Home » News » ಲಕ್ಷ್ಮೇಶ್ವರದಲ್ಲಿ ಮೊಹರಂ ಹಬ್ಬ : ಹುಲಿವೇಷ ಬರೆಸಿಕೊಳ್ಳುತ್ತಿರುವ ಹರಕೆದಾರರು.

ಲಕ್ಷ್ಮೇಶ್ವರದಲ್ಲಿ ಮೊಹರಂ ಹಬ್ಬ : ಹುಲಿವೇಷ ಬರೆಸಿಕೊಳ್ಳುತ್ತಿರುವ ಹರಕೆದಾರರು.

by CityXPress
0 comments

ಲಕ್ಷ್ಮೇಶ್ವರ: ಮೊಹರಂ ಹಿಂದೂ-ಮುಸ್ಲಿಂ ಭಾವೈಕ್ಯದ ಹಬ್ಬವಾಗಿ , ಪರಂಪರೆ ಮತ್ತು ಸಾಂಸ್ಕೃತಿಕ ವೈಭವವನ್ನು ಉಳಿಸಿಕೊಂಡು ಬರುತ್ತಿದೆ.

ಲಕ್ಷ್ಮೇಶ್ವರ ವರದಿ: ಪರಮೇಶ ಲಮಾಣಿ.

ಮೊಹರಂ ಹಬ್ಬದಂದು ದೇವರಿಗೆ (ಪಂಜಾ) ವಿವಿಧ ರೀತಿಯ ಹರಕೆಗಳನ್ನು ಹೊತ್ತುಕೊಳ್ಳುವುದು ಹಿಂದಿನಿಂದ ಬಂದ ಸಂಪ್ರದಾಯ. ಸಂತಾನಭಾಗ್ಯ, ಕುಟುಂಬದ ಆರೋಗ್ಯ ಸಮಸ್ಯೆ ಪರಿಹಾರ ಹೀಗೆ ಹತ್ತಾರು ಸಮಸ್ಯೆಗಳ ನಿವಾರಣೆಗಾಗಿ ದೇವರ ಮೇಲೆ ಅಚಲವಾದ ನಂಬಿಕೆಯಿಂದ ಭಕ್ತರು ಹರಕೆ ಹೊತ್ತುಕೊಳ್ಳುತ್ತಾರೆ. ಇಂಥ ಹರಕೆಗಳಲ್ಲಿ ಹುಲಿವೇಷ ಬರೆಸಿಕೊಳ್ಳುವುದೂ ಸೇರಿದೆ.

‘‘ಹುಲಿ ವೇಷವನ್ನು ಬರೆಸಿಕೊಂಡ ನನ್ನ ಮಗ ಹುಲಿಯ ಹಾಗೆ ಆಗಲಿ, ಆರೋಗ್ಯವಂತನಾಗಲಿ, ಜೀವನದಲ್ಲಿ ಉಜ್ವಲ ಭವಿಷ್ಯವನ್ನು ಕಾಣಲಿ’ ಎಂದು ದೇವರಿಗೆ 3,5.7 ವರ್ಷ ಅಥವಾ ಜೀವಂತ ಇರುವವರೆಗೂ ಹುಲಿವೇಷ ಬರೆಸುತ್ತೇವೆ’’ ಎಂದು ಹಲವು ಪೋಷಕರು ಹರಕೆ ಕಟ್ಟುತ್ತಾರೆ. ಅದರಂತೆ ಪ್ರತಿವರ್ಷ ಮೊಹರಂ ಹಬ್ಬ ಬಂದಾಗ ಹುಲಿವೇಷ ಬರೆಸಿಕೊಳ್ಳುವುದರ ಮೂಲಕ ಹರಕೆ ಪೂರೈಸುತ್ತಾರೆ.

banner

ಹುಲಿವೇಷ ಬರೆಯುವುದೂ ಒಂದು ವಿಶಿಷ್ಟ ಕಲೆ:

ಲಕ್ಷ್ಮೇಶ್ವರ ತಾಲ್ಲೂಕಿನಾದ್ಯಂತ ಹುಲಿವೇಷ ಬರೆಸಿಕೊಳ್ಳುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ನೂರಾರು ಜನರು ಹುಲಿವೇಷ ಬರೆಸಿಕೊಂಡು ಚರ್ಮದ ಹಲಿಗೆ ಅಥವಾ ತಮಟೆ ವಾದನಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕಾಣಿಕೆ ಪಡೆದುಕೊಳ್ಳುತ್ತಾರೆ.

ಲಕ್ಷ್ಮೇಶ್ವರದ ಚಿತ್ರಗಾರ ಕುಟುಂಬ ಕಳೆದ ನಾಲ್ಕು ತಲೆಮಾರುಗಳಿಂದ ಭಕ್ತಿ, ಶ್ರದ್ಧೆ, ನಂಬಿಕೆ ಹಾಗೂ ಸಾಂಪ್ರದಾಯಕವಾಗಿ ಹುಲಿವೇಷ ಬರೆಯುತ್ತ ಬಂದಿದೆ. ಈ ಕುಟುಬಂವನ್ನು ಹೊರತುಪಡಿಸಿ ಬೇರೆ ಯಾರೂ ಹುಲಿವೇಷ ಬರೆಯುವುದಿಲ್ಲ. ಚಿತ್ರಗಾರ ಅಥವಾ ಗಾಯಕರ ಕುಟುಂಬದ ಸದಸ್ಯರು ಹುಲಿವೇಷ ಬರೆಯುವುದನ್ನು ರೂಢಿ ಮಾಡಿಕೊಂಡಿದ್ದಾರೆ. ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಸಾಂಪ್ರದಾಯಿಕ ಬಣ್ಣಗಳನ್ನು ಬಳಸಿ ಆಲಂಕಾರಿಕವಾಗಿ ಚಿತ್ರಗಳನ್ನು, ಸುಳಿವುಗಳನ್ನು ಹಳದಿ, ಕೆಂಪು, ಹಸಿರು, ಕರಿ ಮುಖ್ಯ ಬಣ್ಣಗಳಾಗಿ ಬಳಸಿಕೊಂಡು ಹುಲಿವೇಷ ಬರೆಯುವುದರಲ್ಲಿ ನುರಿತಿದ್ದಾರೆ.

‘ನಾಲ್ಕು ತಲೆಮಾರಿನಿಂದ ನಮ್ಮ ಕುಟುಂಬದವರು ಮೊಹರಂ ಹಬ್ಬದಂದು ಹುಲಿವೇಷ ಬರೆಯುತ್ತಾ ಬಂದಿದ್ದೇವೆ. ಹಿಂದೆ ಹರಕೆ ಹೊತ್ತವರು ಇಡೀ ದೇಹಕ್ಕೆ ಹುಲಿವೇಷ ಬರೆಸಿಕೊಳ್ಳುತ್ತಿದ್ದರು. ಆದರೆ ಇಂದಿನ ಯುವಕರು ದೇಹಕ್ಕೆ ಬಣ್ಣ ಬರೆಸಿಕೊಳ್ಳಲು ನಾಚುತ್ತಿದ್ದಾರೆ. ಹೀಗಾಗಿ ಕೈಗೆ ಮಾತ್ರ ಬಣ್ಣ ಬರೆಸಿಕೊಂಡು ಹರಕೆ ಪೂರೈಸುತ್ತಿದ್ದಾರೆ. ಇದರಿಂದಾಗಿ ನಮಗೂ ಆರ್ಥಿಕವಾಗಿ ಹೊಡೆತ ಬಿದ್ದಿದೆ’ ಎನ್ನುತ್ತಾರೆ ಹುಲಿವೇಷ ಬರೆಯುವ ಕಲಾವಿದ ಮನೋಹರ ಗಾಯ್ಕರ್.

ದೇಹದ ತುಂಬ ಹುಲಿವೇಷ ಬರೆಯಲು ₹1 ಸಾವಿರ ತೆಗೆದುಕೊಳ್ಳುತ್ತಿದ್ದೆವು. ಈಗಿನವರು ದೇಹಪೂರ್ತಿ ಬಣ್ಣ ಬರೆಯಿಸಿಕೊಳ್ಳಲು ನಾಚುತ್ತಾರೆ. ಕೈಗೆ ಬಣ್ಣ ಬರೆಯಲು ₹400 ಕೊಡುತ್ತಾರೆ. ಮನೋಹರ ಗಾಯಕರ ಹುಲಿವೇಷ ಬರೆಯುವ ಕಲಾವಿದ ಕತೆ ಹೇಳುವ ಚಿತ್ರಗಳು ಹುಲಿ ವೇಷ ಬರೆಯುವಾಗ ಹಳದಿ ಬಣ್ಣದ ಮೇಲೆ ನವಿಲಿನ ಚಿತ್ರ ಹುಲಿಯ ಚಿತ್ರ ಕುದುರೆಯ ಚಿತ್ರ ಹಸ್ತ ದೇವರ ಛತ್ರಿ ಮೀನು ಹಾವಿನ ಚಿತ್ರಗಳನ್ನು ಸೊಗಸಾಗಿ ಬಿಡಿಸಲಾಗುತ್ತದೆ. ಕೊನೆಯಲ್ಲಿ ವೇಷಕ್ಕೆ ದೃಷ್ಟಿಯಾಗಬಾರದು ಎಂಬ ಉದ್ಧೇಶದಿಂದ ಕೈಗೆ ನವಿಲುಗರಿ ಕಟ್ಟಲಾಗುತ್ತದೆ.

ಈ ಒಂದೊಂದು ಚಿತ್ರಗಳೂ ಕೂಡ ಅನೇಕ ಸಂದೇಶಗಳನ್ನು ಸಾರುತ್ತವೆ. ನವಿಲಿನ ಚಿತ್ರ ವೇಷಧಾರಿಯ ಕನಸುಗಳು ನನಸಾಗಲಿ ಗರಿಗೆದರಲಿ ಎಂದು ಸೂಚಿಸಿದರೆ ಹುಲಿಯ ಚಿತ್ರ ಹುಲಿಯಂತೆ ಘರ್ಜಿಸಲಿ ಬಲಶಾಲಿಯಾಗಲಿ ಎಂದು ಸಾರುತ್ತದೆ. ಅದರಂತೆ ಏಕಚಿತ್ತದಿಂದ ವೇಗವಾಗಿ ಬದುಕು ಯಶಸ್ವಿನ ಕಡೆಗೆ ಸಾಗಲಿ ಎಂಬುದನ್ನು ಕುದುರೆಯ ಚಿತ್ರ ಸಾರಿದರೆ; ಹಸ್ತದ ಚಿತ್ರವು ದೇವರ ಆರ್ಶೀವಾದವು ಸದಾ ವೇಷಗಾರನ ಮೇಲಿರಲಿ ಎಂದು ಬಿಂಬಿಸುತ್ತದೆ. ಇನ್ನು ಮೀನಿನ ಚಿತ್ರ ವೇಷ ಬರೆಸಿಕೊಳ್ಳುವವನ ಜೀವನ ಸದಾ ಚಲನಶೀಲನಾಗಿರಲಿ ಎಂದು ಸಾರುತ್ತದೆ. ಹಾಗೆಯೇ ಹಾವಿನ ಚಿತ್ರ ಯಾವದೇ ಸೇಡು ಕೆಡಕುಗಳು ತಾಗದಿರಲಿ ಸಾರುತ್ತದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb