ದುಡಿಯುವ ಹುಮ್ಮಸ್ಸು, ತೋಳ್ಬಲದಲ್ಲಿ ಕ್ಷಾತ್ರ ತೇಜಸ್ಸು, ಕಾಯಕವೇ ಕೈಲಾಸವೆಂದು ಬದುಕಿದ ಕಣ್ಣು ಕಾಣದ ಹಿರಿಯ ಜೀವಕ್ಕೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನೈತಿಕ ಸ್ಥೈರ್ಯ ತುಂಬಿದ್ದು, ಅವರ ಆರ್ಥಿಕ ಶಕ್ತಿಯ ಬಲವಾಗಿ ನಿಂತಿದೆ.
ಹೌದು ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಕಣ್ಣುಗಳು ಕಾಣದೆ, ಕುರುಡರಾಗಿರುವ ಹಿರಿಯ ಜೀವ ನಾರಾಯಣಪ್ಪ ಬಸಪ್ಪ ಬೈರನಹಳ್ಳಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೆಮ್ಮದಿಯ,ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಕಳೆದ ಮೂರು ವರ್ಷದಿಂದ ಉದ್ಯೋಗ ಖಾತ್ರಿ ಯೋಜನೆಯಡಿ ನೀರುಗಾಲುವೆ,ಕೆರೆ ಹೂಳೆತ್ತುವುದು, ನದಿ ಪಾತ್ರದ ಅಭಿವೃದ್ಧಿ ಸೇರಿದಂತೆ ವಿವಿಧ ಕೆಲಸದಲ್ಲಿ ನಿರಂತರವಾಗಿ ಪಾಲ್ಗೊಳ್ಳುತ್ತಿದ್ದಾರೆ.
ಕೂಲಿ ಕೆಲಸ ಸಿಗದೆ ಕಂಗಾಲಾಗಿದ್ದ ಹಿರಿಯ ಜೀವ
ಹುಟ್ಟು ಕುರುಡೇನು ಅಲ್ಲದ ನಾರಾಯಣಪ್ಪ ಅವರ ಬದುಕಿನಲ್ಲಿ ವಿಧಿ ಆಟವಾಡಿತ್ತು. ಮದುವೆಯಾಗಿ ಮಕ್ಕಳಾದ ಮೇಲೆ ಇವರಿಗೆ ಕುರಡುತನ ಕಾಣಿಸಿಕೊಂಡಿತ್ತು. ಹೀಗಾಗಿ ಒಂದೆಡೆ ಆರವತ್ತಕ್ಕೂ ಹೆಚ್ಚು ವಯಸ್ಸಾಗಿರುವುದು, ಇನ್ನೊಂದೆಡೆ ಕಣ್ಣುಗಳು ಕಾಣುವುದಿರುವುದು ಇವರನ್ನು ಕುಗ್ಗಿಸಿ ಬಿಟ್ಟಿತ್ತು. ದುಡಿಯುವ ಛಲ ಇದ್ದರೂ, ಗ್ರಾಮದಲ್ಲಿ ಇವರಿಗೆ ಕೆಲಸ ಸಿಗದಾಗಿತ್ತು. ಈ ಸಂದರ್ಭದಲ್ಲಿ ಇವರಿಗೆ ಉದ್ಯೋಗದ ಭರವಸೆಯಾಗಿ, ಊರುಗೋಲಾಗಿ ನಿಂತಿದ್ದು, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಉದ್ಯೋಗ ಖಾತ್ರಿ. ಕಣ್ಣು ಕಾಣದಿದ್ದರೂ, ವಯಸ್ಸಾದರೂ ಕ್ಷಣ ಮಾತ್ರದಲ್ಲಿ ಅಗೆಯುತ್ತಾರೆ ಮಣ್ಣು. ಆಶ್ಚರ್ಯ ಎಂದರೆ ವಯೋವೃದ್ಧರಾದ ಇವರಿಗೆ ಕಣ್ಣು ಕಾಣದಿದ್ದರೂ ಗುದ್ಲಿ ಹಿಡಿದು ಮಣ್ಣನ್ನು ಅಗೆಯುತ್ತಾರೆ,ಕಾಮಗಾರಿ ಸ್ಥಳದಲ್ಲಿ ಇವರ ಮಗಳು ಇವರಿಗೆ ಸ್ಥಳ ತೋರಿಸುವುದಷ್ಟೇ ತಡ ಇವರು ಪಟ ಪಟನೆ ಮಣ್ಣು ಅಗೆಯುತ್ತಾರೆ.
ಬುಟ್ಟಿಯಲ್ಲಿ ಮಣ್ಣು ತುಂಬಿ ಕೊಡಿತ್ತಾರೆ.ಹೀಗೆ ತುಂಬಿದ ಮಣ್ಣನ್ನು ಇವರ ಮಗಳು ದಡಕ್ಕೆ ಹಾಕುತ್ತಾರೆ. ಇನ್ನೂ ಇವರಿಗೆ ಕೆಲಸದ ಪ್ರಮಾಣದಲ್ಲಿ ಇವರಿಗೆ ವಿನಾಯತಿ ನೀಡಲಾಗಿದೆ. ಅಳತೆ ಕಟ್ಟೆಯಲ್ಲಿ ಅರ್ಧದಷ್ಟು ಮಾತ್ರ ಮಣ್ಣು ಅಗೆಯಲು ತಿಳಿಸಲಾಗಿದೆ. ಕಳೆದ ಮೂರು ವರ್ಷದ ಹಿಂದೆಯೆ ಐಇಸಿ ಚಟುವಟಿಕೆ ನಡೆಸಿ, ಕಾಯಕ ಬಂಧು ಗುರುತಿಸಿ ನರೇಗಾ ಕೆಲಸ ಪ್ರಾರಂಭಿಸಿದಾಗ, ಇವರಿಗೂ ಯೋಜನೆ ಮಾಹಿತಿ ಸಿಕ್ಕಿತ್ತು, ಆಗಿನಿಂದ ಇವರು ನರೇಗಾ ಕೆಲಸಕ್ಕೆ ಬರುತ್ತಿದ್ದಾರೆ. ಇದೀಗ ಬಂದ ಕೂಲಿ ಹಣದಲ್ಲಿಯೆ ಖುಷಿಯಿಂದ ಜೀವನ ಕಳೆಯುತ್ತಿದ್ದಾರೆ.
ಆಸ್ಪತ್ರೆ ಖರ್ಚು,ಮನೆ ನಿರ್ವಹಣೆಗೆ ನರೇಗಾ ಕೂಲಿ ಹಣ ಸಹಕಾರಿ ಶ್ರಮಜೀವಿ ನಾರಾಯಣ ಅವರಿಗೆ ವಾಸಿಸಲು ಅಂಗೈಯಷ್ಟು ಮನೆಯೊಂದೆ ಇರೋದು, ಇದರ ಹೊರತಾಗಿ ಜಮೀನು ಬೇರೆ ಆಸ್ತಿ-ಪಾಸ್ತಿ ಯಾವುದು ಇಲ್ಲಾ. ಮತ್ತೊಂದು ಆದಾಯದ ಮೂಲವು ಇಲ್ಲಾ, ಬರುವ ವಿಶೇಷಚೇತನರ ಗೌರವ ಧನವು ಇವರಿಗೆ ಸಾಕಾಗುತ್ತಿರಲಿಲ್ಲಾ. ಮನೆಯಲ್ಲಿ ಪತ್ನಿ, ಮದುವೆಯಾಗಿ ಮನೆಯಲ್ಲಿಯೆ ಉಳಿದ ಮಗಳು ವಾಸವಾಗಿದ್ದಾರೆ. ಹೀಗಾಗಿ ಕುಟುಂಬದ ನಿರ್ಹವಣೆ,ಬಿಪಿ,ಶುಗರ್ ರೋಗಿಯಾಗಿರುವ ನಾರಾಯಣಪ್ಪ ಅವರ ಆಸ್ಪತ್ರೆ ಖರ್ಚುವೆಚ್ಚ ಸರಿದೂಗಿಸಲು ಕಷ್ಟವಾಗಿತ್ತು.
ಇದೀಗ ನರೇಗಾ ಕೂಲಿ ಹಣ ಇವರಿಗೆ ನೆರವಾಗಿದ್ದು,ಯಾವುದೇ ಸಾಲವಿಲ್ಲದೆ ಸ್ವಾಭಿಮಾನದ, ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ಒಟ್ಟಿನಲ್ಲಿ ನಾರಾಯಣಪ್ಪ ಕೈಲಾಗದು ಎಂದು ಮನೆಯ ಒಂದು ಮೂಲೆಯಲ್ಲಿ ಕೈ ಕಟ್ಟಿ ಕೂರದೆ ಉದ್ಯೋಗ ಖಾತ್ರಿಯಲ್ಲಿ ಯಶಸ್ವಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆ ಮೂಲಕ ನಿರುದ್ಯೋಗಿ ಯುವಕರು ಹಾಗೂ ನಮಗೆ ಈ ಕೆಲಸ ಆಗದು ಎಂದು ಮೈ ಮುರಿಯುವ ಅದೇಷ್ಟೋ ಜನರಿಗೆ ಮಾದರಿಯಾಗಿದ್ದಾರೆ.
ಕೋಟ್:
ಉದ್ಯೋಗ ಖಾತ್ರಿ ಯೋಜನೆ ಬಡವರಾದ,ಕಣ್ಣು ಕಾಣದಾದ ನನ್ನ ಜೀವನಕ್ಕೆ ಶಕ್ತಿ ತುಂಬಿದೆ. ಇದ್ದರಿಂದ ನಾನು ಹೆಮ್ಮೆಯ ದಿನಗಳನ್ನು ಕಳೆಯುತ್ತಿದ್ದೇನೆ. ಆಸ್ಪತ್ರೆ ಖರ್ಚುವೆಚ್ಚಗಳನ್ನು ನಿಭಾಯಿಸುತ್ತಿದ್ದೇನೆ. ಉದ್ಯೋಗ ಖಾತ್ರಿ ಕೆಲಸ ನಮ್ಮಂಥಹ ಬಡವರಿಗೆ ಅನುಕೂಲವಾಗಿದೆ.
ನಾರಾಯಣಪ್ಪ ಬೈರನಹಳ್ಳಿ, ನರೇಗಾ ಫಲಾನುಭವಿ, ಗ್ರಾಪಂ, ಮಾಸೂರು.
ಕೋಟ್:
ಜಿಲ್ಲೆಯಾದ್ಯಂತ ನೂರಾರು ವಿಶೇಷಚೇತನರು, ವಯೋವೃದ್ಧರು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೆರೆ,ನೀರುಗಾಲುವೆ ಅಭಿವೃದ್ಧಿ ಕೆಲಸದಲ್ಲಿ ಪಾಲ್ಗೊಂಡಿದ್ದಾರೆ. ಕಾರ್ಮಿಕರಿಗೆ ನೀರು ಕೊಡುವುದು, ಮಣ್ಣು ಅಗೆಯುವ ಕೆಲಸ ಅವರು ಮಾಡುತ್ತಿದ್ದಾರೆ. ಹೀಗೆ ನರೇಗಾದಿಂದ ಬಂದ ಕೂಲಿ ಹಣದಲ್ಲಿ ಅವರು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಇದು ನರೇಗಾ ಯೋಜನೆಯ ಯಶಸ್ಸಿನ ಕೈಗನ್ನಡಿಯಾಗಿದೆ.
ರುಚಿ ಬಿಂದಲ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಪಂ,ಹಾವೇರಿ