ಗದಗ:ವಿದ್ಯಾರ್ಥಿಗಳು ಚಲನಚಿತ್ರ ನಟರನ್ನು ಅನುಕರಣೆ ಮಾಡ್ತಾ, ಅವರಂತಾಗದೆ ಮಹಾನ್ ಸಾಧಕರಾದ ಸಂತ ಶ್ರೇಷ್ಠರೆಂದೆನಿಸಿದ ಸ್ವಾಮಿ ವಿವೇಕಾನಂದರನ್ನು ಅವರ ಗುರುಗಳಾದ ಶ್ರೀ ರಾಮಕೃಷ್ಣ ಪರಮಹಂಸರನ್ನು ಮಾದರಿಯನ್ನಾಗಿಟ್ಟುಕೊಂಡು ಅವರು ತಿಳಿಸಿಕೊಟ್ಟ ಮಾರ್ಗ ಅನುಸರಿಸುತ್ತ ನಡೆದರೆ ಸಮಾಜವೇ ಗೌರವಿಸುವಂತ ಗೌರವಾನ್ವಿತ ವ್ಯಕ್ತಿಗಳಾಗುತ್ತೀರಿ ಎಂದು ಗದಗನ ವಕೀಲರು ಹಾಗೂ ನರ್ಸಿಂಗ್ ಮತ್ತು ಪಾರ್ಮಸಿ ಕಾಲೇಜಿನ ಅಧ್ಯಕ್ಷರಾದ ಶ್ರೀ ವಿ. ಬಿ. ಹುಬ್ಬಳ್ಳಿಯವರು ಹೇಳಿದರು.
ನಗರದ ಚಿಕ್ಕಟ್ಟಿ ಶಾಲಾ, ಕಾಲೇಜುಗಳಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಧ್ಯಾನ ಮಾಡುವುದರಿಂದ ಮನಸ್ಸನ್ನು ನಿಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಮನಸ್ಸನ್ನು ನಿಯಂತ್ರಣಗೊಳಿಸಿದರೆ ಸಾಧನೆ ಮಾಡಲು ಸಾಧ್ಯ, ನಿಮ್ಮ ಸಾಧನೆಗೆ ಆರೋಗ್ಯವೂ ಬಹುಮುಖ್ಯ.ಜೀವನದಲ್ಲಿ ಹಣ ಕಳೆದುಕೊಂಡರೆ ಮತ್ತೆ ಹತ್ತರಷ್ಟು ಪಡೆಯಬಹುದು ಆದರೆ ಆರೋಗ್ಯ ಕಳೆದುಕೊಂಡರೆ ಮರಳಿ ಪಡೆಯಲು ಸಾಧ್ಯವಿಲ್ಲ. ಮಾನವನ ಆಸೆಗಳಿಗೆ ಮಿತಿಯಿಲ್ಲ.ಆ ಮಿತಿಯಿಲ್ಲದ ಆಸೆಗಳನ್ನ ನಿಯಂತ್ರಣದಲ್ಲಿಡಲು ಯೋಗ, ಧ್ಯಾನ ಮಾಡುವುದು ಅತ್ಯವಶ್ಯಕ ಹಾಗೂ ರೋಗ ನಿರೊಧಕ ಶಕ್ತಿಯನ್ನು ಹೆಚ್ಚಿಸುವುದರೊಂದಿಗೆ ಚೈತನ್ಯಶೀಲರನ್ನಾಗಿರಿಸುತ್ತದೆ.ಬಲಾಡ್ಯವಾದ ದೇಹದೊಳಗೆ ಬಲಾಡ್ಯವಾದ ಮನಸ್ಸಿರುತ್ತದೆ, ನಿಮ್ಮ ಸಾಧನೆಯ ಗುರಿ ದೊಡ್ಡದಾಗಿರಲಿ, ಸಣ್ಣ ಪುಟ್ಟ ಗುರಿಗಳನ್ನು ಇಟ್ಟುಕೊಳ್ಳಬೇಡಿ ಎಂದು ಅಭಿಪ್ರಾಯಪಟ್ಟರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಂಗಳೂರಿನ ಧ್ಯಾನ ಬೋಧಕರಾದ ಶ್ರೀ. ವಿ. ಸುಬ್ರಮಣ್ಯಂ ಅವರು ಗುರುಪೂರ್ಣಿಮೆಯ ಕುರಿತು ಮಾತನಾಡಿ, ಶಿಷ್ಯರಲ್ಲಿರುವ ಅಜ್ಞಾನವೆಂಬ ಕತ್ತಲನ್ನು ಹೋಗಲಾಡಿಸಿ ಸುಜ್ಞಾನದ ಬೆಳಕನ್ನು ನೀಡುವವರೆ ಗುರು. ಧ್ಯಾನವನ್ನು ಐದು ವರ್ಷ ಮೇಲ್ಪಟ್ಟವರೆಲ್ಲರೂ ಯಾವುದೇ ಜಾತಿ, ಬೇಧ-ಭಾವವಿಲ್ಲದೆ ಧ್ಯಾನ ಮಾಡುವುದರಿಂದ ನಮ್ಮಲ್ಲಿರುವ ಒತ್ತಡದ ಭಾವನೆ ದೂರವಾಗಿ ಪ್ರಶಾಂತತೆ ನೆಮ್ಮದಿ ಉಂಟಾಗುತ್ತದೆ.ಈ ಪ್ರಶಾಂತತೆ ನೆಮ್ಮದಿಯಿಂದ ಆರೋಗ್ಯ ಚೆನ್ನಾಗಿರುತ್ತೆ, ಆರೋಗ್ಯ ಚೆನ್ನಾಗಿದ್ರೆ ಆನಂದ ದೊರೆಯುತ್ತೆ,ಹಾಗಾದ್ರೆ ನಾವು ಸದಾ ಹಸನ್ಮುಖಿಗಳಾಗಿ ಆನಂದದಾಯಕರಾಗಿ ಇರಬೇಕಂದ್ರೆ ದಿನನಿತ್ಯ ಧ್ಯಾನ ಮಾಡಬೇಕು. ನೀವು ಎಷ್ಟು ವಯಸ್ಸಿನವರಿದ್ದಿರೋ ಅಷ್ಟು ನಿಮಿಷಗಳವರೆಗೆ ಧ್ಯಾನ ಮಾಡಬೇಕು.ಧ್ಯಾನ ಮಾಡಿದರೆ ಅಪಾರವಾದ ಪ್ರಾಣಮಯ ಶಕ್ತಿ ನಮ್ಮ ಶರೀರದೊಳಗೆ ಬಂದು ನಮ್ಮ ನಾಡಿ ಮಂಡಲವನ್ನು ಶುದ್ಧಿಗೊಳಿಸುತ್ತೆ. ಕೊನೆಯಲ್ಲಿ ಐದು ನಿಮಿಷಗಳವರೆಗೆ ಎಲ್ಲರಿಗೂ ಧ್ಯಾನ ಮಾಡಿಸುವ ಮೂಲಕ ಧ್ಯಾನದಿಂದಾಗುವ ಪ್ರಯೋಜನಗಳನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.
ಗುರುಪೂರ್ಣಿಮೆಯ ಮಹತ್ವದ ಕುರಿತು ಅಧ್ಯಕ್ಷರಾದ ಪ್ರೊ. ಎಸ್. ವಾಯ್. ಚಿಕ್ಕಟ್ಟಿವರು ಮಾತನಾಡಿ, ಈ ದಿನ ನಾವು ನಮ್ಮನ್ನು ಬದಲಾಯಿಸಿಕೊಳ್ಳಲಿರುವ ಒಂದು ಸುದಿನ. ಹಿಂದೂ ಪರಂಪರೆಯ ಶ್ರೇಷ್ಠ ಗುರುಗಳಾದ ಶ್ರೀ ವೇದವ್ಯಾಸ ಮಹರ್ಷಿಗಳ ಜನ್ಮ ದಿನದ ಅಂಗವಾಗಿ ಈ ಗುರು ಪೂರ್ಣಿಮೆಯನ್ನು ಆಚರಿಸುತ್ತಾರೆ. ಶಿಷ್ಯರು ಗುರುಗಳಿಂದ ಪಡೆದ ಜ್ಞಾನದ ಪ್ರತಿಫಲವಾಗಿ ಅವರಿಗೆ ಧನ್ಯವಾದ ಅರ್ಪಿಸುವುದರೊಂದಿಗೆ ಅವರ ಪಾದಕಮಲಗಳಿಗೆ ನಮಿಸಿ ಆಶೀರ್ವಾದವನ್ನು ಪಡೆಯಲು ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ.ಇಂತಹ ಪರಮ ಪವಿತ್ರವಾದ ದಿನದಂದು ಧ್ಯಾನದ ಮಹತ್ವವನ್ನು ಅರಿತು ಗುರುಗಳನ್ನು ಧ್ಯಾನಿಸುವ ಮೂಲಕ ಗುರು ಪೂರ್ಣಿಮೆಯನ್ನು ಆಚರಿಸೋಣ ಎಂದರು.
ಗುರುಪೂರ್ಣಿಮೆ ಕಾರ್ಯಕ್ರಮದ ಉದ್ಘಾಟನೆಯನ್ನು ವೇದಿಕೆಯ ಮೇಲಿರುವ ಗುರು ಹಿರಿಯರು ಜ್ಯೋತಿ ಬೆಳಗಿಸುವ ಮೂಲಕ ನೆರವೇರಿಸಿದರು.
ಗುರುಪೂರ್ಣಿಮೆಯ ಸ್ಮರಣೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಂಗಳೂರಿನ ಪಿರಾಮಿಡ್ ವ್ಯಾಲಿ ಅಂತರಾಷ್ಟ್ರೀಯ ಧ್ಯಾನ ಕೇಂದ್ರದ ಬೋಧಕರಾದ ಶ್ರೀ. ವಿ. ಸುಬ್ರಮಣ್ಯಂ ಹಾಗೂ ಶ್ರೀ. ವಿ. ಬಿ. ಹುಬ್ಬಳ್ಳಿಯವರನ್ನು ಚಿಕ್ಕಟ್ಟಿ ಸಂಸ್ಥೆಯ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗದಗ ಮಾರುತಿ ಬುಕ್ಸ್ಟಾಲ್ನ ಶ್ರೀ ಸುರೇಶ್ ಅಂಗಡಿಯವರು ಶ್ರೀ ಶ್ರೀಧರ ಜವಳಿಯವರು, ಸರ್ಕಾರಿ ಶಾಲೆಯ ಶಿಕ್ಷಕಿಯರಾದ ಶ್ರೀಮತಿ ವಿದ್ಯಾರಾಣಿರವರು ಹಾಗೂ ಶ್ರೀಮತಿ ನೇತ್ರಾವತಿ ಮೆಡಂರವರು, ಉಪ ಪ್ರಾಚಾರ್ಯರಾದ ಶ್ರೀಮತಿ ಶೋಭಾ ಸ್ಥಾವರಮಠ, ಮುಖ್ಯೋಪಾಧ್ಯಾಯನಿಯರಾದ ಶ್ರೀಮತಿ ರಿಯಾನಾ ಮುಲ್ಲಾ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ವಿನಯ್ ಚಿಕ್ಕಟ್ಟಿ ಐ.ಸಿ.ಎಸ್.ಇ. ಶಾಲೆಯ ವಿದ್ಯಾರ್ಥಿನಿಯರಾದ ಆಶ್ವಿ ಜೈನ್, ವೈಷ್ಣವಿ ಡಾವಣಗೇರಿ ಹಾಗೂ ವೈದೃತಿ ಕೋರಿಶೆಟ್ಟರ್ ನಡೆಸಿದರೆ ಪ್ರಾರ್ಥನಾಗೀತೆಯನ್ನು ಸಂಗೀತ ಶಿಕ್ಷಕರಾದ ಶ್ರೀ ರಾಕೇಶ ಕುಲಕರ್ಣಿಯವರು ಹಾಡಿದರು, ಪ್ರಾಚಾರ್ಯರಾದ ಶ್ರೀ ಬಿಪಿನ್ ಎಸ್. ಚಿಕ್ಕಟ್ಟಿಯವರು ಸ್ವಾಗತಕೋರಿದರೆ, ಶ್ರೀಮತಿ ಅರುಂದತಿ ಚರ್ಚಿಲರವರು ವಂದನಾರ್ಪಣೆ ಗೈದರು.