ಗದಗ, ಜುಲೈ 9: ರಾಜ್ಯದ ರಸ್ತೆ ಸಾರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಚಾಲಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
ನಿಜಕ್ಕೂ ಕರ್ತವ್ಯ ನಿರತ ಸಿಬ್ಬಂದಿಯೊಬ್ಬನ ಅಕಾಲಿಕ ಸಾವು ನೋವಿನ ನೆರಳನ್ನ ಎಸೆದಿದೆ. ಲಕ್ಷ್ಮೇಶ್ವರ ತಾಲೂಕಿನ ಗೋವಿನಕೊಪ್ಪ ಗ್ರಾಮದ ನಿವಾಸಿ ಎಸ್.ಪಿ. ಲಕ್ಷ್ಮಣ ಎಂಬ ಚಾಲಕ ಕಳೆದ ಹಲವು ವರ್ಷಗಳಿಂದ ಲಕ್ಷ್ಮೇಶ್ವರ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು ಉತ್ತಮ ಚಾಲಕ, ಶಿಸ್ತಿನಿಂದ ಕಾರ್ಯನಿರ್ವಹಿಸುವ ಮಾದರಿ ಉದ್ಯೋಗಿಯಾಗಿದ್ದರು. ಆದರೆ ಅವರ ಅಕಾಲಿಕ ಮರಣ ಸಾಕಷ್ಟು ಆತಂಕ ತಂದೊಡ್ಡಿದೆ ಎಂದು ಸಹೋದ್ಯೋಗಿಗಳು ಶೋಕ ವ್ಯಕ್ತಪಡಿಸಿದ್ದಾರೆ.
ನಿನ್ನೆ ತಡರಾತ್ರಿ ಹಠಾತ್ ಹೃದಯ ನೋವಿನಿಂದ ಆಸ್ಪತ್ರೆಗೆ ದಾಖಲಾದರೂ, ವೈದ್ಯಕೀಯ ಚಿಕಿತ್ಸೆ ಫಲಕಾರಿಯಾಗದೆ ದುರಂತ ಅಂತ್ಯ ಸಂಭವಿಸಿದೆ. ಇದೊಂದು ಚಾಲಕನ ಸಾವು ಮಾತ್ರವಲ್ಲ, ಇಡೀ ಸಂಸ್ಥೆಗೆ ತುಂಬಲಾರದ ನಷ್ಟವಾಗಿದೆ ಎಂದು ಸಹೋದ್ಯೋಗಿಗಳು ಶೋಕ ವ್ಯಕ್ತಪಡಿಸಿದ್ದಾರೆ.
ಎಸ್.ಪಿ. ಲಕ್ಷ್ಮಣ ತಮ್ಮ ಕರ್ತವ್ಯಪರತೆ ಹಾಗೂ ಸೃಜನಶೀಲತೆಯಿಂದಲೇ ಮುಖ್ಯಮಂತ್ರಿಗಳಿಂದ ಬಂಗಾರದ ಪದಕ (Chief Minister’s Gold Medal) ಗೆ ಭಾಜನರಾಗಿದ್ದರು. ಪ್ರತಿ ವರ್ಷದ ಕನ್ನಡ ರಾಜ್ಯೋತ್ಸವದಂದು ಬಸ್ಸುಗಳನ್ನು ಶೃಂಗಾರಗೊಳಿಸಿ, ಭಕ್ತಿಪೂರ್ವಕವಾಗಿ ರಾಜ್ಯೋತ್ಸವವನ್ನು ಆಚರಿಸುವ ಉತ್ಸಾಹಿ ಚಾಲಕರಲ್ಲಿ ಅವರು ಮುಂಚೂಣಿಯಲ್ಲಿದ್ದರು.
ಅವರ ಸೃಜನಶೀಲ ಶ್ರದ್ಧೆ ಹಾಗೂ ನಿಷ್ಠೆಯ ನಿಜವಾದ ಪರಿಚಯ ರಾಜ್ಯ ಮಟ್ಟದಲ್ಲಿ ಸಿಕ್ಕಿತ್ತು. ಇಂದು ಅವರು ನಮ್ಮ ನಡುವೆ ಇಲ್ಲದಿದ್ದರೂ, ಅವರ ಸೇವೆಯ ಛಾಯೆ ಕನ್ನಡದ ಹೆಮ್ಮೆಗೋರುವ ವಾಹನಗಳಲ್ಲಿ ಜೀವಂತವಾಗಿಯೇ ಇರುತ್ತದೆ.
ಚಾಲಕನ ಸಾವಿಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಶ್ರದ್ಧಾಂಜಲಿ ಸಲ್ಲಿಸಿದ್ದು, ಇಲಾಖೆಯು ಸರ್ಕಾರದ ಮೂಲಕ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡುವ ನಿರೀಕ್ಷೆಯಿದೆ.