ಲಕ್ಷ್ಮೇಶ್ವರ : ಇಂದಿನ ಆಹಾರ ಪದ್ಧತಿ ಮತ್ತು ಒತ್ತಡದ ಜೀವನ ಶೈಲಿಯಿಂದ ಮಾನವನಿಗೆ ಅನಾರೋಗ್ಯ ಹೆಚ್ಚುತ್ತಿದೆ. ಹೀಗಾಗಿ ಆರೋಗ್ಯ ಕಾಪಾಡಿಕೊಂಡು ಶತಾಯುಷಿಗಳಾಗಲು ಪ್ರತಿನಿತ್ಯ ಯೋಗ ಮಾಡಿ ರೋಗ ಮುಕ್ತ ವಾಗಬೇಕೆಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಚೆನ್ನವ್ವ ಮೈಲಾರಿ ಅಭಿಪ್ರಾಯಪಟ್ಟರು.
ತಾಲೂಕಿನ ಬಾಲೆಹೊಸೂರು ಗ್ರಾಮ ಪಂಚಾಯತಿಯಲ್ಲಿ
ಮಾಹಿತಿ ಶಿಕ್ಷಣ ಸಂವಹನ ವಿಭಾಗ ತಾಲೂಕು ಪಂಚಾಯತ ಲಕ್ಷ್ಮೇಶ್ವರ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಷ್ಮಾನ್ ಆರೋಗ್ಯ ಮಂದಿರ ಬಾಲೆಹೊಸೂರು ಸಹಯೋಗದಲ್ಲಿ ಆಯೋಜಿಸಿದ್ದ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಪೂರ್ವಜರು ಯೋಗವನ್ನು ನಮಗೆ ಕೊಡುಗೆಯಾಗಿ ನೀಡಿದ್ದಾರೆ.ಯೋಗದಿಂದ ದೇಹದ ಪ್ರತಿ ಅಂಗಾಗಕ್ಕೂ ವ್ಯಾಯಾಮವಾಗುವುದರಿಂದ,ದೇಹದ ಪ್ರತಿಭಾಗದಲ್ಲೂ ರಕ್ತ ಸಂಚಾರ ಸುಗಮವಾಗುತ್ತದೆ. ಇದರಿಂದ ದೈಹಿಕ ಸದೃಢತೆ ಮತ್ತು ಮಾನಸಿಕ ನೆಮ್ಮದಿ ಲಭಿಸುತ್ತದೆ ಎಂದರು.
ಟಿ ಐ ಇ ಸಿ ಮಂಜುನಾಥ್ ಸ್ವಾಮಿ ಹೆಚ್ ಎಂ ಮಾತನಾಡಿ, ಇಂದು ಇಡೀ ವಿಶ್ವವೇ ಯೋಗಾಭ್ಯಸಕ್ಕೆ ವಿಶೇಷ ಆದ್ಯತೆ ನೀಡಿದ್ದು, ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಇದು ನಮ್ಮ ದೇಶದ ಹೆಮ್ಮೆಯಾಗಿದೆ. ಹಣ ಕೊಟ್ಟರೆ ಆರೋಗ್ಯ ಸಿಗದು ಯೋಗ ಮಾಡಿದರಷ್ಟೆ ಯೋಗ ಲಭಿಸುತ್ತದೆ. ಪ್ರತಿನಿತ್ಯ 20 ನಿಮಿಷಗಳ ಕಾಲ ಧ್ಯಾನ ಮಾಡಬೇಕೆಂದು ಸಲಹೆ ನೀಡಿದರು.
ನರೇಗಾ ಯೋಜನೆಯಡಿ ಸಮುದಾಯ ಕಾಮಗಾರಿಯ ಸ್ಥಳದಲ್ಲಿ ಯೋಗಾಸನ ಮಾಡಲಾಗುತ್ತಿದೆ. ಆ ಮೂಲಕ ಉತ್ತಮ ಆರೋಗ್ಯ ಮತ್ತು ಅಂತರ್ಜಲ, ಪರಿಸರ,ಜಲ ಮೂಲಗಳ ಸಂರಕ್ಷಣೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಪ್ರತಿಯೊಬ್ಬರು ಪ್ರತಿದಿನ ಅರ್ಧಗಂಟೆ ಸಮಯ ಮೀಸಲಿಟ್ಟು, ಯೋಗಾಭ್ಯಾಸ ಮಾಡಬೇಕು ಎಂದರು.
ಆರೋಗ್ಯ ಇಲಾಖೆಯ ಘನಶಾಮ್ ಹೋಳಿ ಮಾತನಾಡಿ ಮಲೇರಿಯಾ, ಚಿಕನ್ ಗುನ್ಯಾ ನಿಯಂತ್ರಣ,ಕ್ಷಯ ಮುಂತಾದ ರೋಗಗಳ ಕುರಿತು ಜಾಗೃತಿ ಮೂಡಿಸಿದರು.
ಈ ವೇಳೆ ನರೇಗಾ ಕೂಲಿ ಕಾರ್ಮಿಕರಿಗೆ ರಕ್ತದೊತ್ತಡ, ಮಧುಮೇಹದ ಉಚಿತ ತಪಾಸಣೆ ಕಾರ್ಯಕ್ರಮ ಜರುಗಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ರೇಖಾ ನೆಲಗನಹಳ್ಳಿ, ಸದಸ್ಯರಾದ ವಿರುಪಾಕ್ಷಪ್ಪ ಮರಳಿಹಳ್ಳಿ, ನೀಲಪ್ಪ ಮಾಯಕೊಂಡ ಬಸವರಾಜ್ ಗುಳ್ಳೆಣ್ಣನವರ್, ಪಿಡಿಓ ವೈ ಬಿ ಮಾದರ್, ಕಾರ್ಯದರ್ಶಿ ಶೇಖರ್ ಗೌಡ ವಡಕನ ಗೌಡರ, ಸೋಮು ಲಮಾಣಿ, ಪರಶುರಾಮ್ ಮೈಲಾರಿ, ಆರೋಗ್ಯ ಇಲಾಖೆಯ ದಾವಲ್ ಸನದಿ, ಸಿಸ್ಟರ್ ಮಂಜುಳಮ್ಮ, ಬಿ ಎಫ್ ಟಿ ನದಾಫ್, ಡಿಇಒ ಮಹೇಶ್ ಮೂಲಿಮನಿ, ಇರ್ಷಾದ್ ಗೋನಾಳ್,ಗ್ರಾ.ಪಂ ಸಿಬ್ಬಂದಿ ನಿಂಗರಾಜ್ ಶೀತಮ್ಮನವರ್, ಭೀಮಪ್ಪ ಚೋಟಮ್ಮನವರ ಆಶಾ ಕಾರ್ಯಕರ್ತೆಯರು, ನರೇಗಾ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.