ಲಕ್ಷ್ಮೇಶ್ವರ: ಹವಾಮಾನ ವೈಪರಿತ್ಯದಿಂದ ಮುಂಗಾರು ಹಂಗಾಮಿನ ಪ್ರಮುಖ ಬೆಳೆ ಹೆಸರು ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿದ್ದು, ತಾಲ್ಲೂಕಿನ ರೈತ ಸಮುದಾಯದಲ್ಲಿ ಆತಂಕ ಮೂಡಿಸಿದೆ.
ಲಕ್ಷ್ಮೇಶ್ವರ ಸುದ್ದಿ: ಪರಮೇಶ ಎಸ್ ಲಮಾಣಿ.
ಕಳೆದ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ ಕೊರತೆಯಿಂದ ತತ್ತರಿಸಿದ್ದ ರೈತರು ಪ್ರಸಕ್ತ ವರ್ಷ ಮುಂಗಾರು ಪೂರ್ವ ಮಳೆಯ ಜೊತೆಗೆ ಮುಂಗಾರು ಮಳೆ ಉತ್ತಮವಾಗಿ ಸುರಿದ ಪರಿಣಾಮ ತಾಲ್ಲೂಕಿನ ಹೆಚ್ಚಿನ ಪ್ರದೇಶದಲ್ಲಿ ರೈತರು ಖುಷಿಯಿಂದ ಹೆಸರು ಬಿತ್ತನೆ ಮಾಡಿದ್ದರು.
ಆರಂಭದಲ್ಲಿ ಉತ್ತಮ ಮಳೆ ಜೊತಗೆ ಪೂರಕ ವಾತಾವರಣದಿಂದ ಸಮೃದ್ಧವಾಗಿ ಬೆಳೆದಿದ್ದ ಹೆಸರು ಬೆಳೆಗೆ ಹೂವು ಮತ್ತು ಕಾಯಿ ಬಿಡುವ ಹಂತದಲ್ಲಿ ಹಳದಿ ರೋಗ ತಗುಲಿದ್ದು, ಬೆಳೆಯ ಬೆಳವಣಿಗೆ ಜೊತೆಗೆ ಇಳುವರಿಯ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ರೈತ ಸಮುದಾಯಯಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಪಟ್ಟಣವು ಸೇರಿದಂತೆ ತಾಲ್ಲೂಕಿನ ಆದ್ರಳ್ಳಿ, ನಾದಿಗಟ್ಟಿ, ಹರದಗಟ್ಟಿ, ಉಳ್ಳಟ್ಟಿ , ಮುನಿಯಾನತಾಂಡಾ, ಸೋಗಿವಾಳ, ನೆಲೊಗಲ್ ಗ್ರಾಮ ಸೇರಿದಂತೆ ಇತರ ಪ್ರದೇಶಗಳಲ್ಲಿನ ಹೆಸರು ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿದೆ.
ಔಷಧಿ ಸಿಂಪಡನೆ ಮಾಡಿದರೂ ಹಳದಿ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಹೆಸರು ಬೆಳೆಗೆ ಹಾಕಿದ ಬಂಡವಾಳ ವಾಪಸ್ ಬರುವುದೊ, ಇಲ್ಲವೊ ಎನ್ನುವ ಚಿಂತಿ ಕಾಡುತ್ತಿದೆ ಎಂದು ಆದ್ರಳ್ಳಿ ಗ್ರಾಮದ ರೈತ ಇಬ್ರಾಹಿಂ ಅಳಲು ತೋಡಿಕೊಂಡರು.
ಇಳುವರಿ ಕುಂಠಿತವಾಗುವ ಭೀತಿ
ನಿಗದಿತ ಸಮಯಕ್ಕೆ ಮುಂಗಾರು ಮಳೆ ಸುರಿದಿದ್ದರಿಂದ ತಾಲ್ಲೂಕಿನಲ್ಲಿ ಅಂದಾಜು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಹೆಸರು ಬಿತ್ತನೆಯಾಗಿದೆ. ಬೆಳೆ ಉತ್ತಮವಾಗಿ ಬಂದಿದ್ದರೂ ಪೂರ್ತಿ ಬೆಳೆಗೆ ತಗುಲಿರುವ ಹಳದಿ ರೋಗ ರೈತರಲ್ಲಿ ಆತಂಕ ಸೃಷ್ಟಿಸಿದೆ. ಅಂದುಕೊಂಡಷ್ಟು ಇಳುವರಿ ಬಾರದ ಸ್ಥಿತಿ ಉಂಟಾಗಿದೆ.
ವಾರದ ಹಿಂದೆ ಆರಂಭವಾದ ರೋಗಬಾಧೆ ಈಗ ಹೊಲದ ತುಂಬೆಲ್ಲಾ ವ್ಯಾಪಿಸಿದ್ದರಿಂದ ನಿಯಂತ್ರಣ ಅಸಾಧ್ಯವಾಗಿದೆ. ಗಿಡಗಳು ಹಳದಿಯಾಗುವುದು ರೋಗವೆನಿಸಿದರೂ ಇದು ವೈರಸ್ ನಿಂದ ಹರಡುತ್ತದೆ ಎಂದು ತಜ್ಞರು ಹೇಳುತ್ತಾರೆ.
ಕೋಟ್:
ಹಳದಿ ರೋಗಕ್ಕೆ ಹುಳು-ಕೀಟ ವೈಟ್ ಪ್ಲೇ (ಬಿಳಿನೊಣ) ಕಾರಣವಾಗಿದ್ದು, ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಹೋಗಿ ರಸ ಹೀರುವುದರಿಂದ ಈ ವೈರಾಣು ಗಿಡದಿಂದ ಗಿಡಕ್ಕೆ ಹರಡುತ್ತದೆ. ರೋಗಬಾಧೆಗೆ ತುತ್ತಾದ ಗಿಡದ ಎಲೆಗಳು ಮತ್ತು ಭಾಗವನ್ನು ಕತ್ತರಿಸಿ ಮಣ್ಣಿನಲ್ಲಿ ಹೂತು ಹಾಕಬೇಕು. ಆಗ ಕೀಟ ನಿಯಂತ್ರಣ ಸಾಧ್ಯ ಎನ್ನುತ್ತಾರೆ ,
ಚಂದ್ರಶೇಖರ ನರಸಮ್ಮನ್ನವರ್, ತಾಲೂಕಾ ಅಧಿಕಾರಿಗಳು ಕೃಷಿ ಇಲಾಖೆ ಲಕ್ಷ್ಮೇಶ್ವರ.
ಕೋಟ್ :
ಈ ಬಾರಿ ಮುಂಗಾರು ಮಳೆ ಉತ್ತಮ ಆಗಿದ್ದರಿಂದ ಮೆಕ್ಕೆಜೋಳ ಸೇತಿದಂತೆ ತಾಲೂಕಿನಯಾದ್ಯಂತ ಹೆಸರು ಬೆಳೆ ಬೆಳೆದಿದ್ದು, ಹಲದಿ ರೋಗಕ್ಕೆ ತುತ್ತಾಗಿದೆ. ಸಾಲ ಮಾಡಿ ಬಿತ್ತನೆ ಮಾಡಿದ್ದು ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಇಬ್ರಾಹೀಂ, ರೈತ