ಗದಗ:ತನ್ನಲ್ಲಿರುವ ಜ್ಞಾನವನ್ನೆಲ್ಲ ಶಿಷ್ಯರಿಗೆ ಧಾರೆ ಎರೆಯುವವರೆ ಆದರ್ಶ ಗುರುಗಳು. ಆ ಜ್ಞಾನವನ್ನು ಪಡೆದು ಗುರುವನ್ನೇ ಮಿರಿಸುವಂತ ಪಂಡಿತನಾದರೆ ಅವನೇ ನಿಜವಾದ ಶಿಷ್ಯ. ಇಂತಹ ಶಿಷ್ಯರೆ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಒಳ್ಳೆಯ ಕೊಡುಗೆ ಕೊಡುವಂತ ಸಾಧಕರಾಗುತ್ತಾರೆ ಎಂದು ಕಡಣಿ ಶಾಸ್ತ್ರೀಗಳು ಹೇಳಿದರು.
ಗದಗ ಚಿಕ್ಕಟ್ಟಿ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಗುರುಪೂರ್ಣಿಮೆ ನಿಮಿತ್ಯ ಅಕ್ಷರಭ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳಿಗೆ ಅಕ್ಷರಭ್ಯಾಸದೊಂದಿಗೆ ಸತ್ಯದರ್ಶನವನ್ನು ಮಾಡಿಸುವಾತನೆ ಗುರು.ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇನಮಃ ಎನ್ನುವಂತೆ ದೇವರುಗಳ ನಂತರ ಮೊದಲು ಬರುವವನೆ ಗುರು, ಗುರುವಿನ ವ್ಯಾಪ್ತಿ ಬಹಳ ದೊಡ್ಡದಿದೆ. ಇಂತಹ ಮೇಧಾವಿ ಗುರುಗಳಿಂದ ಮಕ್ಕಳಿಗೆ ಕಲಿಕೆಯ ಮೊದಲದಿನ ಅಕ್ಷರಭ್ಯಾಸ ಮಾಡಿಸುತ್ತಾರೆ. ಎಲ್ಲರಿಗೂ ಗೊತ್ತಿರುವ ನಾಣ್ಣುಡಿಯಂತೆ ಮನೆಯೇ ಮೊದಲ ಪಾಠ ಶಾಲೆ, ಜನನಿಯೇ ಮೊದಲ ಗುರು ನಂತರದ ಸ್ಥಾನವೇ ಗುರುವಿನದು ಎಂದು ನಮ್ಮ ಹಿರಿಯರು ಹೇಳುವರು. ತಾಯಿ ತನ್ನ ಮಗುವು ಹುಟ್ಟಿದಾಗಿನಿಂದ ಹಿಡಿದು ಮಗುವನ್ನು ಶಾಲೆಗೆ ಸೇರಿಸುವವರೆಗೂ ಸರಿ ಸುಮಾರು ನಲವತ್ತು ಸಾವಿರ ಶಬ್ದಗಳನ್ನು ಕಲಿಸಿರುತ್ತಾಳೆ. ಹಾಗೆಯೇ “ಹರ ಮುನಿದರೂ ಗುರು ಕಾಯುವನು” ಎಂಬ ನಾಣ್ಣುಡಿಯಂತೆ ಪರಮ ಶಕ್ತನಾದ ಶಿವನು ಒಂದು ಸಲ ಸಿಟ್ಟಾಗಬಹುದು ಆದರೆ ಗುರುಗಳು ಎಂದೂ ಸಿಟ್ಟಾಗದೇ ಸಹನೆಯಿಂದ ತಿಳಿಸಿ ಹೇಳುವವ ದೈವಿ ಸ್ವರೂಪರಾಗಿರುತ್ತಾರೆ ಎಮದು ಹೇಳಿದರು.
ಅಧ್ಯಕ್ಷರಾದ ಪ್ರೊ. ಎಸ್. ವಾಯ್. ಚಿಕ್ಕಟ್ಟಿಯವರು ಈ ವೇಳೆ ಮಾತನಾಡಿ, ಜ್ಞಾನದ ಅದಿದೇವತೆಯಾದ ಸರಸ್ವತಿಯ ಆಶೀರ್ವಾದದಿಂದ ವಿದ್ಯೆ ಆರಂಭಿಸುವ ಧಾರ್ಮಿಕ ಪ್ರಕ್ರಿಯೆಯೇ ಅಕ್ಷರಭ್ಯಾಸ. ಈ ವಿದ್ಯಾರಂಭವನ್ನು ಗುರುಪೂರ್ಣಿಮೆಯ ಸುದಿನದಂದು ಹಮ್ಮಿಕೊಳ್ಳಲಾಗಿದೆ. ಇಂತಹ ಉತ್ತಮವಾದ ದಿನದಂದು ಅಕ್ಷರಭ್ಯಾಸ ಮಾಡಿಸಿದರೆ ಮಕ್ಕಳು ಹೆಚ್ಚು ಜ್ಞಾನವಂತರಾಗಿ ಉದ್ಯೋಗ ರಂಗದಲ್ಲಿಯೂ ಉನ್ನತ ಹುದ್ದೆಗಳನ್ನು ಪಡೆಯುತ್ತಾರೆ ಎಂಬ ನಂಬಿಕೆಯಿದೆ ಎಂದರು.
ಅಕ್ಷರಭ್ಯಾಸ ಮಾಡಿಸಲು ಆಗಮಿಸಿದಂತ ಶ್ರೀ ಚೆನ್ನಬಸಯ್ಯ ಹೇಮಗಿರಿಮಠಶಾಸ್ತ್ರೀ ಅವರು ಪ್ರಾರಂಭದಲ್ಲಿ ಮಂತ್ರ ಪಠಣದೊಂದಿಗೆ ಸರಸ್ವತಿಯ ಪೂಜೆ ಮಾಡಿ ನಂತರ ಎಲ್ಲ ತಾಯಂದಿರು ತಮ್ಮ ಮಕ್ಕಳಿಗೆ ಗುರುಗಳ ಮಾರ್ಗದರ್ಶನದಂತೆ ಅಕ್ಷತೆಯಲ್ಲಿ ‘ಓಂ’ಎಂದು ಬರೆಯಿಸುವ ಮೂಲಕ ಅಕ್ಷರಭ್ಯಾಸ ಮಾಡಿಸಿ ಮಕ್ಕಳಿಗೆ ಶುಭ ಕೋರಿದರು.
ಅಕ್ಷರಭ್ಯಾಸ ಮಾಡಿಸಲು ಅತಿಥಿಗಳಾಗಿ ಆಗಮಿಸಿದ ಶ್ರೀ ಚೆನ್ನಬಸಯ್ಯ ಹೇಮಗಿರಿಮಠಶಾಸ್ತ್ರೀ ಅವರನ್ನು ಚಿಕ್ಕಟ್ಟಿ ಸಂಸ್ಥೆಯ ವತಿಯಿಂದ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.
ಗುರುಗಳಿಗೆ ನಮನ ಸಲ್ಲಿಸುವ ಹಾಡಿಗೆ ಮಕ್ಕಳು ನೃತ್ಯ ಮಾಡಿದರು.
ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಶಿಕ್ಷಕಿಯರಾದ ಶ್ರೀಮತಿ ಅನಿತಾ ಪಾಲಿವಾಲ ಅವರು ನೆರವೇರಿಸಿದರು. ಮುಖ್ಯೋಪಾಧ್ಯಾಯನಿಯರಾದ ಶ್ರೀಮತಿ ಶೋಭಾ ಭಟ್, ಶ್ರೀಮತಿ ಪುಷ್ಪಲತಾ ಬೆಲೇರಿ ಹಾಗೂ ಸರ್ವ ಶಿಕ್ಷಕಿಯರು ಉಪಸ್ಥಿತರಿದ್ದರು.