ಬೆಳಗಾವಿಯ ಡಾ. ಪ್ರತೀಕ್ ಜೋಶಿ ಕುಟುಂಬ ಸಮೇತ ದುರ್ಮರಣ..!
ಅಹಮದಾಬಾದ್, ಜೂನ್ 12: ಗುಜರಾತ್ನ ಅಹಮದಾಬಾದ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತ ದೇಶವನ್ನೇ ನಡುಗಿಸಿದ್ದು, ಈ ಭೀಕರ ಅಪಘಾತದಲ್ಲಿ 265 ಮಂದಿ ತಮ್ಮ ಅಮೂಲ್ಯ ಜೀವವನ್ನು ಕಳೆದುಕೊಂಡಿದ್ದಾರೆ. ಲಂಡನ್ಗೆ ಹೊರಟಿದ್ದ ಬೋಯಿಂಗ್ ಡ್ರೀಮ್ಲೈನರ್ ವಿಮಾನವು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ.
ಈ ದುರಂತದಲ್ಲಿ ಬೆಳಗಾವಿಯ ಕೆಎಲ್ಇ ವೈದ್ಯಕೀಯ ಮಹಾವಿದ್ಯಾಲಯದ ಮಾಜಿ ವಿದ್ಯಾರ್ಥಿ ಡಾ. ಪ್ರತೀಕ್ ಜೋಶಿ, ಅವರ ಪತ್ನಿ ಹಾಗೂ ಮೂವರು ಪುಟ್ಟ ಮಕ್ಕಳು ಸಾವನ್ನಪ್ಪಿದ್ದಾರೆ. ರಾಜಸ್ಥಾನ ಮೂಲದ ಡಾ. ಪ್ರತೀಕ್ ಜೋಶಿ ಅವರು 2000-2005ರ ಬ್ಯಾಚ್ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿದ್ದರು. ಲಂಡನ್ನಲ್ಲಿ ತಮ್ಮ ವೈದಕೀಯ ಸೇವೆ ವಿಸ್ತರಿಸಲು ಕುಟುಂಬ ಸಮೇತ ಪ್ರಯಾಣಿಸುತ್ತಿದ್ದರು.
‘ವೈದ್ಯಕೀಯ ಕ್ಷೇತ್ರಕ್ಕೆ ಕಳೆದುಹೋದ ನಕ್ಷತ್ರ’
ಕೆಎಲ್ಇ ಕಾಲೇಜಿನ ಪ್ರಾಚಾರ್ಯೆ ಡಾ. ನಿರಂಜನಾ ಮಹಾಂತ ಶೆಟ್ಟಿ ಸಂತಾಪ ವ್ಯಕ್ತಪಡಿಸಿ, “ಪ್ರತೀಕ್ ಜೋಶಿ ಒಳ್ಳೆಯ ವಿದ್ಯಾರ್ಥಿ, ಎಲ್ಲರೊಂದಿಗೆ ಬೆರೆಯುವ ಶ್ರೇಷ್ಠ ವ್ಯಕ್ತಿತ್ವ ಹೊಂದಿದ್ದವರು. ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದರು. ನನ್ನ ವಿದ್ಯಾರ್ಥಿಯಂತಹ ದಾರುಣ ಅಂತ್ಯ ನೋವು ತಂದಿದೆ. ದೇವರು ಅವರ ಕುಟುಂಬಕ್ಕೆ ಧೈರ್ಯ ನೀಡಲಿ” ಎಂದು ತಿಳಿಸಿದ್ದಾರೆ.
‘ಇನ್ನು ಎಂದೂ ನಮ್ಮ ಜೊತೆಗಿಲ್ಲ ಎಂಬುದೇ ನಂಬಲಾಗಲ್ಲ’
ಡಾ. ಪ್ರತೀಕ್ ಜೋಶಿಯ ಬಳಗದ ಸ್ನೇಹಿತರಾದ ಡಾ. ಜ್ಯೋತಿ ಬೆಣ್ಣಿ ಹಾಗೂ ಡಾ. ಮಾನ್ಸಿ ಗೋಸಾವಿ ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ. “ಪ್ರತೀಕ್ ನನ್ನ ಪಕ್ಕದಲ್ಲೇ ಕುಳಿತುಕೊಳ್ಳುತ್ತಿದ್ದ. ಅದೆಷ್ಟು ನೆನಪುಗಳು! ಈ ಸೆಪ್ಟೆಂಬರ್ನಲ್ಲಿ ನಮ್ಮ ಬ್ಯಾಚ್ನ ಬೆಳ್ಳಿ ಮಹೋತ್ಸವ ನಡೆಯಲಿದೆ. ಆ ಕಾರ್ಯಕ್ರಮಕ್ಕೆ ಬರ್ತೀನಿ ಅಂದಿದ್ದ. ಆದರೆ ಈಗ ಅವರು ನಮ್ಮ ಮಧ್ಯದಲ್ಲಿಲ್ಲ ಎಂಬುದೇ ನಂಬಲಾಗುತ್ತಿಲ್ಲ” ಎಂದು ಕಣ್ಣೀರು ಹಾಕಿದ್ದಾರೆ.
ವಾಟ್ಸಪ್ ಗ್ರೂಪ್ನಲ್ಲಿ ಸಕ್ರಿಯವಾಗಿ ಮಾತನಾಡುತ್ತಿದ್ದ ಪ್ರತೀಕ್ ಜೋಶಿ ಉತ್ತರ ಭಾರತದವರಾಗಿದ್ದರೂ ಸಹಪಾಠಿಗಳೊಂದಿಗೆ ಹೃದಯದಿಂದ ಬೆರೆಯುತ್ತಿದ್ದದು ಸ್ನೇಹಿತರ ನೆನಪಾಗಿದೆ.
ದುಃಖದ ಆಘಾತದಲ್ಲಿರುವ ಕೆಎಲ್ಇ ಕುಟುಂಬ
ಪ್ರತೀಕ್ ಜೋಶಿಯ ಈ ಆಕಸ್ಮಿಕ ಅಗಲಿಕೆಯಿಂದ ಕೆಎಲ್ಇ ವೈದ್ಯಕೀಯ ಕಾಲೇಜು ಹಾಗೂ ಹಳೆಯ ವಿದ್ಯಾರ್ಥಿಗಳ ಬೃಂದದ ಮೇಲೆ ದುಃಖದ ಛಾಯೆ ಬಿದ್ದಿದೆ. ಬೆಳ್ಳಿ ಮಹೋತ್ಸವ ಆಚರಿಸುವುದಕ್ಕಿಂತ ಸಹಪಾಠಿಯನ್ನು ಕಳೆದುಕೊಂಡ ನೋವಿನಲ್ಲಿ ಎಲ್ಲರೂ ತಲ್ಲಣಗೊಂಡಿದ್ದಾರೆ.