ಗದಗ, ಜುಲೈ 21:
ಗದಗ-ಬೆಟಗೇರಿ ಅವಳಿ ನಗರದ ರಸ್ತೆಗಳಲ್ಲಿ ಅಕ್ರಮವಾಗಿ ಸಂಚರಿಸುತ್ತಿದ್ದ ಆಟೋ ಟಂಟಂ ವಾಹನಗಳ ವಿರುದ್ಧ ಗದಗ ಸಂಚಾರ ಪೊಲೀಸ್ ಠಾಣೆಯು ವಿಶೇಷ ತಪಾಸಣಾ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿದೆ.
ಈ ಕಾರ್ಯಾಚರಣೆ ದಿನಾಂಕ 21-07-2025ರಂದು, ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಾನ್ಯ ಶ್ರೀ ರೋಹನ್ ಜಗದೀಶ, ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಮತ್ತು ಗದಗ ಉಪವಿಭಾಗದ ಡಿವೈಎಸ್ಪಿ ಶ್ರೀ ಮುರ್ತುಜಾ ಖಾದ್ರಿಯವರ ನೇತೃತ್ವದಲ್ಲಿ ಜರುಗಿತು. ಬೆಟಗೇರಿ ಸಿಪಿಐ (ಪ್ರಭಾರ) ಶ್ರೀ ಎಲ್ ಕೆ ಜೂಲಕಟ್ಟಿಯವರ ಸಲಹೆ ಹಾಗೂ ಗದಗ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ಕಿರಣಕುಮಾರ್ ಮತ್ತು ಸಿಬ್ಬಂದಿಗಳ ಪಾಲ್ಗೊಳ್ಳುವಿಕೆಯಲ್ಲಿ ಈ ವಿಶೇಷ ತಪಾಸಣಾ ಅಭಿಯಾನ ಜರುಗಿದೆ.
ಭಾರತೀಯ ಮೋಟಾರ್ ವಾಹನ ಕಾಯ್ದೆಗಳನ್ನು ಉಲ್ಲಂಘಿಸುತ್ತಿದ್ದ ಕೆಲವೊಂದು ಆಟೋ ಟಂಟಂ ವಾಹನಗಳು ತಪಾಸಣೆಯಲ್ಲಿ ಪತ್ತೆಯಾಗಿವೆ. ನೊಂದಣಿ ಸಂಖ್ಯೆ ಫಲಕವಿಲ್ಲದೇ ಅಥವಾ ಕಾನೂನುಬಾಹಿರವಾಗಿ ಅಳವಡಿಸಿದ ದೋಷಪೂರಿತ ನಂಬರ್ ಪ್ಲೇಟ್ಗಳೊಂದಿಗೆ, ಸಮವಸ್ತ್ರವಿಲ್ಲದೇ ವಾಹನ ಚಲಾಯಿಸುತ್ತಿದ್ದ ಚಾಲಕರು ಈ ಕಾರ್ಯಾಚರಣೆಯಲ್ಲಿ ಗುರುತಿಸಲ್ಪಟ್ಟಿದ್ದಾರೆ. ಕೆಲವರು ನೊಂದಣಿ ಸಂಖ್ಯೆ ಮೇಲೆ ಸ್ಟಿಕ್ಕರ್ ಅಂಟಿಸಿಕೊಂಡಿದ್ದನ್ನೂ ಸಹ ಪತ್ತೆಹಚ್ಚಲಾಗಿದೆ.
ಪೊಲೀಸ್ ಇಲಾಖೆ ಒಟ್ಟು 25 ಆಟೋ ಟಂಟಂಗಳನ್ನು ತಡೆಹಿಡಿದು, ಪರಿಶೀಲನೆ ನಡೆಸಿ ಕಾನೂನು ಪ್ರಕಾರ ಕ್ರಮ ಕೈಗೊಂಡಿದೆ. ಚಾಲಕರಿಗೆ ಜಾಗೃತಿ ಮೂಡಿಸಿ, ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ನಿಯಮ ಉಲ್ಲಂಘನೆ ಕಂಡು ಬಂದಲ್ಲಿ, ತೀವ್ರವಾದ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಲಾಗಿದೆ.
ಸಂಚಾರ ಇಲಾಖೆಯು ಸಾರ್ವಜನಿಕರಿಗೆ ಸರಳ ಆದೇಶವನ್ನು ನೀಡಿದ್ದು, ಎಲ್ಲ ಆಟೋ ಟಂಟಂ ಚಾಲಕರು ತಮ್ಮ ವಾಹನಗಳಲ್ಲಿ ಸರಿಯಾದ ನೋಂದಣಿ ಸಂಖ್ಯೆ ಫಲಕ ಅಳವಡಿಸಬೇಕು, ಚಾಲನಾ ಪರವಾನಗಿ (DL), ನೋಂದಣಿ ಪ್ರಮಾಣ ಪತ್ರ (RC), ಮತ್ತು ಪರವಾನಗಿ (Permit) ಹೊಂದಿರಬೇಕು. ದೋಷಪೂರಿತ ನಂಬರ್ ಪ್ಲೇಟ್ಗಳ ಬಳಕೆ, ಸ್ಟಿಕ್ಕರ್ ಅಂಟಿಸಿ ವಾಹನ ಸಂಚಾರ, ಮತ್ತು ಸಮವಸ್ತ್ರ ಧರಿಸದೆ ವಾಹನ ಚಾಲನೆ ಮಾಡಿದರೆ, ಯಾವುದೇ ವಿನಾಯಿತಿಯಿಲ್ಲದೇ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.