ಗದಗ ಜಿಲ್ಲೆ, ಜುಲೈ 20:
ಕೌಟುಂಬಿಕ ಸಮಸ್ಯೆಯಿಂದ ಮನನೊಂದು, ಒಂದು ವರ್ಷದ ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನ ಮುಂಡರಗಿ ಪೊಲೀಸರು ತಕ್ಷಣ ರಕ್ಷಿಸಿ ಪ್ರಾಣಾಪಾಯದಿಂದ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಸಮೀಪದ ತುಂಗಭದ್ರಾ ನದಿ ಸೇತುವೆಯಲ್ಲಿ ಶನಿವಾರ ಸಂಜೆ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ವಿಜಯನಗರ ಜಿಲ್ಲೆ ಹೂವಿನಹಡಗಲಿಯ ನಿವಾಸಿ ಶಶಿಕಲಾ ಎಂದು ಗುರುತಿಸಲಾಗಿದೆ.
ಆಕೆಯು ತಮ್ಮ ಮಗು ಜೊತೆ ನದಿಗೆ ಹಾರಲು ಪ್ರಯತ್ನಿಸುತ್ತಿದ್ದ ವೇಳೆ, ಘಟನೆ ಗಮನಿಸಿದ ಸಾರ್ವಜನಿಕರು ತಕ್ಷಣ 112 ನಂಬರಿಗೆ ಕರೆಮಾಡಿ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಮುಂಡರಗಿ ಪೊಲೀಸ್ ಠಾಣೆಯ ಸಿಬ್ಬಂದಿ ಶಶಿಕಲಾ ಹಾಗೂ ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದರು.
ಪೊಲೀಸರು ಆಕೆಗೆ ಸಮಾಧಾನ ಹೇಳಿ ಮನವೊಲಿಸಿ, ಮಾನಸಿಕ ಬೆಂಬಲ ನೀಡಿ ಸುರಕ್ಷಿತವಾಗಿ ಮನೆಯವರೆಗೆ ಕಳುಹಿಸಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಗೆ ಅಗತ್ಯಸಹಾಯ ಮತ್ತು ಸಲಹೆಗಳನ್ನು ನೀಡಲಾಯಿತು.
ಮಹಿಳೆಯು ಬಾಳಿನ ಸವಾಲುಗಳಿಗೆ ಮಣೆ ಹಾಕಿ, ಮಗು ಕೂಡ ಭವಿಷ್ಯವಿಲ್ಲದೆ ಹೋಗಬೇಕೆಂಬ ನಿರ್ಣಯ ಕೈಗೊಂಡಿದ್ದ ದೃಶ್ಯ ಸಾರ್ವಜನಿಕರನ್ನು ತೀವ್ರವಾಗಿ ಆಘಾತಕ್ಕೆ ಒಳಪಡಿಸಿದೆ. ಆದರೆ ಮುಂಡರಗಿ ಪೊಲೀಸರು ತೋರಿದ ಸಮಯೋಚಿತ ಕಾರ್ಯಾಚರಣೆ ಹೃದಯ ಸ್ಪರ್ಶಿ ಆಗಿದ್ದು, ಸಾರ್ವಜನಿಕರಿಂದ ವ್ಯಾಪಕವಾಗಿ ಪ್ರಶಂಸೆ ಗಳಿಸಿದೆ.
ಮುಂಡರಗಿ ಪೊಲೀಸ್ ಠಾಣೆಯ ಕಾರ್ಯಕ್ಷಮತೆ, ಸಹಾನುಭೂತಿ ಹಾಗೂ ಮಾನವೀಯ ನಿಲುವಿಗೆ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.