು.
ಈ ಮೊದಲು ಇವರು ಬೆಳಗಾವಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ. ಹುದ್ದೆ ಅಲಂಕರಿಸಿ ಕಾರ್ಯನಿರ್ವಹಿಸಿದ್ದಾರೆ. ಈಗ ಗದಗ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯ ಪ್ರವೃತ್ತರಾಗಿದ್ದಾರೆ ಹಾಗೂ ಗದಗ ಜಿಲ್ಲೆ ಶ್ರೀಯುತರಿಂದ ಹೆಚ್ಚಿನ ಬದಲಾವಣೆ ಬಯಸುತ್ತದೆ ಎಂದು ತಿಳಿಸಿದರು. ವಿಶೇಷವಾಗಿ ಅವರ ಬಗ್ಗೆ ಹೇಳುವುದಾದರೆ ಇತ್ತೀಚೆಗೆ ಭಾರತದ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ನಡೆಸಿದ ಆಯ್.ಪಿ.ಎಸ್. ಸರ್ದಾರ ವಲ್ಲಭಬಾಯಿ ಪಟೇಲ ನ್ಯಾಶನಲ್ ಪೊಲೀಸ್ ಅಕ್ಯಾಡಮಿ ವಿಡಿಯೋ ಕಾನ್ಫರೆನ್ಸ್ಸ್ನಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಆಯ್ಕೆಯಾದ ಶ್ರೀ ರೋಹನ್ ಜಗದೀಶರವರು ಪಾಲ್ಗೊಂಡಿದ್ದರು. ಅವರು ಅತ್ಯಂತ ಬಿಡುವಿಲ್ಲದ ಕರ್ತವ್ಯದ ಮಧ್ಯೆಯೂ ಸಹ ತಮ್ಮ ಸಮಯವನ್ನು ಬಿಡುವು ಮಾಡಿಕೊಂಡು ಆಗಮಿಸಿರುವುದು ನಮ್ಮ ನಿಮ್ಮೆಲ್ಲರ ಒಂದು ಭಾಗ್ಯ ಎಂದರೂ ತಪ್ಪಗಲಾರದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಿಕ್ಕಟ್ಟಿ ಸಂಸ್ಥೆಯ ಎಲ್ಲ ಉಪನ್ಯಾಸಕವೃಂದ, ಶಿಕ್ಷಕವೃಂದ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.