ಬೆಂಗಳೂರು, ಜುಲೈ 14:ರಾಜ್ಯದ ಅತಿ ಉದ್ದದ ತೂಗುಸೇತುವೆಯಾದ ಸಿಗಂದೂರು ಸೇತುವೆ ಇಂದು ಲೋಕಾರ್ಪಣೆಯಾಯಿತು. ಆದರೆ ಈ ಮಹತ್ವದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೈರಾಗಿರುವುದಕ್ಕೆ ಸಂಬಂಧಿಸಿದಂತೆ ರಾಜಕೀಯ ವಲಯದಲ್ಲಿ ಚರ್ಚೆ ಜೋರಾಗಿದೆ.
ಸಿದ್ದರಾಮಯ್ಯ ಅವರಿಗೆ ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿಲ್ಲ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ತಮ್ಮ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಜುಲೈ 11 ರಂದು ಪತ್ರ ಮೂಲಕ ಅಧಿಕೃತ ಆಹ್ವಾನ ನೀಡಲಾಗಿದ್ದು, ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನೂ ವಹಿಸಬೇಕು ಎಂದು ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ.
ಅಲ್ಲದೇ, ಮುಖ್ಯಮಂತ್ರಿ ಅವರಿಗೆ ಜುಲೈ 12ರಂದು ಮತ್ತೊಂದು ಪತ್ರ ಬರೆದು, ಉದ್ಘಾಟನಾ ಸಮಾರಂಭದಲ್ಲಿ ಭೌತಿಕವಾಗಿ ಭಾಗವಹಿಸಲು ಸಾಧ್ಯವಾಗದಿದ್ದರೆ, ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿರುವುದನ್ನೂ ಗಡ್ಕರಿ ತಿಳಿಸಿದ್ದಾರೆ.
“ಶಿಷ್ಟಾಚಾರದ ಪಾಲನೆ ಮಾಡಿದ್ದೇವೆ”
ಈ ಕುರಿತು ಮಾತನಾಡಿದ ನಿತಿನ್ ಗಡ್ಕರಿ, “ಕೇಂದ್ರ ಸರ್ಕಾರ ಸದಾ ಶಿಷ್ಟಾಚಾರಗಳನ್ನು ಎತ್ತಿಹಿಡಿದಿದೆ. ಯಾವುದೇ ರೀತಿಯಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ. ಮುಖ್ಯಮಂತ್ರಿಯವರ ಕೊಡುಗೆಗಳು ಮತ್ತು ಸಹಕಾರವು ಸದಾ ಶ್ಲಾಘನೀಯ. ನಾವು ಎಲ್ಲ ರಾಜ್ಯಗಳೊಂದಿಗೆ ಸಹಕಾರದ ಮನೋಭಾವದಿಂದ ಕೆಲಸ ಮಾಡುತ್ತೇವೆ,” ಎಂದು ತಿಳಿಸಿದ್ದಾರೆ.