(ಗೌರವ ಡಾಕ್ಟರೇಟ್ ಪದವಿ ನಿಮಿತ್ತ )
ಗದಗ: ಕಿತ್ತು ತಿನ್ನುವ ಬಡತನ ಕಾಂಕ್ರಿಟ್ ಕೆಲಸಕ್ಕೆ ಹೋಗದಿದ್ದರೆ ಬದುಕು ನೂಕುವುದೇ ಕಷ್ಟ ಅಂತಹ ದಿನಮಾನಗಳಲ್ಲಿ ಓದು ಮುಂದುವರಿಸಲು ಹೆಣಗಾಡುತ್ತಿರುವ ದೃಶ್ಯ ಕಣ್ಮುಂದೆ ಕಟ್ಟಿದಂತಿದೆ. ಕಾಲೇಜು ಶುಲ್ಕ ಕಟ್ಟಲು ಕಲ್ಲುಗಳನ್ನು ಹೊರಬೇಕಾದ ಅನಿವಾರ್ಯತೆ ಇತ್ತು.ಕಲ್ಲು ಮಣ್ಣು ಹೊತ್ತು ಬೇರೆಯವರ ಮನೆಗೆ ಸುಣ್ಣ ಬಳಿದು ಕಷ್ಟದಲ್ಲಿಯೇ ವಿದ್ಯಾಭ್ಯಾಸ ಪೊರೈಸಿಕೊಂಡು ತನ್ನದೆಯಾದ ಸಂಸ್ಥೆಯನ್ನು ಹುಟ್ಟು ಹಾಕಿದ ಸಹೃದಯಿ,ಸಂಘಟನಾ ಚತುರ, ಅಂತಃಕರಣದ ಸಿರಿ ಶ್ರೀ ರಮೇಶ ಉಳ್ಳಾಗಡ್ಡಿಯವರು.
” ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು|
ದೊರೆತದು ಹಸಾದವೆಂದುಣ್ಣು ಗೊಣಗಿಡದೆ| ಧರಿಸು
ಲೋಕದ ಭರವ ಪರಮಾರ್ಥವನು ಬಿಡದೆ| ಹೊರಡು
ಕರೆ ಬರಲ್ ಅಳದೆ| ಮಂಕುತಿಮ್ಮ”
ಎನ್ನುವ ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗದಂತೆ ಸರ್ವ ಕೆಲಸಗಳನ್ನು ಅಲ್ಪವಾಗಿ ಕಾಣದೆ ಬದುಕಿನಲ್ಲಿ ಬಂದದ್ದೆಲ್ಲವನ್ನು ಶಿವನ ಪ್ರಸಾದವೆಂದು ಸವಿದು, ಪಾರಮಾರ್ಥದೆಡೆಗೆ ಹೊರಟುನಿಂತವರು, ಅಂಜದೆ,ಅಳುಕದೆ,ಕುಗ್ಗದೆ, ಬಗ್ಗದೆ ಬಾಳಿಗೆ ಬಾಗಿ,ಬಡತನಕ್ಕೆ ಎದುರಾಗಿ ನಿಂತು,ಸಮರ್ಥ ಬದುಕನ್ನು ನಿರ್ಮಿಸಿಕೊಳ್ಳಲು,ಜ್ಞಾನದ ರವಿಕೆ ಉಡಲು, ಸಾವಿರ ಕಷ್ಟದ ಕೆಲಸಗಳನ್ನು ಇಷ್ಟದಿಂದ ಮಾಡಿ,ಓದು ಮುಗಿಸಿದ ಛಲಗಾರ, ಸಂಯಮಿ,ಸ್ನೇಹದ ಝರಿ,ಅಂತ:ಕರಣದ ಗಣಿ ಡಾ.ರಮೇಶ ಉಳ್ಳಾಗಡ್ಡಿಯವರು.
ಶ್ರೀಯುತರು ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ಕರಮುಡಿ ಗ್ರಾಮದ ಕೃಷಿಕರಾದ ಮತ್ತು ಸುಸಂಸ್ಕೃತ ಕುಟುಂಬವಾದ ಉಳ್ಳಾಗಡ್ಡಿ ಮನೆತನದ ಮಲ್ಲೇಶಪ್ಪ ಮತ್ತು ನಾಗಮ್ಮ ರವರ ಸುಪುತ್ರರಾಗಿ ಜನಿಸಿ, ಪ್ರಾಥಮಿಕ ಶಿಕ್ಷಣವನ್ನು ಧಾರವಾಡದ ಸರ್ಕಾರಿ ಶಾಲೆಯಲ್ಲಿ ಪೂರೈಸಿಕೊಂಡರು,ಪ್ರೌಢಶಾಲೆಯನ್ನು ಗದಗದಲ್ಲಿ ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆಯಾಗಿ, ಗದಗದ ಹೆಸರಾಂತ ಕಾಲೇಜ್ ಕೆ.ವಿ ಎಸ್.ಆರ್ ಕಾಲೇಜಿನಲ್ಲಿ ಪದವಿಪೂರ್ವ ಮತ್ತು ಪದವಿ ಶಿಕ್ಷಣ ಪಡೆದು ೧೯೯೯ ರಲ್ಲಿ ಹರಪನಹಳ್ಳಿಯ ಟಿ.ಎಂ.ಇ.ಎಸ್ ಕಾಲೇಜಿನಲ್ಲಿ ಬಿ.ಇಡಿ ಪದವಿಧರರಾಗಿ, ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು.ಬಾಲ್ಯದಲ್ಲಿಯೇ ಪ್ರತಿಭಾವಂತ ವಿದ್ಯಾರ್ಥಿಯಾಗಿ ಎಲ್ಲ ಗುರುಗಳ ಪ್ರೀತಿಗೆ ಪಾತ್ರನಾಗಿ ಬೆಳೆದ ರಮೇಶರವರು, ಬಡತನಕ್ಕೆ ಹಳಬರಾದರು, ಕಾಯಿಪಲ್ಲೆ ಮಾರಿ ಸ್ವಂತ ತಮ್ಮ ಶಾಲಾ ಶುಲ್ಕ ಕಟ್ಟಿ ಓದಿ ದಿಟ್ಟತನದಿಂದ ಹೆಜ್ಜೆ ಹಾಕಿದರು.ಯಾವ ಮುಜುಗರ ಪಡದೆ ದನ ಕಾಯುವ ಕಾಯಕ ಮಾಡಿದರು. ಬೇರೆಯವರ ಮನೆಗೆ ಬಣ್ಣ ಬಳಿದು ಬದುಕನ್ನು ಬಣ್ಣವಾಗಿಸಿಕೊಂಡರು, ಬಾರ್ ಬೆಂಡಿಂಗ್ ಕೆಲಸಕ್ಕೆ ತೆರಳಿ,ನೂರಾರು ತೊಂದರೆಗಳನ್ನು ಪರಿಹರಿಸಿಕೊಂಡು,ಅನೇಕ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುತ್ತಾ ಜ್ಞಾನ ಗಂಗೆಯನ್ನು ಆರೋಹಿಸಿಕೊಂಡ ಆದರ್ಶ ಗೆಳೆಯ, ಪ್ರೀತಿಯ ಅಳಿಯ ರಮೇಶ ಉಳ್ಳಾಗಡ್ಡಿಯವರು.
೧೯೯೯ ರಿಂದ ೨೦೧೦ರ ವರೆಗೆ ಗದಗದ ಬೇರೆ ಬೇರೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಹಾಯಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ ಅಲ್ಪ ಸಂಬಳದಲ್ಲಿಯೇ ತೃಪ್ತಿಯಿಂದ ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆಯನ್ನು ಮಾಡಿ, ಅನೇಕ ಸಂಪನ್ಮೂಲ ವ್ಯಕ್ತಿಗಳನ್ನು ನಾಡಿಗೆ ನೀಡಿದ ಹೆಗ್ಗಳಿಕೆ ಶ್ರೀ ರಮೇಶರವರದು. ಇವರಲ್ಲಿ ಕಲಿತು ಸಾಧನೆಗೈದ ಸಾಕಷ್ಟು ವಿದ್ಯಾರ್ಥಿಗಳು ಇಂದಿಗೂ ಇವರ ಸಂಪರ್ಕದಲ್ಲಿದ್ದು ಮಾರ್ಗದರ್ಶನ ಪಡೆಯುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳ ಬಾಳಿನ ಬೆಳಕಾಗಿ ಅವರು ಉಜ್ವಲ ಬದುಕಿಗೆ ಮಂದಾರದ ದೀವಿಗೆಯಾಗಿ, ಅಚ್ಚಳಿಯದೇ ಅವರ ಮನದಲ್ಲಿ ನೆಲೆಯೂರಿದವರು. ನಾಯಕತ್ವ ಸೇವಾ ಮನೋಭಾವ ವಿದ್ಯಾರ್ಥಿಗಳಿಗೆ ಬಿತ್ತುತ್ತಾ ಗದಗದಲ್ಲಿ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದಲ್ಲಿ ತರಗತಿಗಳನ್ನು ನಡೆಸಿ, ಉತ್ತಮ ಫಲಿತಾಂಶಕ್ಕೆ ಪ್ರೇರಣೆ ನೀಡಿದವರು.
೨೦೧೦ರಲ್ಲಿ ಡಾ.ರಮೇಶರವರು ಖಾಸಗಿ ಸಂಸ್ಥೆಯಲ್ಲಿ ದುಡಿಯುವ ಬದಲು ಸ್ವಂತ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಛಲ ಮೂಡಿಸಿಕೊಂಡು ವಿದ್ಯಾಕಾಶಿ ಧಾರವಾಡಕ್ಕೆ ತೆರಳಿದರು. ಕ್ರಿಯೇಟಿವ್ ಅಕಾಡೆಮಿ ಸ್ಥಾಪಿಸಿ, ಬೇಸಿಗೆ ಮತ್ತು ರೆಗ್ಯೂಲರ್ ತರಗತಿಗಳನ್ನು ನಡೆಸಿದರು. ಕರ್ನಾಟಕದ ನಾನಾ ಭಾಗದಿಂದ ಸಾವಿರಾರು ವಿದ್ಯಾರ್ಥಿಗಳು ಪ್ರವೇಶ ಪಡೆದು ಉತ್ತಮ ಜ್ಞಾನಾರ್ಜನೆಗೆ ದಾರಿ ಮಾಡಿದರು.ಹಿಂದುಳಿದ ಪ್ರದೇಶಗಳಾದ ಕೊಪ್ಪಳ,ಸಿಂಧನೂರು, ಕಲಬುರ್ಗಿ, ಬಳ್ಳಾರಿ, ರಾಯಚೂರು, ಬಾಗಲಕೋಟೆ ಅನೇಕ ಕಡೆಯಿಂದ ಬಂದ ವಿದ್ಯಾರ್ಥಿಗಳಿಗೆ ಉತ್ತಮ ಬೋಧಕರಿಂದ ತರಗತಿಗಳನ್ನು ಕೊಡಿಸಿ,ಊಟ, ಉಪಹಾರ, ವಸತಿ ಮುಂತಾದ ಸಕಲ ಸೌಲಭ್ಯಗಳನ್ನು ಒದಗಿಸಿ, ಅವರ ಜ್ಞಾನಾರ್ಜನೆಗೆ ಪೂರಕ ವಾತಾವರಣವನ್ನು ನಿರ್ಮಿಸುವಲ್ಲಿ ಕಾಳಜಿಯನ್ನು ತೋರಿದರು. ನವೋದಯ ಕೋಚಿಂಗ್ ಸೆಂಟರ್‌ನ್ನು ಸ್ಥಾಪಿಸಿ, ಪ್ರತಿ ವರ್ಷ ವಸತಿ ಶಾಲೆಗಳಾದ ಎಂ.ಡಿ.ಆರ್.ಎಸ್, ಆದರ್ಶ, ರಾಣಿ ಚೆನ್ನಮ್ಮ, ಆಳಿಕೆ,ಸೈನಿಕ ಶಾಲೆಗಳಿಗೆ ಶ್ರೇಷ್ಠ ತರಬೇತಿ ನೀಡಿ ಸಾಕಷ್ಟು ವಿದ್ಯಾರ್ಥಿಗಳು ಆಯ್ಕೆಯಾಗಿ ಅಕಾಡೆಮಿಯ ಕೀರ್ತಿಯನ್ನು ಹೆಚ್ಚಿಸಿದ್ದಲ್ಲದೆ ಧಾರವಾಡದಲ್ಲಿ ಶ್ರೇಷ್ಠ ತರಬೇತಿ ಕೇಂದ್ರವಾಗಿ ಹೊರಹೊಮ್ಮಿದೆ.
ಶಿಕ್ಷಣ ಕ್ಷೇತ್ರದಲ್ಲಿ ಇವರ ಸೇವಾ ಹಿರಿತನವನ್ನು ಕಂಡು ಏಶಿಯಾ ಇಂಟರ್ ನ್ಯಾಷನಲ್ ಕಲ್ಚರಲ್ ರಿಸರ್ಚ್ ಯುನಿವರ್ಸಿಟಿಯವರು ದಿನಾಂಕ :೨೮-೦೬-೨೦೨೫ನೇ ಶನಿವಾರದಂದು ಬೆಂಗಳೂರಿನಲ್ಲಿ ಜರುಗಿದ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಲಾಯಿತು. ಅವರು ಬಡತನದಲ್ಲಿ ಅರಳಿ, ಸಾರ್ಥಕ ಮಾಡಿಕೊಂಡ ರಮೇಶರವರ ಜೀವನ ನಿರಾಶೆಗೊಂಡ ಬದುಕುಗಳಿಗೆ ಆಶಾದಾಯಕದ ಸಿಂಚನ. ನಿರವ ಜೀವನಕ್ಕೆ ಅನುಕರಣೀಯ, ಸೋತವರಿಗೆ ಸವಾಲಿನ ಶಕ್ತಿ, ಚಿಂತೆಯುಳ್ಳವರಿಗೆ ಚೈತನ್ಯದ ಚಿಲುಮೆ,ನಿರರ್ಥಕ ಜೀವನಕ್ಕೆ ಅರ್ಥ ಕಲ್ಪಿಸಿಕೊಡುವ ಸುಮಧುರ ಸವಿಗಾನ ಎಂಬುವುದರಲ್ಲಿ ಯಾವುದೇ ಅತಿಶಯೋಕ್ತಿಯೇನಿಲ್ಲ.ಇವರ ಪ್ರತಿಯೊಂದು ಪ್ರಾಮಾಣಿಕ ಸೇವಾ ಕೈಂಕರ್ಯಕ್ಕೆ ಬೊಗೆಸೆ ತುಂಬಾ ಅಭಿನಂದನೆಗಳು, ಹೀಗೆ ಅನೇಕ ಗೌರವ ಪ್ರಶಸ್ತಿಗಳು, ಸನ್ಮಾನಗಳು ಇವರ ಮುಡಿಗೇರಿ ರಾರಾಜಿಸಲೆಂಬ ಶುಭಾಶಯ ನಮ್ಮದು.
ಪ್ರೊ. ಹೆಚ್. ಎಸ್. ದಳವಾಯಿ
ಕನ್ನಡ ಉಪನ್ಯಾಸಕರು
ಸನ್ಮಾರ್ಗ ಪಿ.ಯು. ಕಾಲೇಜ್ ಗದಗ