ಕಾಸರಗೋಡು, ಜೂನ್ 11:ಚಿಕ್ಕವರಿದ್ದಾಗ ಸಣ್ಣ ವಿಚಾರಕ್ಕೂ ಮುನಿಸಿಕೊಳ್ಳುವುದು ಸಾಮಾನ್ಯ. ವಯಸ್ಸು ಬೆಳೆಯುತ್ತಿದ್ದಂತೆ, ಆ ಹಳೆಯ ನೆನಪುಗಳು ಮಾಸಿಹೋಗುವುವು. ಆದರೆ ಕೆಲವೊಮ್ಮೆ ಅಂಥ ಕೋಪ ಅಥವಾ ನೋವು ಮನುಷ್ಯನ ಮನಸ್ಸಿನಲ್ಲಿ ದಶಕಗಳ ಕಾಲವೂ ಉಳಿಯಬಹುದು ಎಂಬುದಕ್ಕೆ ಕಾಸರಗೋಡು ಜಿಲ್ಲೆಯ ಈ ಘಟನೆ ಸಾಕ್ಷಿ.
ಹೌದು, ಕಾಸರಗೋಡು ಜಿಲ್ಲೆಯ 62 ವರ್ಷದ ಬಾಲಕೃಷ್ಣನ್ ಎಂಬವರು 4ನೇ ತರಗತಿಯಲ್ಲಿದ್ದಾಗ ತಾವು ಅನುಭವಿಸಿದ ನೋವಿಗೆ – 50 ವರ್ಷಗಳ ಬಳಿಕ – ಪ್ರತೀಕಾರ ತೀರಿಸಿಕೊಳ್ಳಲು ನಿರ್ಧರಿಸಿದ್ದಾರೆ! ಈ ಹಿನ್ನಲೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹಲ್ಲೆ ಘಟನೆ ಜೂನ್ 2 ರಂದು ನಡೆದಿದೆ. ಬಾಲಕೃಷ್ಣನ್ ಮತ್ತು ಅವರ ಗೆಳೆಯ ಮ್ಯಾಥ್ಯೂ ವಲಿಯಪ್ಲಕ್ಕಲ್ ಎಂಬವರು ಶಾಲಾ ಕಾಲದ ಸ್ನೇಹಿತ ವಿಜೆ ಬಾಬು ಅವರನ್ನು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ಈ ಹಲ್ಲೆಯನ್ನು “ಬಾಲ್ಯದ ದ್ವೇಷದ ಪರಿಣಾಮ” ಎಂದು ವಿವರಿಸಿದ್ದಾರೆ.
ವಿಜೆ ಬಾಬು ಮತ್ತು ಬಾಲಕೃಷ್ಣನ್ ಇಬ್ಬರೂ 4ನೇ ತರಗತಿಯಲ್ಲಿ ಸಹಪಾಠಿಗಳಾಗಿದ್ದರು. ಆ ಕಾಲದಲ್ಲಿ ಬಾಬು ಅವರು ಬಾಲಕೃಷ್ಣನ್ ಅವರನ್ನು ಹೊಡೆದಿದ್ದರಂತೆ, ಹೀಗಾಗಿ ಬಾಲಕೃಷ್ಣನ್ ಆ ಘಟನೆ ಮರೆಯದೇ ವಿಜೆ ಬಾಬು ಹತ್ತಿರ ಹಿಸಾಬು ಇಟ್ಟುಕೊಂಡಿದ್ದರೆಂಬುದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇತ್ತೀಚೆಗಷ್ಟೆ ಈ ಪುರಾತನ ಘಟನೆ ಕುರಿತು ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತುಕತೆ ಕೊನೆಗೊಂಡಂತೆ ತೋರಾದರೂ, ಜೂನ್ 2 ರಂದು ಬಾಲಕೃಷ್ಣನ್ ಮತ್ತು ಮ್ಯಾಥ್ಯೂ ಸೇರಿ ಬಾಬು ಅವರನ್ನು ಗಲಾಟೆಗೆ ಎಳೆದಿದ್ದಾರೆ. ಬಾಲಕೃಷ್ಣನ್ ಬಾಬು ಅವರ ಕಾಲರ್ ಹಿಡಿದರೆ, ಮ್ಯಾಥ್ಯೂ ಕಲ್ಲಿನಿಂದ ಬಾಬುವಿನ ಮುಖ ಹಾಗೂ ಬೆನ್ನಿಗೆ ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ಬಾಬು ಅವರು ಪ್ರಸ್ತುತ ಕಣ್ಣೂರಿನ ಪರಿಯಾರಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆಯು “ಬಾಲ್ಯದ ತಪ್ಪುಗಳನ್ನು ದೊಡ್ಡವರಾಗಿ ಕ್ಷಮಿಸುವ ಮಹತ್ವ”ವನ್ನು ನೆನೆಸಿಸುವಂತಿದೆ. ಮಕ್ಕಳ ಮನಸ್ಸಿನ ಮೇಲೆ ಬಾಧಕ ಘಟನೆಗಳು ದೀರ್ಘಕಾಲಿಕ ಪರಿಣಾಮ ಬೀರಬಹುದೆಂಬುದೂ ಇದರಿಂದ ಸ್ಪಷ್ಟವಾಗುತ್ತದೆ.