ಗದಗ: ಶೈಕ್ಷಣಿಕ ಜೀವನದ ಪ್ರಮುಖ ಘಟ್ಟವಾದ ಪದವಿ ಪೂರ್ವ ಹಂತವು ವಿದ್ಯಾರ್ಥಿಗಳ ಭವಿಷ್ಯದ ಭದ್ರಬುನಾದಿ ಇರುವ ಕಾರಣ ವಿದ್ಯಾರ್ಥಿಗಳು ಶ್ರದ್ಧೆ, ಆಸಕ್ತಿ ಸತತ ಪ್ರಯತ್ನಗಳ ಸಾಧನಗಳೊಂದಿಗೆ ಸಾಧನೆ ಮಾಡಬೇಕೆಂದು ಡಾ. ವೀರೇಶ ಹಂಚಿನಾಳ ಕರೆ ನೀಡಿದರು.
ಅವರು ನಗರದ ಸನ್ಮಾರ್ಗ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಕಷ್ಟಗಳ ಪರಿಹಾರಕ್ಕೆ ವಿದ್ಯಾರ್ಥಿಗಳ ಆತ್ಮಬಲದೊಂದಿಗೆ ಮನೊಧೈರ್ಯ ಹಾಗೂ ಅವಿರತ ಪ್ರಯತ್ನಗಳೇ ಸಾಧನೆಯ ಮೆಟ್ಟಿಲುಗಳು ಎಂದು ತಿಳಿಸುವುದರ ಜೊತೆಗೆ ಭಾಷಾ ವಿಷಯಗಳ ಕುರಿತು ನಿರ್ಲಕ್ಷ ಬೇಡ ಎಂದು ಕಿವಿ ಮಾತು ಹೇಳಿದರು.
ಸಂಸ್ಥೆಯ ನಿರ್ದೇಶಕರಾದ ಪ್ರೊ.ಪುನೀತ ದೇಶಪಾಂಡೆಯವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ವಿದ್ಯಾಲಯವು ನಡೆದು ಬಂದ ಹೆಜ್ಜೆ ಗುರುತುಗಳು ಹಾಗೂ ಸಾಧನೆಯ ಸೋಪಾನಗಳನ್ನು ಅನಾವರಣಗೊಳಿಸುವುದರ ಜೊತೆಗೆ ವಿದ್ಯಾರ್ಥಿಗಳು ಸಂಸ್ಕೃತಿ, ಸಂಸ್ಕಾರಗಳ ಜೊತೆಗೆ ಸನ್ಮಿತ್ರರನ್ನು ಬೆಳೆಸಿಕೊಂಡಾಗ ಶೈಕ್ಷಣಿಕ ಸಾಧನೆ ಸುಲಭಸಾಧ್ಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ,ಸ್ಟುಡೆಂಟ್ಸ್ ಎಜ್ಯುಕೇಶನ್ ಸೊಸೈಟಿಯ ಚೇರ್‌ಮನ್‌ರಾದ ಪ್ರೊ. ರಾಜೇಶ ಕುಲಕರ್ಣಿಯವರು ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ‘ಅಭ್ಯುದಯ’ವೇ ನಮ್ಮ ಸಂಸ್ಥೆಯ ಉದ್ದೇಶ ಎಂದು ನುಡಿದರು. ಸಂಸ್ಥೆಯ ಈ ಸದುದ್ದೇಶವನ್ನು ಅರಿತುಕೊಂಡು ಉತ್ಕರ್ಷದ ಹಾದಿಯಲ್ಲಿ ಸಾಗಿದಾಗ ಮಾತ್ರ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಪ್ರೇಮಾನಂದ ರೋಣದ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ ನಿಮ್ಮ ಯಶಸ್ಸಿನ ಮಾರ್ಗದಲ್ಲಿ ಯಾರು ನಿಮಗೆ ಪೂರಕ ಪ್ರತಿಕ್ರಿಯೆ ನೀಡುತ್ತಾರೋ ಅವರೊಂದಿಗೆ ಸ್ನೇಹ ಬೆಳೆಸಿಕೊಂಡು, ಸ್ಪಷ್ಟ ಹಾಗೂ ಸಮರ್ಪಕ ನಿರ್ಧಾರಗಳನ್ನು ಕೈಗೊಳ್ಳುವುದರ ಜೊತೆಗೆ ಅವುಗಳ ವ್ಯವಸ್ಥಿತವಾದ ಅನುಷ್ಠಾನವಿರಲಿ ಎಂದು ಕರೆ ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ, ಕಾಲೇಜು ಸದಾಕಾಲ ಸಕಾರಾತ್ಮಕ ಸಹಾಯ, ಸಹಕಾರ ನೀಡಲು ಕಟಿಬದ್ಧವಾಗಿದೆ ಎಂದರು.
ವೇದಿಕೆಯ ಮೇಲೆ ಸಂಸ್ಥೆಯ ನಿರ್ದೇಶಕರಾದ ಪ್ರೊ. ರೋಹಿತ್ ಒಡೆಯರ್, ಪ್ರೊ. ರಾಹುಲ ಒಡೆಯರ್, ಪ್ರೊ. ಸಯ್ಯದ್ ಮತೀನ್ ಮುಲ್ಲಾ ಹಾಗೂ ಆಡಳಿತಾಧಿಕಾರಿಗಳಾದ ಶ್ರೀ.ಎಮ್.ಸಿ.ಹಿರೇಮಠರು ಉಪಸ್ಥಿತರಿದ್ದರು.
ಪ್ರೊ. ಹೇಮಂತ ದಳವಾಯಿಯವರು ಕಾರ್ಯಕ್ರಮ ನಿರೂಪಿಸಿ, ಸಂಸತ್ತಿನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರೆ, ಕಾರ್ಯಕ್ರಮದ ಪ್ರಾರಂಭದಲ್ಲಿ ಕುಮಾರಿ ಮಾನ್ಯ ಅಡಿಗ ಹಾಗೂ ಸಂಗಡಿಗರಿಂದ ಪ್ರಾರ್ಥನೆ ಜರುಗಿತು. ಶ್ರೀ ಮುರಳಿಧರ ಸಂಕನೂರ ಸರ್ವರನ್ನೂ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರೆ ಸಮಾರಂಭದ ಕೊನೆಯಲ್ಲಿ ಉಪನ್ಯಾಸಕಿ ಪ್ರೊ. ಹೀನಾಕೌಸರ ಮಾಳೆಕೊಪ್ಪ ಸರ್ವರನ್ನೂ ವಂದಿಸಿದರು.
