ಗದಗ, ಜೂನ್ 12: ಭಾರತೀಯ ಶಿಕ್ಷಣ ಸೊಸೈಟಿಯ ಗದುಗಿನ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ, ಬಿಪಿನ್ ಮತ್ತು ವಿನಯ್ ಚಿಕ್ಕಟ್ಟಿ ಪಿಯು ಕಾಲೇಜುಗಳು, ಗದಗ ಸಂಯುಕ್ತ ಆಶ್ರಯದಲ್ಲಿ “ನಕ್ಷತ್ರಗಳ ಸ್ವಾಗತ” ಎಂಬ ಷೀರ್ಷಿಕೆಯಡಿ ಫ್ರೆಶರ್ಸ್ ಡೇ – 2K25 ಕಾರ್ಯಕ್ರಮವನ್ನು ಇದೇ ಶನಿವಾರ, ಜೂನ್ 14ರಂದು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ನಗರದ ಚಿಕ್ಕಟ್ಟಿ ಶಾಲಾ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಆರಂಭವಾಗುವ ಕಾರ್ಯಕ್ರಮವನ್ನು ಹುಬ್ಬಳ್ಳಿಯ ಪ್ರಖ್ಯಾತ ವೈದ್ಯರು ಹಾಗೂ ಅಂತರರಾಷ್ಟ್ರೀಯ ನರವಿಜ್ಞಾನ ತಜ್ಞರಾದ ಡಾ. ಸುರೇಶ್ ಎಂ. ದುಗಾನಿ (ಎಂ.ಸಿ.ಎಚ್., ಎಫ್ಐಎಎಂಎಸ್, ನರಶಸ್ತ್ರಚಿಕಿತ್ಸೆ) ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಶ್ರೀಮತಿ ಸವಿತಾ ಎಸ್. ದುಗಾನಿ ಅವರು ಗೌರವ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಎಸ್. ವೈ. ಚಿಕ್ಕಟ್ಟಿ ಅವರು ವಹಿಸಲಿದ್ದಾರೆ. ಪ್ರೊ. ವಿನಯ್ ಎಸ್. ಚಿಕ್ಕಟ್ಟಿ (ಪ್ರಾಂಶುಪಾಲರು, ವಿನಯ್ ಚಿಕ್ಕಟ್ಟಿ ಪಿಯು ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು) ಹಾಗೂ ಪ್ರೊ. ಬಿಪಿನ್ ಎಸ್. ಚಿಕ್ಕಟ್ಟಿ (ಪ್ರಾಂಶುಪಾಲರು, ಬಿಪಿನ್ ಚಿಕ್ಕಟ್ಟಿ ಪಿಯು ವಿಜ್ಞಾನ ಕಾಲೇಜು) ಈ ಸಮಾರಂಭದಲ್ಲಿ ನೇತೃತ್ವ ವಹಿಸಲಿದ್ದಾರೆ.
ನೂತನ ವಿದ್ಯಾರ್ಥಿಗಳಿಗೆ ಕಲಿಕಾ ಸನ್ನಿವೇಶವನ್ನು ಪರಿಚಯಿಸುವ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಹಳೆಯ ವಿದ್ಯಾರ್ಥಿಗಳು ತಮ್ಮ ಆತ್ಮೀಯ ಸ್ವಾಗತವನ್ನು ನೀಡಲಿದ್ದಾರೆ. ವಿದ್ಯಾರ್ಥಿಗಳ ನೃತ್ಯ, ಗಾಯನ, ನಾಟಕ ಹಾಗೂ ಇತರೆ ಪ್ರತಿಭೆಗಳ ಪ್ರದರ್ಶನ ಕಾರ್ಯಕ್ರಮಕ್ಕೆ ವಿಶೇಷ ಸೊಬಗು ನೀಡಲಿದೆ.
ನಕ್ಷತ್ರಗಳ ಸ್ವಾಗತ ಎಂಬ ಈ ಹಬ್ಬದ ಆಚರಣೆಯು ಹೊಸ ವಿದ್ಯಾರ್ಥಿಗಳಲ್ಲೇ ಹೊಸ ಉತ್ಸಾಹ ಮತ್ತು ಅಭಿಮಾನವನ್ನು ಬೆಳೆಸಲಿದೆ.