ಗದಗ, ಜುಲೈ 19: ಆದರಹಳ್ಳಿಯಲ್ಲಿ ಸಂಭವಿಸಿದ್ದ ಎರಡು ಮಹತ್ವದ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸರು ಯಶಸ್ವಿಯಾಗಿದ್ದಾರೆ. ಈಗಾಗಲೇ ಮೂರು ಆರೋಪಿತರ ಪೈಕಿ ಇಬ್ಬರನ್ನು ಬಂಧಿಸಲಾಗಿದ್ದು,ಓರ್ವ ಪರಾರಿಯಾಗಿದ್ದು ಆದಷ್ಟು ಬೇಗ ಬಂಧಿಸಲಾಗುವದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜುಲೈ 1ರ ರಾತ್ರಿ 10 ರಿಂದ ಜುಲೈ 2ರ ಮುಂಜಾನೆ 5:30ರ ನಡುವೆ ಆದರಹಳ್ಳಿಯ ಸೋಗಿಹಾಳ ರಸ್ತೆಯಲ್ಲಿರುವ ಮನೆಯಲ್ಲಿ ಮನೆಯ ಬಾಗಿಲಿನ ಕೀಲಿ ಮುರಿದು ಕಳ್ಳತನ ನಡೆದಿದೆ. ಟ್ರೆಜರಿಯಲ್ಲಿ ಇರಿಸಿದ್ದ ಒಟ್ಟು 15 ಗ್ರಾಂ ಬಂಗಾರದ ಆಭರಣಗಳು — ಒಂದೊಂದು 5 ಗ್ರಾಂ ತೂಕದ ಬೋರಮಳ ಸರ ಹಾಗೂ ಕೊರಳಚೈನ್, 2.5 ಗ್ರಾಂ ತೂಕದ ಬೆಂಡವಾಲಿ ಮತ್ತು ಡ್ರಾಪ್ ಗುಂಡುಗಳನ್ನು ಕಳ್ಳರು ಅಪಹರಿಸಿದ್ದರು.
ಇದೇ ದಿನ, ಗ್ರಾಮದ ಬಸ್‌ಸ್ಟ್ಯಾಂಡ್ ಹತ್ತಿರದ ಮಾನಪ್ಪ ಸಣ್ಣರಾಮಪ್ಪ ವಡ್ಡರ ಅವರ ಗ್ರಾಮ ಒನ್ ಆನ್‌ಲೈನ್ ಸೆಂಟರ್ ಅಂಗಡಿಯಲ್ಲೂ ಕೀಲಿ ಮುರಿದು ಕಳ್ಳತನ ಮಾಡಲಾಗಿತ್ತು. ಅಂಗಡಿಯಲ್ಲಿದ್ದ ₹18,000 ಮೌಲ್ಯದ ಲ್ಯಾಪ್ಟಾಪ್ ಮತ್ತು ಚಾರ್ಜರ್ ಅನ್ನು ಕಳ್ಳರು ಅಪಹರಿಸಿದ್ದರು. ಈ ಬಗ್ಗೆ ಮಂಗೇಶ ಮಾಮಲೇಶಪ್ಪ ಲಮಾಣಿ ಅವರು ಲಕ್ಷ್ಮೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತಕ್ಷಣವೇ ತನಿಖೆ ಕೈಗೊಂಡ ಪೊಲೀಸರು ಜುಲೈ 17 ರಂದು ಎ1 ಮತ್ತು ಎ2 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆಯ ವೇಳೆ, ಆರೋಪಿತರಿಂದ ಮಹತ್ವದ ತನಿಖಾ ಮಾಹಿತಿ ಹೊರಬಿದ್ದಿದೆ. ಲಕ್ಷ್ಮೇಶ್ವರ, ಶಿರಹಟ್ಟಿ, ಮುಳಗುಂದ ಮತ್ತು ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಹಾಗೂ ಮೋಟಾರ್ ಸೈಕಲ್ ಕಳ್ಳತನಗಳಲ್ಲಿ ಈ ಆರೋಪಿಗಳು ತೊಡಗಿರುವುದು ದೃಢಪಟ್ಟಿದೆ.
ಪೊಲೀಸರು ಆರೋಪಿತರಿಂದ ಒಟ್ಟು ₹14.5 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ, ಇದರಲ್ಲಿ:
122.5 ಗ್ರಾಂ ಬಂಗಾರದ ಆಭರಣಗಳು (ಅಂದಾಜು ₹12 ಲಕ್ಷ ಮೌಲ್ಯ)
150 ಗ್ರಾಂ ಬೆಳ್ಳಿಯ ಆಭರಣಗಳು (₹20,000 ಮೌಲ್ಯ)
4 ಮೋಟಾರ್ ಸೈಕಲ್‌ಗಳು — ಒಂದು ಹೊಂಡಾ ಶೈನ್, ಎರಡು ಬಜಾಜ್ ಪಲ್ಸರ್‌ಗಳು, ಹಾಗೂ ಒಂದು ಹಿರೋ ಎಚ್.ಎಫ್. ಡಿಲಕ್ಸ್ ಬೈಕ್
2 ಲ್ಯಾಪ್ಟಾಪ್‌ಗಳು (₹28,000 ಮೌಲ್ಯ)
2 ಮೊಬೈಲ್ ಫೋನ್‌ಗಳು (₹2,000 ಮೌಲ್ಯ)
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ಪೊಲೀಸ್ ಅಧಿಕಾರಿಗಳಿಗೆ ಶ್ಲಾಘನೆ ವ್ಯಕ್ತಪಡಿಸಿದ್ದು, ಅವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಎಸ್ಪಿ ರೋಹನ್ ಜಗದೀಶ್ ಘೋಷಿಸಿದರು.
ಇಲ್ಲಿಯವರೆಗೆ ಪರಾರಿಯಾಗಿರುವ ಮೂರನೇ ಆರೋಪಿಯ ಶೋಧ ಮುಂದುವರೆದಿದ್ದು, ಶೀಘ್ರದಲ್ಲೇ ಬಂಧನವಾಗಲಿರುವ ಸಾಧ್ಯತೆ ಇದೆ ಎಂದು ಪೊಲೀಸರವರು ಭರವಸೆ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ತನಿಖೆ ಮತ್ತು ಬಂಧನ:
ಈ ಎರಡೂ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಎಸ್ಪಿ ರೋಹನ್ ಜಗದೀಶ್, ಡಿ.ಎಸ್.ಪಿ. ಮಹಾಂತೇಶ ಸಜ್ಜನ ಹಾಗೂ ಡಿ.ಎಸ್.ಪಿ. ಮುರ್ತುಜಾ ಖಾದ್ರಿ ಅವರ ಮಾರ್ಗದರ್ಶನದಲ್ಲಿ, ಶಿರಹಟ್ಟಿ ವೃತ್ತದ ಸಿಪಿಐ ನಾಗರಾಜ ಮಾಡಳ್ಳಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿದರು. ಆರೋಪಿತರ ಪತ್ತೆಗಾಗಿ ಪರಿಶ್ರಮದಿಂದ ತನಿಖೆ ನಡೆಸಿದ ತಂಡ, ಇಬ್ಬರನ್ನು ಜುಲೈ 17 ರಂದು ಬಂಧಿಸಲು ಯಶಸ್ವಿಯಾಯಿತು. ಬಂಧಿತ ಆರೋಪಿಗಳು:
- ಜಿ. ಸತೀಶಗೌಡ (35) – ಯರಗೊಪ್ಪಾ, ಬದಾಮಿ, ಬಾಗಲಕೋಟೆ
- ಲಕ್ಷ್ಮಣ ಮೊಡಿಕೇರ (25) – ಬೆಳ್ಳಟ್ಟಿ, ಶಿರಹಟ್ಟಿ, ಗದಗ
ಪರಾರಿ ಆರೋಪಿ:
- ಚಂದ್ರ @ ಕುರಡಚಂದ್ರ – ಹಗರಿಬೊಮ್ಮನಹಳ್ಳಿ, ವಿಜಯನಗರ
ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸೆ:
ಈ ಪ್ರಕರಣ ಭೇದನೆಗೆ ಶ್ರಮಿಸಿದ ಪೊಲೀಸ್ ಸಿಬ್ಬಂದಿಗೆ ಗದಗ ಜಿಲ್ಲಾ ಎಸ್ಪಿ ರೋಹನ್ ಜಗದೀಶ್ ಅವರು ವಿಶೇಷ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಶಿರಹಟ್ಟಿ ವೃತ್ತದ ಸಿಪಿಐ ನಾಗರಾಜ ಮಾಡಳ್ಳಿ, ಪಿಐ ಸಂಗಮೇಶ ಶಿವಯೋಗಿ, ಪಿಎಸ್‌ಐ ಟಿ.ಕೆ.ರಾಠೋಡ, ಪಿಎಸ್‌ಐ ಚನ್ನಯ್ಯ ದೇವೂರ, ಪಿಎಸ್‌ಐ ನಾಗರಾಜ ಗಡದ, ಪಿಎಸ್‌ಐ ಶೇಖರ ಕಡಬಿನ ಹಾಗೂ ಹಲವು ಪೊಲೀಸ್ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.