ಗದಗ, ಜೂನ್ 3:
ಭೀಮಸೇನ ಜೋಷಿ ರಂಗಮಂದಿರದಲ್ಲಿ ಮಂಗಳವಾರದಂದು ನಡೆಯಬೇಕಾಗಿದ್ದ “ಗದಗ ಬೆಟಗೇರಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ” ಉದ್ಘಾಟನಾ ಕಾರ್ಯಕ್ರಮದಲ್ಲಿ ಅಸಾಧಾರಣ ತಿರುವು ಕಂಡುಬಂದಿತು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಭಾಂಗಣದ ಒಳಗೆ ಪ್ರವೇಶಿಸದೇ, ಸಭಾಂಗಣದ ಹೊರಗಡೆ ಕೆಲ ಹೊತ್ತು ಪರದಾಟ ನಡೆಸಿ ಕೊನೆಗೆ ಕಾರ್ಯಕ್ರಮ ಉದ್ಘಾಟಿಸದೇ ವಾಪಸ್ ತೆರಳಿದ್ದಾರೆ.
ಈ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಸಲು ಎಲ್ಲಾ ಸಿದ್ಧತೆಗಳನ್ನೂ ಮಾಡಲಾಗಿತ್ತು. ಭದ್ರತಾ ಸಿಬ್ಬಂದಿ, ಅಧಿಕಾರಿಗಳು ಎಲ್ಲವೂ ಸಜ್ಜಾಗಿದ್ದರು. ಆದರೆ ಸಿಎಂ ಆಗಮಿಸಲು ನಿಗದಿಪಡಿಸಿದ್ದ ದಾರಿಯಲ್ಲಿ ಮೆಟ್ಟಿಲು ಇದ್ದ ಕಾರಣ, ಸಿಎಂ ಮೆಟ್ಟಿಲು ಮೂಲಕ ಸಭಾಂಗಣದ ಒಳಗಡೆ ಪ್ರವೇಶಿಸಲು ನಿರಾಕರಿಸಿದರು.
ನಂತರ ಅವರು ಸಭಾಂಗಣದ ಎಡಭಾಗದ (ರೋಪ್) ಸರಳ ಮಾರ್ಗ (ಸೌಕರ್ಯ ದಾರಿಯಿಂದ) ದಿಂದ ಒಳಗೆ ಬರುವ ಯತ್ನ ನಡೆಸಿದರು.ಅಲ್ಲಿಯ ಗೇಟ್ ಕೂಡ ವೆಲ್ಡಿಂಗ್ ಮೂಲಕ ಬಾಗಿಲನ್ನ ಬಂದ್ ಮಾಡಲಾಗಿತ್ತು.
ನಂತರ ಸಭಾಂಗಣದ ಬಲಭಾಗದ ದಾರಿಗೆ ಸಿಎಂರನ್ನ ಸಚಿವ ಹೆಚ್.ಕೆ.ಪಾಟೀಲರು ಮನವೊಲಿಸಿ, ಕರೆತಂದರೂ ಸಹ, ಅಲ್ಲಿಯೂ ಸಹ ಬಾಗಿಲು ಬಂದ್ ಆಗಿತ್ತು. ( ಕೀಲಿ ಹಾಕಿತ್ತು) ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ಬಾಗಿಲಿನ ಕೀಲಿ ಮುರಿಯಬೇಕಾಯಿತು. ನಂತರ ಮುಂದೆ ಮತ್ತೊಂದು ಕಬ್ಬಿಣದ ಗೇಟ್ ಕೂಡ ಮುರಿಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಅಷ್ಟೊತ್ತಿಗಾಗಲೇ ಸಿಎಂ ಅವರ ಅಮೂಲ್ಯ 15 ನಿಮಿಷಗಳ ಸಮಯವನ್ನ ಈ ಪದಾಟ ತಿಂದು ಹಾಕಿತ್ತು.
ಈ ಎಲ್ಲಾ ಗಲಿಬಿಲಿಯ ನಡುವೆ, ಮುಖ್ಯಮಂತ್ರಿ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳಬೇಕಿದ್ದ ಕಾರಣ, ಅನಿವಾರ್ಯವಾಗಿ ಸಿಎಂ ಅವರು ಯಾವುದೇ ಕಾರ್ಯಕ್ರಮವನ್ನೂ ಉದ್ಘಾಟಿಸದೇ ಜಿಲ್ಲಾಧಿಕಾರಿಗಳಲ್ಲಿನ ಹೆಲಿಪ್ಯಾಡ್ ಗೆ ತೆರಳಬೇಕಾಯಿತು.
ನಂತರ ಜಿಲ್ಲಾ ಉಸ್ತುವಾರಿ ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ ಹಾಗೂ ಪೌರಾಡಳಿತ ಸಚಿವ ರಹೀಂಖಾನ್ ನೇತೃತ್ವದಲ್ಲಿ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಈ ವೇಳೆ, ಹೆಚ್.ಕೆ.ಪಾಟೀಲ ಮಾತನಾಡಿ, ಸಿಎಂ ಅವರು ಮುಖ್ಯ ದ್ವಾರದ ಮೂಲಕವೇ ಆಗಮಿಸಬಹುದು ಎಂದುಕೊಂಡಿದ್ದೆವು. ಕಾರಣ 10-15 ಮೆಟ್ಟಿಲುಗಳಿದ್ದವು. ಆದರೆ ಸಿಎಂ ಅವರಿಗೆ ಕಾಲು ನೋವು ಇದ್ದ ಕಾರಣ ಸಭಾಂಗಣದ ಒಳಗಡೆ ಬರಲು ಮಾರ್ಗ ಬದಲಿಸಿದೆವು. 10-15 ನಿಮಿಷ ಸಭಾಂಗಣದ ಹೊರಗಡೆಯೇ ಪೇಚಾಟ ನಡೆಸಿದೆವು.ಆದರೆ ನಮ್ಮ ದುರಾದೃಷ್ಟ ಸಭಾಂಗಣದ ಎರೆಡೂ ಕಡೆಯ ಬಾಗಿಲು ಬಂದ್ ಆಗಿದ್ದರಿಂದಲೋ, ಅಥವಾ ಅಚಾತುರ್ಯವೋ ಎನ್ನುವಂತೆ ಸಿಎಂ ಅವರು ಸಭಾಂಗಣ ಒಳಗಡೆ ಬರಲಾಗಲಿಲ್ಲ.ಅದು ಬೇರೆ ಹೆಲಿಕಾಪ್ಟರ್ ಮೂಲಕ ಸಿಎಂ ತೆರಳಬೇಕಾಗಿದ್ದರಿಂದ ಸಮಯದ ಅಭಾವ ಆಯಿತು. ಹೀಗಾಗಿ ಸಿಎಂ ಅವರು ಪೌರಾಡಳಿತ ಸಚಿವರಿಗೆ ಈ ಉದ್ಘಾಟನೆ ಜವಾಬ್ದಾರಿ ವಹಿಸಿ ತೆರಳಿದ್ದಾರೆ ಎಂದು ಸಭಿಕರಿಗೆ ಸ್ಪಷ್ಟಪಡಿಸಿದರು.