ಬೆಂಗಳೂರು, ಜೂನ್ 6: ಬೆಂಗಳೂರಿನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಐಪಿಎಲ್ ವಿಜಯೋತ್ಸವ ವೇಳೆ ನಡೆದ ಕಾಲ್ತುಳಿತದ ತೀವ್ರ ಪರಿಣಾಮವಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶದಡಿ ಕೆಲವರನ್ನು ಬಂಧಿಸಲಾಗಿದೆ. ಈ ಹಿನ್ನೆಲೆ, ಕಾರ್ಯಕ್ರಮದ ಪ್ರಮುಖ ಆಯೋಜಕರಲ್ಲೊಬ್ಬರಾಗಿದ್ದ ಆರ್‌ಸಿಬಿ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ನಿಖಿಲ್ ಸೋಸಲೆ ಅವರನ್ನು ಪೊಲೀಸರು ಬಂಧಿಸಿದ್ದು, ಈ ಬಂಧನವನ್ನು ಪ್ರಶ್ನಿಸಿ ಅವರ ಪತ್ನಿ ಮಾಳವಿಕಾ ನಾಯ್ಕ್ ಅವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಅವರು ಸಲ್ಲಿಸಿದ ಅರ್ಜಿಯಲ್ಲಿ, “ಮುಖ್ಯಮಂತ್ರಿಯ ಹೇಳಿಕೆಯನ್ನು ಆಧರಿಸಿ ಯಾವುದೇ ತನಿಖೆಯಿಲ್ಲದೆ ಕಾನೂನು ಬಾಹಿರವಾಗಿ ಬಂಧಿಸಲಾಗಿದೆ. ಈ ಕಾರ್ಯವು ನಿಖಿಲ್ ಸೋಸಲೆ ಅವರ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ” ಎಂದು ಉಲ್ಲೇಖಿಸಲಾಗಿದೆ. ಅಲ್ಲದೇ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಭಾಗಿಯಾಗಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಗಂಭೀರ ಆರೋಪವನ್ನು ಕೂಡ ಹೈಕೋರ್ಟ್‌ನಲ್ಲಿ ಮಂಡಿಸಲಾಗಿದೆ.
ವಿಮಾನ ನಿಲ್ದಾಣದಲ್ಲೇ ಬಂಧನ
ಜೂನ್ 6ರಂದು ಮುಂಜಾನೆ ನಿಖಿಲ್ ಸೋಸಲೆ ಅವರು ಬೆಂಗಳೂರಿನ ವಿಮಾನ ನಿಲ್ದಾಣದಿಂದ ಮುಂಬೈಗೆ ಪ್ರಯಾಣ ಬೆಳೆಸುತ್ತಿರುವ ಸಂದರ್ಭ ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರು ಅವರನ್ನು ಬಂಧಿಸಿದರು. ಸಿಎಂ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪತ್ನಿಯು ಹೈಕೋರ್ಟ್‌ಗೆ ಮಾಡಿರುವ ಮನವಿ
“ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಪ್ರವೇಶವನ್ನು ಉಚಿತ ಆನ್‌ಲೈನ್ ಪಾಸ್ ಗಳ ಮೂಲಕ ನಿಯಂತ್ರಿಸಲಾಗಿತ್ತು. ಪಾಸ್ ಹೊಂದಿದ್ದವರಿಗೆ ಮಾತ್ರ ಪ್ರವೇಶ ನೀಡಲಾಗಿತ್ತು. ಯಾವುದೇ ಭದ್ರತಾ ಲೋಪ ಸಂಭವಿಸಿಲ್ಲ. ಅಪಘಾತ ಸಂಭವಿಸಿದ ತಕ್ಷಣ ಕಾರ್ಯಕ್ರಮವನ್ನು ಆರ್‌ಸಿಬಿ ಸ್ಥಗಿತಗೊಳಿಸಿತ್ತು. ಆದರೂ, ನನ್ನ ಪತಿಯನ್ನು ರಾಜಕೀಯ ಒತ್ತಡದಡಿ ಬಂಧಿಸಲಾಗಿದೆ” ಎಂಬುದಾಗಿ ಮಾಳವಿಕಾ ನಾಯ್ಕ್ ಅವರು ಅರ್ಜಿಯಲ್ಲಿ ಒತ್ತಿಹೇಳಿದ್ದಾರೆ.
ನಿಖಿಲ್ ಸೋಸಲೆ ಯಾರು?
ನಿಖಿಲ್ ಸೋಸಲೆ ಅವರು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್‌ಎಲ್) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಯಾಜಿಯೊ ಇಂಡಿಯಾದ ಉನ್ನತ ಅಧಿಕಾರಿಯಾಗಿದ್ದಾರೆ. ಕಳೆದ 13 ವರ್ಷಗಳಿಂದ ಅವರು ಡಯಾಜಿಯೊನಲ್ಲಿ ಸೇವೆ ಸಲ್ಲಿಸುತ್ತಿದ್ದು, ಆರ್‌ಸಿಬಿ ಫ್ರಾಂಚೈಸಿಯೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ.
ಕೆಎಸ್‌ಸಿಎ ಕೂಡ ಹೈಕೋರ್ಟ್ ಮೆಟ್ಟಿಲು ಹತ್ತಿದೆ
ಇನ್ನೊಂದೆಡೆ, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ (ಕೆಎಸ್‌ಸಿಎ) ಕೂಡ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಸರ್ಕಾರವೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬದಲು ವಿಧಾನಸೌಧದ ಎದುರು ವಿಜಯೋತ್ಸವ ನಡೆಸಲು ಸೂಚನೆ ನೀಡಿತ್ತು ಎಂಬ ಅಂಶವನ್ನು ಉಲ್ಲೇಖಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಇತರ ಸಚಿವರು ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್‌ನಲ್ಲಿ ಆಟಗಾರರಿಗೆ ಸನ್ಮಾನ ಮಾಡಿದ್ದಾರೆ ಎಂಬುದನ್ನು ಕೆಎಸ್‌ಸಿಎ ನ್ಯಾಯಾಲಯದ ಗಮನಕ್ಕೆ ತಂದಿದೆ.
“ಸರ್ಕಾರದ ಈ ನಿರ್ಧಾರದಿಂದಾಗಿ ಸಾರ್ವಜನಿಕ ಅಸಮಾಧಾನ ಉಂಟಾಗಿ, ಅದನ್ನು ತಿದ್ದುವ ಸಲುವಾಗಿ ಆರ್‌ಸಿಬಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ” ಎಂಬ ತೀವ್ರ ಆರೋಪವನ್ನು ಸಹ ಅರ್ಜಿಯಲ್ಲಿ ದಾಖಲಿಸಲಾಗಿದೆ.