ಗದಗ: ಬಳ್ಳಾರಿ ಜಿಲ್ಲೆ, ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ ಬೆಡಗಿನ ಗ್ರಾಮೀಣ ಹಿನ್ನೆಲೆಯೊಂದರಿಂದ ಹೊರಬಂದ ಮಲ್ಲಿಕಾರ್ಜುನ ಹೂಗಾರ್ ಅವರು, ಇಂದು ದೇಶದ ಅತಿದೊಡ್ಡ ವೃತ್ತಿಪರ ಲೆಕ್ಕಪರಿಶೋಧನಾ ಪರೀಕ್ಷೆಯಾಗಿರುವ “ಚಾರ್ಟೆಡ್ ಅಕೌಂಟೆಂಟ್ (ಸಿಎ)” ಪರೀಕ್ಷೆಯಲ್ಲಿ ಮೇ 2025ರ ಪ್ರಯತ್ನದಲ್ಲಿ ಯಶಸ್ವಿಯಾಗಿ ಪಾಸಾಗಿ ತಮ್ಮ ಕುಟುಂಬ, ಗುರುವೃಂದ ಮತ್ತು ಗ್ರಾಮಸ್ಥರ ಹೆಮ್ಮೆಗೂಡಿಸಿದ್ದಾರೆ.
ಮಲ್ಲಿಕಾರ್ಜುನ ಹೂಗಾರ್ ಅವರು ಬಸಪ್ಪ ಹಾಗೂ ಮಹಾಲಕ್ಷ್ಮಿ ದಂಪತಿಯ ಪುತ್ರ. ಮುಂಗಾರಿನ ಹಕ್ಕಿಯಂತೆ ಪ್ರತಿಭೆಯ ಚಿಲಿಪಿಲಿಯಿಂದ ಎದ್ದು ಬಂದ ಮಲ್ಲಿಕಾರ್ಜುನ ಅವರು, 2008ರ ಜೂನ್ 19ರಂದು ಗದುಗಿನ ಪ್ರಸಿದ್ಧ ಶ್ರೀ ವೀರೇಶ್ವರ ಪುಣ್ಯಶ್ರಮದಲ್ಲಿ ಸಂಗೀತ ಶಿಕ್ಷಣಕ್ಕಾಗಿ ಪ್ರವೇಶ ಪಡೆದರು. ಕೇವಲ ವಿದ್ಯಾಭ್ಯಾಸವಲ್ಲ, ಸಂಸ್ಕಾರ ಹಾಗೂ ಆದರ್ಶ ಜೀವನಶೈಲಿಯ ಘಟ್ಟವೊಂದಕ್ಕೆ ಈ ಪ್ರವೇಶ ದಾರಿ ಮಾಡಿಕೊಟ್ಟಿತು.
ಪಿಪಿಜಿ ಪ್ರೌಢಶಾಲೆಯಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಇವರು, ನಂತರ ಗದುಗಿನ ಕೆ ವಿ ಎಸ್ ಆರ್ ಮಹಾವಿದ್ಯಾಲಯದಲ್ಲಿ ವಾಣಿಜ್ಯ ವಿಭಾಗದ ಪಿ.ಯು.ಸಿ ಶಿಕ್ಷಣ ಪಡೆದು, ಅದಾನಂತರ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ವಾಣಿಜ್ಯ ಪದವಿ (ಬಿಕಾಂ) ಪಡೆದರು. ಈ ಹಂತವರೆಗೆ ಅವರ ಶಿಕ್ಷಣ ಸಾಧನೆಯು ನಿರಂತರ ಪ್ರಗತಿ ಮಾರ್ಗದಲ್ಲಿತ್ತು.
2016ರಲ್ಲಿ, ತಮ್ಮ ವೃತ್ತಿಜೀವನವನ್ನು ಒಂದು ನೂತನ ತಿರುವಿನಲ್ಲಿ ಸಾಗಿಸಲು ಸಿಎ (CA) ಪದವಿಗಾಗಿ ಉತ್ಸಾಹದಿಂದ ಮುಂದಾದ ಇವರು, ಮುಂದಿನ ಮೂರು ವರ್ಷಗಳ ಕಾಲ ಗದಗಿನ ಎ. ರಾಘವೇಂದ್ರ ರಾವ್ ಅಂಡ್ ಅಸೋಸಿಯೇಟ್ಸ್ ಲೆಕ್ಕಪರಿಶೋಧನ ಸಂಸ್ಥೆಯಲ್ಲಿ, ಶ್ರೀ ಆನಂದ್ ಎಲ್ ಪೋತ್ನಿಸ್ ಅವರ ಮಾರ್ಗದರ್ಶನದಲ್ಲಿ ವೃತ್ತಿಪರ ತರಬೇತಿಯನ್ನು ಪಡೆದರು.
ಆದರೆ ಸಿಎ ಎಂದರೆ ಕೇವಲ ತರಬೇತಿಯಲ್ಲ, ನಿಜವಾದ ತಪಸ್ಸು, ಶ್ರಮ, ಸ್ಥೈರ್ಯ ಮತ್ತು ನಿರಂತರ ಪರಿಶ್ರಮ. ಒಟ್ಟು 9 ವರ್ಷಗಳ ಸುದೀರ್ಘ ಹಾದಿಯಲ್ಲಿ, ಹಲವು ಸವಾಲುಗಳನ್ನು ಎದುರಿಸಿ, ಧೈರ್ಯದಿಂದ ಪರೀಕ್ಷೆಗಳಿಗೆ ಸನ್ನದ್ಧರಾಗಿ, ಕೊನೆಗೆ ಮೇ 2025ರಲ್ಲಿ ನಡೆದ ಅಂತಿಮ ಸಿಎ ಪರೀಕ್ಷೆಯಲ್ಲಿ ಭರವಸೆಯ ಯಶಸ್ಸು ಕಂಡರು.
ಈ ಕುರಿತು ಮಾತನಾಡಿದ ಮಲ್ಲಿಕಾರ್ಜುನ ಹೂಗಾರ್ ಅವರು ಬಹಳ ನಮನದ ಮನೋಭಾವದಿಂದ ಹೇಳಿದರು:
“ನನ್ನ ಈ ಸಾಧನೆಗೆ ದಾರಿದೀಪವಾಗಿ ನಿಂತವರು ನನ್ನ ಗುರು, ಪರಮಪೂಜ್ಯ ಲಿಂ.ಡಾ.ಪಂಡಿತ ಪುಟ್ಟರಾಜ ಗವಾಯಿಗಳು ಹಾಗೂ ಡಾ. ಕಲ್ಲಯ್ಯಜ್ಜನವರು. ಅವರ ಆಶೀರ್ವಾದ, ಆಶ್ರಮದ ಹಿರಿಯ-ಕಿರಿಯ ಗುರುಬಂಧುಗಳ ಪ್ರೋತ್ಸಾಹ, ನನ್ನ ಕುಟುಂಬದ ನಂಬಿಕೆ, ಮತ್ತು ಗೆಳೆಯರ ಬೆಂಬಲವೇ ನನ್ನ ಯಶಸ್ಸಿಗೆ ಆಧಾರ. ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.” ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಈ ಸಾಧನೆ ಮನುಷ್ಯನ ಕನಸುಗಳೆಂತಹ ಶಕ್ತಿ ಹೊಂದಿವೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ಗ್ರಾಮೀಣ ಭಾಗದಿಂದ ಬಂದವರಿಗೂ, ಪ್ರಾಮಾಣಿಕ ಶ್ರಮ ಮತ್ತು ನಂಬಿಕೆಯೊಂದಿಗೆ, ದೇಶದ ಪ್ರಗತಿಗೆ ಪಾತ್ರರಾಗಬಹುದೆಂಬ ಸಂಕೇತ ಈ ಸಾಧನೆ. ಮಲ್ಲಿಕಾರ್ಜುನ ಹೂಗಾರ್ ಅವರ ಈ ಯಶಸ್ಸು ಸಾವಿರಾರು ವಿದ್ಯಾರ್ಥಿಗಳಿಗೆ ಪ್ರೇರಣೆಯ ದೀಪವಾಗಲಿದೆ ಎಂಬುದು ನಿಶ್ಚಿತ.