ಗದಗ: ರಾಜ್ಯದಾದ್ಯಂತ ಪ್ರಥಮಬಾರಿಗೆ ಪ್ರಾಯೋಗಿಕವಾಗಿ ಗದಗ ಜಿಲ್ಲೆಯಲ್ಲಿ 92 ಗ್ರಾಮ ಗ್ರಂಥಾಲಯಗಳ ಆರಂಭಕ್ಕೆ ಚಾಲನೆ ನೀಡಲಾಗಿದೆ. ಈ ಪ್ರಯತ್ನವು “Scheme for Special Assistance to States for Capital Investment” ಯೋಜನೆಯ “Children and Adolescents Libraries and Digital Infrastructure” ಕಾರ್ಯಕ್ರಮದ ಭಾಗವಾಗಿದ್ದು, ಗ್ರಾಮೀಣ ಪ್ರಜಾಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ವಿಧ್ಯಾರ್ಥಿ ವಿಧ್ಯಾರ್ಥಿನಿಯರ ಓದು ಮತ್ತು ಜ್ಞಾನಾಭಿವೃದ್ಧಿಗೆ ಮಹತ್ತ್ವದ ಹಂತವಾಗಲಿದೆ.
ಜಿಲ್ಲಾ ಪಂಚಾಯತ್, ಗ್ರಂಥಾಲಯ ಇಲಾಖೆ ಹಾಗೂ ಶಿಕ್ಷಣ ಫೌಂಡೇಶನ್ ಇವರುಗಳ ಸಹಯೋಗದಲ್ಲಿ ಗ್ರಾಮ ಗ್ರಂಥಾಲಯಗಳ ನಿರ್ವಾಹಕರಿಗೆ ಗ್ರಂಥಾಲಯ ನಿರ್ವಹಣೆ ಕುರಿತು ದಿನಾಂಕ 12.06.2025 ರಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್. ಎಸ್ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಭರತ್. ಎಸ್ ಅವರು, “ಸಾರ್ವಜನಿಕರು, ವಿಶೇಷವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಈ ಗ್ರಂಥಾಲಯಗಳ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯ ಯಶಸ್ಸಿಗೆ ಕೈಜೋಡಿಸಬೇಕು. ಗ್ರಾಮ ಗ್ರಂಥಾಲಯ ನಿರ್ವಾಹಕರು ವಾರದ ಎರಡು ದಿನಗಳು – ಶನಿವಾರ ಮತ್ತು ರವಿವಾರ ಮಧ್ಯಾಹ್ನ 2:00ರಿಂದ ಸಂಜೆ 6:00ರವರೆಗೆ ಕನಿಷ್ಠ 4 ಗಂಟೆಗಳ ಕಾಲ ಗ್ರಂಥಾಲಯಗಳನ್ನು ತೆರೆದು ಸಾರ್ವಜನಿಕರಿಗೆ ಓದಲು ಅವಕಾಶ ಕಲ್ಪಿಸಬೇಕು” ಎಂದು ತಿಳಿಸಿದರು.
92 ಗ್ರಾಮ ಗ್ರಂಥಾಲಯಗಳ ಪೈಕಿ ಮೊದಲ ಹಂತದಲ್ಲಿ ಜಿಲ್ಲಾ ಮಟ್ಟದ ವಿವಿಧ ತಾಲೂಕುಗಳಲ್ಲಿ ಆಯ್ಕೆಯಾದ 46 ಗ್ರಾಮಗಳಲ್ಲಿ ಗ್ರಂಥಾಲಯ ನಿರ್ವಹಣೆಗೆ ಸಂಜೀವಿನಿ-ಎನ್.ಆರ್.ಎಲ್.ಎಮ್ ಸ್ವ-ಸಹಾಯ ಗುಂಪಿನ ಮಹಿಳೆಯರು ಭಾಗಿಯಾಗಿದ್ದಾರೆ. ಇವರಿಗೆ ಗ್ರಂಥಾಲಯ ನಿರ್ವಹಣೆಯ ಕುರಿತು ಸೂಕ್ತ ಮಾರ್ಗದರ್ಶನ ನೀಡುವ ತರಬೇತಿ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಉಪ ಕಾರ್ಯದರ್ಶಿ ಶ್ರೀ ಚಂದ್ರಕಾಂತ ಮುಂಡರಗಿ, ಯೋಜನಾ ನಿರ್ದೇಶಕ ಶ್ರೀ ಎಮ್.ವಿ. ಚಳಗೇರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜಿಲ್ಲಾ ಗ್ರಂಥಾಲಯ ಅಧಿಕಾರಿ ಶ್ರೀಮತಿ ವೆಂಕಟೇಶ್ವರಿ ಪ್ರಾಸ್ತಾವಿಕ ಭಾಷಣ ಮಾಡಿದರು. ಶಿಕ್ಷಣ ಪೌಂಡೇಶನ್‌ನ ಸಿಬ್ಬಂದಿಗಳು ನಿರ್ವಾಹಕರಿಗೆ ತರಬೇತಿ ನೀಡುವ ಜವಾಬ್ದಾರಿಯನ್ನು ನಿಭಾಯಿಸಿದರು.
ಈ ಹೊಸದೇ ರೀತಿಯ ಪ್ರಯತ್ನವು ಗ್ರಾಮೀಣ ಶೈಕ್ಷಣಿಕ ಪರಿಸರದಲ್ಲಿ ಓದುವ ಸಂಸ್ಕೃತಿಯ ಬೆಳೆಸಲು, ಗ್ರಂಥಾಲಯಗಳ ಉಪಯೋಗಿತ್ವವನ್ನು ಪುನರ್‌ಸ್ಥಾಪಿಸಲು ಹಾಗೂ ಬುದ್ಧಿ ಬೆಳವಣಿಗೆಯ ಮಹತ್ವವನ್ನು ಗ್ರಾಮೀಣ ಸಮಾಜದೊಳಗೆ ಬಿತ್ತಲು ಅಗಾಧ ಪ್ರಭಾವ ಬೀರಲಿದೆ ಎಂಬ ನಿರೀಕ್ಷೆಯಿದೆ.