ಲಕ್ಷ್ಮೇಶ್ವರ, ಜುಲೈ 16:ತಾಲೂಕಿನ ಶೆಟ್ಟಿಕೇರಿ ಹಾಗೂ ಅಕ್ಕಿಗುಂದ ಗ್ರಾಮಗಳ ಮದ್ಯಭಾಗದಲ್ಲಿರುವ ಗುಡ್ಡದ ಮಾಲ್ಕಿ ಜಮೀನಿನಲ್ಲಿ ನಡೆಯುತ್ತಿರುವ ಅಕ್ರಮ ಮಣ್ಣು ಲೂಟಿ ವಿರುದ್ಧ ಸ್ಥಳೀಯ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಟಿಪ್ಪರ್ ಮತ್ತು ಲಾರಿಗಳನ್ನು ತಡೆದು ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರ ಆರೋಪದಂತೆ, ಕೆಲವು ಗುತ್ತಿಗೆದಾರರು ಇಟಾಚಿ ಯಂತ್ರಗಳ ಸಹಾಯದಿಂದ ದಿನದ ಹಗಲು–ರಾತ್ರಿ ಎನ್ನದೆ ಮಾಲ್ಕಿ ಜಮೀನಿನಲ್ಲಿ ಅಕ್ರಮವಾಗಿ ಮಣ್ಣನ್ನು ತೆರವುಗೊಳಿಸುತ್ತಿದ್ದು, ನಿತ್ಯ ನೂರಾರು ಲಾರಿಗಳು ಶೆಟ್ಟಿಕೇರಿಯಿಂದ ಅಕ್ಕಿಗುಂದ ಮಾರ್ಗವಾಗಿ ಗದುಗಿನ ರಸ್ತೆಗೆ ಮಣ್ಣು ಸಾಗಿಸುತ್ತಿವೆ. ಈ ಮೂಲಕ ವ್ಯಾಪಕವಾಗಿ ಅಧಿಕ ಭಾರದ ವಾಹನ ಸಂಚಾರ ನಡೆಯುತ್ತಿದ್ದು, ಗ್ರಾಮೀಣ ರಸ್ತೆ ಬದಿಗಳು ನಾಶವಾಗುತ್ತಿವೆ.
ರಸ್ತೆಯಲ್ಲಿ ಉಂಟಾದ ದೊಡ್ಡ ದೊಡ್ಡ ಗುಂಡಿಗಳು ವಾಹನ ಸಂಚಾರಕ್ಕೆ ತೀವ್ರ ಅಡಚಣೆ ತಂದಿದ್ದು, ಅಪಘಾತ ಸಂಭವಿಸುವ ಭೀತಿಯೂ ಎದುರಾಗಿದೆ. ಶಾಲಾ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರು, ಮಕ್ಕಳು, ವಯಸ್ಕರು ರಸ್ತೆ ದುಸ್ಥಿತಿಯಿಂದ ಸಂಕಷ್ಟ ಅನುಭವಿಸುತ್ತಿರುವುದು ಗ್ರಾಮಸ್ಥರ ಆಕ್ರೋಶದ ಪ್ರಮುಖ ಕಾರಣವಾಗಿದೆ.
ಅಕ್ರಮ ಮಣ್ಣು ಸಾಗಣೆ ಕುರಿತು ಸ್ಥಳೀಯ ಕಂದಾಯ ಇಲಾಖೆ ಮತ್ತು ಜಿಲ್ಲಾ ಆಡಳಿತ ಪುನಪರಿಶೀಲನೆ ನಡೆಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. “ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಣ್ಣು ಸಾಗಣೆ ನಡೆಯುತ್ತಿರುವುದು ನಿರ್ಲಕ್ಷ್ಯದ ಪರಾಕಾಷ್ಠೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು,” ಎಂದು ಗ್ರಾಮಸ್ಥರು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿರುವ ಲಕ್ಷ್ಮೇಶ್ವರದ ತಹಶೀಲ್ದಾರ ಧನಂಜಯ ಅವರು, “ಶೆಟ್ಟಿಕೇರಿ ಮತ್ತು ಅಕ್ಕಿಗುಂದ ನಡುವೆ ಅಕ್ರಮ ಮಣ್ಣು ಸಾಗಿಸುತ್ತಿರುವ ಬಗ್ಗೆ ನನಗೆ ಇಲ್ಲಿಯವರೆಗೆ ಯಾವುದೇ ಮಾಹಿತಿ ಸಿಗಿಲ್ಲ. ಆದರೂ ಅಂಥ ಪ್ರಕರಣಗಳು ನಮ್ಮ ಗಮನಕ್ಕೆ ಬಂದರೆ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ತಿಳಿಸಿದ್ದಾರೆ.
ಸ್ಥಳೀಯ ಜನತೆ ಈ ಕುರಿತು ಅಧಿಕಾರಿಗಳ ತ್ವರಿತ ಕ್ರಮಕ್ಕೆ ನಿರೀಕ್ಷೆಯಲ್ಲಿದ್ದು, ರಸ್ತೆ ಸುಧಾರಣೆ ಹಾಗೂ ಅಕ್ರಮ ಮಣ್ಣು ಸಾಗಣೆಗೆ ಕಡಿವಾಣ ಹಾಕುವಂತೆ ಆಗ್ರಹಿಸುತ್ತಿದ್ದಾರೆ.