ಲಕ್ಷ್ಮೇಶ್ವರ: ತಂತ್ರಜ್ಞಾನದ ಯುಗದಲ್ಲಿ ಎಲ್ಲವೂ ಯಾಂತ್ರಿಕರಣವಾಗಿದೆ. ಬದಲಾಗುತ್ತಿರುವ ಸನ್ನಿವೇಶಕ್ಕೆ ಅನುಗುಣವಾಗಿ ಅನೇಕ ಗ್ರಾಮದಲ್ಲಿ ಕೂಡ ರೈತಸ್ನೇಹಿ ಸೈಕಲ್ ಎಡೆಕುಂಟೆ ನೋಡಬಹುದಾಗಿದೆ. ಇವುಗಳಿಗೆ ಬೇಡಿಕೆ ಹೆಚ್ಚಳದಿಂದಾಗಿ ಉತ್ತಮ ಲಾಭ ಪಡೆದುಕೊಳ್ಳುತ್ತಿದ್ದಾರೆ.
ಲಕ್ಷ್ಮೇಶ್ವರ ಸುದ್ದಿ: ಪರಮೇಶ ಎಸ್ ಲಮಾಣಿ.
ಆಧುನಿಕತೆ ಬೆಳೆದಂತೆಲ್ಲಾ ಕೃಷಿ ಚಟುವಟಿಕೆಗಳಲ್ಲಿ ಹೊಸ ತಂತ್ರಜ್ಞಾನ ಬಳಕೆ ಆಗುತ್ತಿವೆ. ಬೆಳೆ ನಾಟಿ ಮಾಡಲು, ಕಟಾವಿನ ಕಾರ್ಯ ಚಟುವಟಿಕೆಗಳಿಗೆ ಕಾರ್ಮಿಕರ ಬಳಕೆ ಕಡಿಮೆಯಾಗುತ್ತಿದೆ.
ಇನ್ನು ಹೊಲ ಉಳುಮೆಗೆ ಜಾನುವಾರಗಳ ಕೊರತೆ ಎದುರಿಸುತ್ತಿರುವ ರೈತಾಪಿ ವರ್ಗ, ಯಂತ್ರಗಳ ಮೊರೆ ಹೋಗಿರುವುದು ಕಾಣುತ್ತದೆ.ಒಟ್ಟಾರೆ ನೂರು ಜನ ಕೂಲಿಕಾರರು ಮಾಡುವ ಕೃಷಿ ಕೆಲಸವನ್ನು ಒಂದೇ ದಿನದಲ್ಲಿ ಯಂತ್ರದ ಸಹಾಯ ಬಳಕೆಯಲ್ಲಿ ಪೂರೈಸಿಕೊಳ್ಳುವ ಜಾಣ್ಮ ರೈತರು ಕಂಡುಕೊಂಡಿದ್ದಾರೆ.
ಆದರೆ, ಇಂತಹ ವೈವಿದ್ಯಮಯ ಬದಲಾವಣೆಯಲ್ಲಿ ಬಡತನದ ಕೆಲ ರೈತ ಕುಟುಂಬ ತನ್ನ ಜಮೀನಿನ ಉಳುಮೆಗೆ ಮಕ್ಕಳಿಗೆ ನೊಗ ಬಾರ ಹೊರೆಸಿ ಬೇಸಾಯ ಮಾಡುವ ಸ್ಥಿತಿಯೂ ಇದೆ. ಇದಕ್ಕೆ ಪೂರಕ ಎಂಬುವಂತೆ ಇಲ್ಲೊಬ್ಬ ರೈತ ತನ್ನ ಜಮೀನಿನ ಕೃಷಿ ಕಾರ್ಯಕ್ಕೆ ಕಾರ್ಮಿಕರನ್ನು ಮತ್ತು ಜಾನುವಾರುಗಳ ಬೇಸಾಯಕ್ಕೆ ಶಕ್ತಿ ಇಲ್ಲದೆ ಸೈಕಲ್ನ್ನು ಎಡೆಕುಂಟೆ ಹೊಡೆಯುವ ಸಾಧನವಾಗಿ ರೂಪಿಸಿಕೊಂಡಿದ್ದಾನೆ.
ತಾಲೂಕಿನ ಅಡರಕಟ್ಟಿ ಗ್ರಾಮದ ರೈತ ಮುತ್ತಪ್ಪ ಹೂಗಾರ, ತನ್ನ ಎರಡು ಎಕರೆ ಜಮೀನಿನಲ್ಲಿ ಎರಡು ಎಕರೆಗೆ ಕಳೆದ ಜೂನ್ ನಲ್ಲಿ ಎರಡು ಎಕರೆಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದಾನೆ.ಮೆಕ್ಕೆಜೋಳ ಗಿಡಗಳಲ್ಲಿ ಎಡೆ ಹೊಡೆಯಲು ಒಂದು ದಿನದ ದನಗಳ ಬೇಸಾಯಕ್ಕೆ 4 ಸಾವಿರ ಬಾಡಿಗೆ ಕೊಡುವ ಸ್ಥಿತಿ ಇಲ್ಲದ ಮುತ್ತಪ್ಪ, ಸೈಕಲ್ಲಿನ ಅರ್ಧ ಭಾಗವನ್ನು ಬಳಕೆ ಮಾಡಿಕೊಂಡು ಇದಕ್ಕೆ ಕುಂಟೆ ಜೋಡಣೆ ಮಾಡಿ, ಮುಂದಿನ ಸೈಕಲ್ ಚಕ್ರ ಸುಲಭವಾಗಿ ಉರುಳಿದಂತೆ ಸರಾಗವಾಗಿ ಕಳೆ ನಾಶ ಮಾಡುವ ರೀತಿಯಲ್ಲಿ ಎಡೆಕುಂಟೆ ಹೊಡೆಯುವುದನ್ನು ರೂಪಿಸಿಕೊಂಡಿದ್ದಾನೆ.
ಮೊದಲು ಎತ್ತುಗಳಿಂದ ಎಡೆ ಹೊಡೆದು ನಂತರ ಈ ಸಾಧನವನ್ನು ಬಳಸಬಹುದಾಗಿದೆ. ಮಸಾರಿ ಭೂಮಿ ಗೆ ಮೊದಲು ಎತ್ತನ್ನು ಬಳಿಸಬೇಕು ಆದರೆ ಎರೆ ಭೂಮಿಗೆ ಎತ್ತನ್ನು ಬಳಿಸದೆ ಈ ಸೈಕಲ್ ಸಾಧನವನ್ನು ಬಳಿಸಬಹುದು.ಹೆಚ್ಚು ಶ್ರಮ ಇಲ್ಲದೆ ಮತ್ತೆ ಸಂಪೂರ್ಣ ಕಳೆ ನಾಶ ಆಗುವ ರೀತಿಯಲ್ಲಿ ಸೈಕಲ್ ಬಳಸಿ ದಿನಕ್ಕೆ ಒಂದು ಎಕರೆಯಂತೆ 2 ದಿನದಲ್ಲಿ ಮೆಕ್ಕೆಜೋಳ ಬೆಳೆಯಲ್ಲಿ ಎಡೆಕುಂಟೆ ಹೊಡೆದಿದ್ದಾರೆ.
ಹರದಗಟ್ಟಿ – ಲಕ್ಷ್ಮೇಶ್ವರ ಸಮೀಪ ಮುತ್ತಣ್ಣ ಜಮೀನಿನಲ್ಲಿ ಸೈಕಲ್ ಬಳಕೆ ಮಾಡಿ ಎಡೆಕುಂಟೆ ಹೊಡೆಯುವುದನ್ನು ಕಾರು, ಬೈಕ್ ಸವಾರರು ವಾಹನ ನಿಲ್ಲಿಸಿ ವೀಕ್ಷಿಸುತ್ತಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ರೈತ ಮುತ್ತಣ್ಣ, ಸಣ್ಣ ಹಿಡುವಳಿ ರೈತರಿಗೆ ಈ ಸಾಧನಾ ಅನೂಕೂಲವಾಗುತ್ತದೆ. ಬೆಳೆಗಳು, ಗಿಡಗಳು ಜೊಡನೆಯಾದಾಗ ಇದು ಅಗಲಿಸುತ್ತದೆ. ಈ ರೀತಿಯ ಸೈಕಲ್ ಬಳಕೆ ಬೇಸಾಯ ಬೆರೆ ಕಡೆಯು ನೋಡಿಕೊಂಡಿದ್ದೆ. ಊರಿನ ಕೂಲಿ ಲೆಕ್ಕಾಚಾರ ಬಹಳ ದೊಡ್ಡ ಮಟ್ಟಕ್ಕಿದೆ.ಒಂದು ದಿನದ ಒಬ್ಬ ಕೂಲಿ ಆಳಿಗೆ 400, ಇನ್ನು ಎತ್ತಿನ ಬೇಸಾಯಕ್ಕೆ 3500 ರೂ ಕೇಳುತ್ತಾರೆ.ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಬೇಸಾಯ ಕಷ್ಟವಾಗಿತ್ತು.ಆದರೂ, ಬಿತ್ತನೆ ಮೆಕ್ಕೆಜೋಳ ಬೆಳೆ ಉಳಿಸಿಕೊಳ್ಳಲು ಸೈಕಲ್ ಬಳಸಿ ಎರಡೆರೆಡು ಬಾರಿ ಕಳೆ ಇಲ್ಲದಂತೆ ಎಡೆಕುಂಟೆ ಸಲೀಸಾಗಿ ಹೊಡೆದುಕೊಂಡಿದ್ದೇನೆ ಎಂದಿದ್ದಾರೆ. ಸಂಕೋಚಪಡದ ರೈತರು ಮನೆಯಲ್ಲಿನ ಅನುಪಯುಕ್ತ ಸೈಕಲ್ ಬಳಸಿ ಸುಲಭವಾಗಿ ಜಮೀನಿನ ಕೆಲಸ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.
ಕೋಟ್ :
ಈ ಸಾಧನವನ್ನು ಸೈಕಲ್ ವಿಡರ್ ಎಂದು ಕರೆಯುತ್ತಾರೆ. ರೈತರು ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಇಲಾಖೆಯಲ್ಲಿ ಸೈಕಲ್ ವಿಡರ್ ಸಿಗುತ್ತದೆ. ಸಬ್ಸಿಡಿಯಲ್ಲಿ ರೈತರಿಗೆ 950 ರೂ ಗಳಿಗೆ ಕೊಡಲಾಗುತ್ತದೆ. ಮಸಾರಿ ಹೊಲಕ್ಕೆ ಭೂಮಿ ಗಟ್ಟಿ ಇರುವುದರಿಂದ ಕಷ್ಟ ಆಗುತ್ತೆ. ಎತ್ತನ್ನು ಮೊದಲು ಬಳಸಿ ನಂತರ ಇದನ್ನು ಬಳಸಬಹುದು, ಆದರೆ ಎರೆ ಹೊಲಗಳಿಗೆ ನೇರವಾಗಿ ಬಳಿಸಬಹುದು.
*ಚಂದ್ರಶೇಖರ ನರಸಮ್ಮನ್ನವರ್, ಕೃಷಿ ಇಲಾಖೆ ಅಧಿಕಾರಿಗಳು, ಲಕ್ಷ್ಮೇಶ್ವರ