ಗದಗ, ಜುಲೈ 18:
ಪ್ರಗತಿಪಥದಲ್ಲಿ ಸಾಗಬೇಕಾದ ಗದಗ ನಗರ, ತನ್ನ ಕೆಲವೇ ಕೆಲವು ಮುಖ್ಯ ರಸ್ತೆಗಳಲ್ಲಿನ ಅವ್ಯವಸ್ಥೆಯಿಂದ ಜನರ ಜೀವದೊಂದಿಗೆ ಆಟವಾಡುತ್ತಿರುವಂತಾಗಿದೆ. ಮುಖ್ಯವಾಗಿ ನಗರದ ವಿಶ್ವ ಹೋಟೆಲ್ ಎದುರಿನ ರಸ್ತೆ – (ಜನರಲ್ ಕಾರ್ಯಪ್ಪ ವೃತ್ತದ ಬಳಿ) ಇರುವ ಪ್ರಮುಖ ಸಂಪರ್ಕ ಮಾರ್ಗದಲ್ಲಿನ ಸ್ಥಳವು, ಬಹಳಷ್ಟು ದಿನಗಳಿಂದ ದೊಡ್ಡ ತಲೆನೋವಾಗಿದೆ. ದಿನದಿಂದ ದಿನಕ್ಕೆ ‘ಅಧಿಕಾರಿಗಳ ನಿರ್ಲಕ್ಷ್ಯ’ ದ ಪರಿಣಾಮ ರಸ್ತೆಯು ಕೊಳೆಗೇರಿ ಮಾರ್ಗವಾಗಿ ಪರಿವರ್ತನೆಯಾಗುತ್ತಿದೆ.
ಈ ಪ್ರದೇಶವು ಗದಗ ನಗರಕ್ಕೆ ಪ್ರವೇಶದ ಮುಖ್ಯ ದ್ವಾರವಾಗಿದ್ದು, ಪ್ರತಿದಿನ ಸಾವಿರಾರು ವಾಹನಗಳು ಈ ಮಾರ್ಗವಾಗಿ ಸಂಚರಿಸುತ್ತವೆ. ಆದರೆ, ಪ್ರತಿ ಬಾರಿ ಹೊಸ ಡಾಂಬರೀಕರಣ ಮಾಡಿದರೂ, ಒಂದೇ ವಾರದೊಳಗೆ ಮತ್ತೆ ರಸ್ತೆ ಕಿತ್ತು ಹೋಗುತ್ತಿದೆ! ಇದೊಂದು ಲಜ್ಜಾಸ್ಪದ ಅವಸ್ಥೆಯಲ್ಲದೆ, ಸಾರ್ವಜನಿಕರ ಸುರಕ್ಷತೆಗೂ ಭೀಕರ ಕನ್ನಡಿ ಹಿಡಿಯುತ್ತಿದೆ.
ಮಳೆ ಬಿದ್ದರೆ ಇದು ರಸ್ತೆ ಎಂದು ಗುರುತಿಸುವುದೇ ಕಷ್ಟ! ನೀರು ತುಂಬಿದ ಹೊಂಡಗಳು, ಡಾಂಬರಿಕರಣ ರಸ್ತೆ ನಡುವೆ ಉಂಟಾಗಿರುವ ಬಿರುಕುಗಳು, ವಾಹನ ಸವಾರರಿಗೆ ಜೀವಕ್ಕೆ ತುತ್ತಾಗುವಂತಹ ಪರಿಸ್ಥಿತಿಯನ್ನೇ ಸೃಷ್ಟಿಸುತ್ತವೆ. ಬೈಕ್ ಸವಾರರು ಗುಂಡಿಯಲ್ಲಿ ಬಿದ್ದು ಕೈ ಕಾಲು ಮುರಿದುಕೊಳ್ಳುವ ಘಟನೆಯು ದಿನನಿತ್ಯ ಸಾಮಾನ್ಯವಾಗಿಬಿಟ್ಟಿದೆ.
“ಎದ್ನೋ ಬಿದ್ನೋ ಅಂತಲೇ ಹೋಗಬೇಕು..”
ಹೌದು, ಸಾರ್ವಜನಿಕರ ಸ್ಥಿತಿ ಅಷ್ಟರ ಮಟ್ಟಿಗೆ ಆಳವಾಗಿದೆ. ಬೇಸಿಗೆ ಕಾಲದಲ್ಲಿ ಈ ಸ್ಥಳವು ಧೂಳಿನ ಪಟದಂತಾಗಿದ್ದು, ಪ್ರಸ್ತುತ ಮಳೆಗಾಲದಲ್ಲಿ ಗುಂಡಿಗಳ ಹೊಂಡವಾಗಿ ಪರಿವರ್ತನೆಗೊಂಡಿದೆ. ವಾಹನ ಸವಾರರು ಪರದಾಟ ಮಾಡಿಕೊಂಡು ಈ ರಸ್ತೆಯನ್ನ ದಾಟೋಕೆ ಹರಸಾಹಸ ಪಡ್ತಿರೋ ದೃಶ್ಯ ಇಂದು ಸಾಮಾನ್ಯವಾಗಿದೆ.
ಅಧಿಕಾರಿಗಳ ಜಾಣಮೌನ – ಪ್ರಶ್ನಿಸಲೇಬೇಕಾದ ಸಂದರ್ಭ!
ಈ ವರೆಗೂ ಕೂಡ ಪಿಡಬ್ಲ್ಯುಡಿ ಇಲಾಖೆ ಅಧಿನದಲ್ಲೇ ರಸ್ತೆ ಮಾಡುತ್ತಾ ಬಂದಿದ್ದು, ಹಲವು ಬಾರಿ ತೇಪೆ ಹಾಕುವ ಕೆಲಸ ನಡೆದಿದೆ. ಆದರೆ ಯಾವತ್ತೂ ಕೂಡ ಶಾಶ್ವತ ಪರಿಹಾರ ಕಂಡು ಬಂದಿಲ್ಲ. ಕೇವಲ ಕಾಗದದ ಮೇಲಿನ ಕಾಮಗಾರಿ ಮತ್ತು ಬಿಲ್ಲುಗಳ ನಿರ್ವಹಣೆಯ ಹೆಸರಿನಲ್ಲಿ ಲಾಭದಾಯಕ ಒಪ್ಪಂದಗಳು ನಡೆಯುತ್ತಿವೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡುತ್ತಿದೆ.
ಏಕೆ ಇಂಥ ರಸ್ತೆಗೆ ಮತ್ತೆ ಮತ್ತೆ ಟೆಂಡರ್ ನೀಡಲಾಗುತ್ತಿದೆ? ಇಷ್ಟು ವರ್ಷದಿಂದ ರಸ್ತೆ ಸಮಸ್ಯೆ ಬಗೆಹರಿಸದೇ ತಪ್ಪಿಸಿಕೊಳ್ಳುತ್ತಿರುವ, ಅಧಿಕಾರಿಗಳ ಮೇಲೆ ಕ್ರಮ ಏಕೆ ಕೈಗೊಂಡಿಲ್ಲ? ಈ ಪ್ರಶ್ನೆಗಳು ಈಗ ಗದಗ-ಬೆಟಗೇರಿ ಜನರ ಆಕ್ರೋಶದ ಮಾತುಗಳಾಗಿವೆ.
“ಒಂದೊಮ್ಮೆ ಅಧಿಕಾರಿಗಳು ತಮ್ಮ ಕಚೇರಿಯಿಂದ ಹೊರಬಂದು, ಈ ರಸ್ತೆ ಮೇಲೆ ಒಂದು ಸುತ್ತು ಹಾಕಿದರೆ ಸಾಕು – ಜನರ ಸಂಕಷ್ಟಗಳು ಎಷ್ಟು ತೀವ್ರವಿದೆ ಎಂಬುದು ಕಂಡುಬರುತ್ತದೆ!” ಎಂದು ಸ್ಥಳೀಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವ್ಯಾಪಾರಿಗಳು ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಮಳೆಗೆ ಚರಂಡಿ ನೀರು ರಸ್ತೆ ಮೇಲೆ ಹರಿದು ಹೊಂಡಗಳಲ್ಲಿ ಶೇಖರವಾಗುತ್ತಿರುವುದರಿಂದ ಜನರು ಅಂಗಡಿಗಳಿಗೆ ಬರೋದೇ ಕಡಿಮೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗದಗ ನಗರ ಅಭಿವೃದ್ಧಿಯ ಹೆಸರಿನಲ್ಲಿ ಕಾಗದದ ಯೋಜನೆಗಳಾಗುತ್ತಿವೆಯಾ ಅನ್ನೋ ಪ್ರಶ್ನೆ ಹುಟ್ಟುಹಾಕಿದೆ,ಇತ್ತ ನೆಲದ ಮೇಲಿನ ಸ್ಥಿತಿಗತಿಯೂ ಸಂಪೂರ್ಣ ಭಿನ್ನವಾಗಿದೆ. ಇಂತಹ ಪ್ರಮುಖ ಸ್ಥಳದಲ್ಲಿನ ರಸ್ತೆ ಸಮಸ್ಯೆಯೊಂದನ್ನ ಪರಿಹರಿಸಲು ಇನ್ನೂ ಎಷ್ಟು ದಿನ ಬೇಕು? ಎಂದು ಜನತೆ ಪ್ರಶ್ನಿಸುತ್ತಿದ್ದಾರೆ.
ಇನ್ನಾದರೂ ಸಮಸ್ಯೆಗೆ ತಕ್ಷಣ ಸ್ಪಂದಿಸದಿದ್ದರೆ, ಸಾರ್ವಜನಿಕರು ಆಕ್ರೋಶದ ಹೋರಾಟಕ್ಕಿಳಿಯಬೇಕಾದ ಅನಿವಾರ್ಯತೆ ಇದೆ. ಪಿಡಬ್ಲ್ಯುಡಿ, ನಗರಸಭೆ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಈ ರಸ್ತೆ ಸಮಸ್ಯೆಗೆ ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಶಾಶ್ವತ ಪರಿಹಾರ ನೀಡುವುದು ತಮ್ಮ ಕಳಪೆ ಕಾರ್ಯನಿರ್ವಹಣೆಯ ಕ್ಷಮಾಪಣೆಯಷ್ಟೇ ಅಲ್ಲ, ಸಾಮಾಜಿಕ ಹೊಣೆಗಾರಿಕೆಯ ಅವಶ್ಯಕತೆಯೂ ಹೌದು.
ಗದಗ ಜಿಲ್ಲೆಯಾದ್ಯಂತ ನಿನ್ನೆ ಸಂಜೆಯಿಂದ ನಿರಂತರ ಮಳೆಯಾದ ಪರಿಣಾಮ,ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಹರಸಾಹಸ ಪಟ್ಟಿದ್ದಾರೆ. ತಗ್ಗು ಗುಂಡಿಯಲ್ಲಿ ನೀರು ತುಂಬಿರುವ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದ್ದು, ಅಬ್ಬರದ ಮಳೆಯಿಂದ ರಸ್ತೆ ಹಾಗೂ ಚರಂಡಿ ತುಂಬಿ ಹರಿಯುತ್ತಿವೆ. ಇದೇ ವೇಳೆ ತುಂಬಿ ಹರಿಯುವ ಚರಂಡಿ ಬಳಿ ಬೈಕ್ ಸಿಲುಕಿ ವಾಹನ ಸವಾರನೋರ್ವ ಪರದಾಟ ಅನುಭವಿಸಿದ್ದಾನೆ. ನಂತರ ಸ್ಥಳೀಯರ ಸಹಾಯದಿಂದ ಬೈಕ್ ಸವಾರ ಬಚಾವ್ ಆಗಿದ್ದಾನೆ.
ಕೋಟ್
“ಈ ವೃತ್ತದಲ್ಲಿನ ರಸ್ತೆ ಸಮಸ್ಯೆ ಬಹಳಷ್ಟು ದಿನಗಳಿಂದ ಇದೆ. ಇದಕ್ಕೆ ಕಾರಣ ಪಕ್ಕದಲ್ಲೇ ಎಪಿಎಂಸಿ ಬಯಲು ಜಾಗೆಯಿಂದ ಮಳೆನೀರು ಹರಿದು ಬಂದು ಇಲ್ಲಿ ಶೇಖರಣೆ ಆಗುತ್ತದೆ.ಮೇಲಾಗಿ ಎಪಿಎಂಸಿ ರಸ್ತೆ ಇದಾಗಿರುವದರಿಂದ ದೊಡ್ಡ ದೊಡ್ಡ ಬೃಹತ್ ಗಾತ್ರದ ವಾಹನಗಳು ಇದೇ ರಸ್ತೆ ಮೂಲಕ ಸಂಚರಿಸುತ್ತವೆ. ಅಲ್ಲದೇ ಚರಂಡಿ ನೀರು ಸಹ ಇಳಿಜಾರಿನ ಈ ಸ್ಥಳದಲ್ಲಿ ಓವರ್ಫ್ಲೋ ಆಗಿ ಶೇಖರಣೆ ಆಗುತ್ತಿದೆ. ಇದನ್ನ. ನಗರಸಭೆ ಅಧಿಕಾರಿವರ್ಗ ಸರಿಪಡಿಸಬೇಕು.ಈ ಎಲ್ಲಾ ಸಮಸ್ಯೆಗಳಿಂದ ಎಷ್ಟೇ ಬಾರಿ ರಸ್ತೆಗೆ ಡಾಂಬರೀಕರಣ ಮಾಡಿದರೂ ಡಾಂಬರ್ ನಿಲ್ಲುತ್ತಿಲ್ಲ. ಹೀಗಾಗಿ ಶಾಶ್ವತವಾಗಿ ಇಲ್ಲಿ ಸುಮಾರು 80 ಮೀಟರ್ ನಷ್ಟು ಕಾಂಕ್ರೀಟ್ ಹಾಕಲು ಟೆಂಡರ್ ಕರೆಯಲಾಗಿದ್ದು, ಬರುವ ನಾಲ್ಕೈದು ತಿಂಗಳಲ್ಲಿ, ಕೆಲಸ ಪ್ರಾರಂಭಿಸಲಾಗುವದು.”
:-ವಿ.ಎನ್.ಪಾಟೀಲ.
ಎಕ್ಸಿಕ್ಯೂಟಿವ್ ಇಂಜನೀಯರ್.PWD
:-ಕಿರಣ್. ಎಇ.PWD