ಬಾಗಲಕೋಟೆ, ಜುಲೈ 19:
ಇತ್ತೀಚೆಗೆ ಪಂಚಮಸಾಲಿ ಪೀಠದ ಬೀಗ ವಿವಾದದ ಹಿನ್ನಲೆಯಲ್ಲಿ ಮಾನಸಿಕ ಆಘಾತಕ್ಕೊಳಗಾಗಿದ್ದ ಕೂಡಲಸಂಗಮ ಪಂಚಮಸಾಲಿ ಪೀಠದ ಅಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿ ಇಂದು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ತಲೆನೋವು, ವಾಂತಿ ಮತ್ತು ಎದೆನೋವು ಕಾಣಿಸಿಕೊಂಡ ಹಿನ್ನೆಲೆ, ಅವರನ್ನು ತುರ್ತು ಚಿಕಿತ್ಸೆಗೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ವಾಮೀಜಿಗಳಿಗೆ ಇಂದು ಬೆಳಿಗ್ಗೆಯೇ ತೀವ್ರ ತಲೆನೋವು ಮತ್ತು ವಾಂತಿಯ ಜೊತೆಗೆ ಎದೆನೋವು ಕೂಡ ಕಾಣಿಸಿಕೊಂಡಿದೆ. ತಕ್ಷಣ ಅವರ ಶಿಷ್ಯರು ಹಾಗೂ ಭಕ್ತರು ಕ್ರಮ ಕೈಗೊಂಡು ಬಾಗಲಕೋಟೆಯ ಕೆರೂಡಿ ಖಾಸಗಿ ಆಸ್ಪತ್ರೆಗೆ ಸೇರಿಸಿದರು. ತುರ್ತು ನಿಗಾ ಘಟಕದಲ್ಲಿ ವೈದ್ಯಕೀಯ ತಂಡದ ವತಿಯಿಂದ ಪರಿಶೀಲನೆ ನಡೆಯುತ್ತಿದೆ. ಪ್ರಸ್ತುತ ಅವರ ಸ್ಥಿತಿ ಸ್ಥಿರವಾಗಿದ್ದು, ಭಕ್ತರು ಭಯ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಪೀಠಕ್ಕೆ ಬೀಗ – ಭಾವನಾತ್ಮಕ ಪತನಕ್ಕೆ ಕಾರಣ?
ಇತ್ತೀಚೆಗೆ ಪಂಚಮಸಾಲಿ ಪೀಠದ ಪ್ರವೇಶದ್ವಾರಕ್ಕೆ ಬೀಗ ಹಾಕಲಾಗಿತ್ತು ಎಂಬ ವಿಷಯ ರಾಜ್ಯದಾದ್ಯಂತ ಸಂಚಲನ ಎಳೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಸ್ವಾಮೀಜಿಗಳು ಬಹಳಷ್ಟು ನೊಂದಿದ್ದು, ಮುಖಂಡರ ಎದುರಲ್ಲೇ ಕಣ್ಣೀರು ಹಾಕಿದ್ದರು. ಭಕ್ತ ಸಮಾಜದಲ್ಲಿ ಭಾರೀ ಪ್ರತಿಧ್ವನಿ ಮೂಡಿಸಿತ್ತು. “ಪೀಠಕ್ಕೆ ಹಾಕಿದ್ದ ಬೀಗವನ್ನ ನನ್ನ ಭಕ್ತರು ಒಡೆದಿದ್ದಾರೆ ಅಂತ ವಿನಾಕಾರಣ ಕೇಸ್ ಹಾಕಿಸಿದ್ದಾರೆ ಎಂದು ಸ್ವಾಮಿಜಿ ನೊಂದುಕೊಂಡಿದ್ದರು. ಇದರಿಂದ ಭಕ್ತ ಸಮುದಾಯವೇ ಹಿಂಸಿತವಾಗಿದೆ,” ಎಂದು ಅವರು ದುಃಖವ್ಯಕ್ತಪಡಿಸಿದ್ದರು.
“ಶ್ರೀಗಳು ಚೇತರಿಸುತ್ತಿದ್ದಾರೆ, ಆತಂಕ ಬೇಡ” – ಮಲ್ಲನಗೌಡ ಪಾಟೀಲ್
ಕಲಬುರಗಿ ಪಂಚಮಸಾಲಿ ಸಂಘದ ಜಿಲ್ಲಾಧ್ಯಕ್ಷ ಮಲ್ಲನಗೌಡ ಪಾಟೀಲ್ ಅವರು ಸ್ಪಷ್ಟನೆ ನೀಡುತ್ತಾ, “ನಿನ್ನೆ ಶ್ರೀಗಳಿಗೆ ಫುಡ್ ಪಾಯಿಸನಿಂಗ್ ಆಗಿತ್ತು. ವೈದ್ಯರ ಸಲಹೆಯಂತೆ ಮಾತ್ರೆ ತೆಗೆದುಕೊಂಡಿದ್ದರು. ತಕ್ಷಣದ ಚಿಕಿತ್ಸೆಯಿಂದ ರಾತ್ರಿ ಸ್ವಲ್ಪ ಚೇತರಿಸಿಕೊಂಡರು. ಆದರೆ ಇಂದು ಬೆಳಿಗ್ಗೆ ಪುನಃ ತಲೆನೋವು, ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ಕರೆತರಲಾಯಿತು. ಸದ್ಯ ಅವರು ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಭಕ್ತ ಸಮುದಾಯದಲ್ಲಿ ಗೊಂದಲ ಉಂಟಾಗುವ ಅಗತ್ಯವಿಲ್ಲ,” ಎಂದು ತಿಳಿಸಿದರು.
“ಸ್ವಾಮೀಜಿ ಆಸ್ಪತ್ರೆಯಲ್ಲಿದ್ದಾರೆ ಎಂಬುದು ನನಗೆ ತಿಳಿದಿಲ್ಲ” – ಶಾಸಕ ವಿಜಯಾನಂದ ಕಾಶಪ್ಪನವರ್ ಪ್ರತಿಕ್ರಿಯೆ
ಈ ಮಧ್ಯೆ, ಪೀಠದ ವಿಚಾರವಾಗಿ ಹಲವಾರು ಸಲಹೆ ಸೂಚನೆ ನೀಡಿರುವ ಶಾಸಕ ವಿಜಯಾನಂದ ಕಾಶಪ್ಪನವರ್ ಪ್ರತಿಕ್ರಿಯೆ ನೀಡುತ್ತಾ, “ಸ್ವಾಮೀಜಿ ಆಸ್ಪತ್ರೆಯಲ್ಲಿ ಇದ್ದಾರೆ ಎಂಬ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ನಾವು ಮಠವನ್ನು ಧರ್ಮದ ಪ್ರಚಾರ ಹಾಗೂ ಸಮಾಜದ ಏಳಿಗೆಗೆ ನೀಡಿದ್ದೇವೆ. ಅದನ್ನ ಬಿಟ್ಟು ಅವರು ಮನೆ ಮಾಡಿಕೊಂಡು ಓಡಾಡುತ್ತಿರುವದು ಸರಿಯಲ್ಲ” ಎಂದು ತೀವ್ರವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.