ಬೆಂಗಳೂರು, ಮೇ 29 – ಕರ್ನಾಟಕ ಸರ್ಕಾರವು ಹಿಂದೆ 2024ರ ಅಕ್ಟೋಬರ್ 10ರಂದು ಇಡೀ ರಾಜ್ಯದಾದ್ಯಂತ ನಡೆದ ಕೆಲವು ಸಂಘಟನೆ ಹೋರಾಟಗಳು, ಗಲಭೆ ಪ್ರಕರಣಗಳು ಹಾಗೂ ರಾಜಕೀಯ ವ್ಯಕ್ತಿಗಳ ವಿರುದ್ಧ ದಾಖಲಾಗಿದ್ದ 43 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಆದೇಶ ನೀಡಿತ್ತು. ಆದರೆ, ಈ ಕ್ರಮವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಲಾಯಿತು. ಇದಕ್ಕೆ ಸಂಬಂಧಿಸಿದಂತೆ ಇಂದು (ಮೇ 29) ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಸರ್ಕಾರದ ಕೇಸ್ ಹಿಂಪಡೆದ ಆದೇಶವನ್ನು ರದ್ದುಗೊಳಿಸಿದೆ.
ಈ ತೀರ್ಪು ನೀಡಿದ್ದು, ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ಎರಡು ಸದಸ್ಯರ ಪೀಠ. ಹೈಕೋರ್ಟ್ ತೀರ್ಪಿನ ಮೂಲಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ನಿರ್ಧಾರಕ್ಕೆ ಶಾಕ್ ನೀಡಲಾಗಿದೆ.

ಮೇಲಿನ ಈ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಸುಳ್ಳು ಕೇಸ್ ಅಂತ ಸರ್ಕಾರ ಹೇಳಿದ್ರೂ…
ಸರ್ಕಾರವು ಈ ಪ್ರಕರಣಗಳ ಹಿಂದೆ ಸುಳ್ಳು ಆರೋಪಗಳಿದ್ದವು, ಹೋರಾಟ ಮಾಡಿದವರು ಅಥವಾ ರಾಜಕೀಯ ಮುಖಂಡರ ಮೇಲೆ ಉದ್ದೇಶಪೂರ್ವಕವಾಗಿ ಮೊಕದ್ದಮೆ ಹಾಕಲಾಗಿತ್ತು ಎಂದು ಹೇಳಿತ್ತು. ಈ ಕಾರಣದಿಂದ ಸಮಾಜ ಹಿತದ ದೃಷ್ಟಿಯಿಂದ ಕೇಸ್ಗಳನ್ನು ಹಿಂಪಡೆಯಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿತ್ತು. ಆದರೆ, ನ್ಯಾಯಾಲಯ ಈ ವ್ಯಾಖ್ಯಾನವನ್ನು ಸ್ವೀಕರಿಸಿಲ್ಲ. ಅಪರಾಧ ದಂಡ ಸಂಹಿತೆಯ ಸೆಕ್ಷನ್ 321ನ ನಿಯಮಗಳ ಉಲ್ಲಂಘನೆ ನಡೆದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ: “ನನಗೆ ತೀರ್ಪು ಗೊತ್ತಿಲ್ಲ”
ಈ ತೀರ್ಪಿನ ಬಗ್ಗೆ ಮಾಧ್ಯಮಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೇಳಿದಾಗ, ಅವರು “ಕೋರ್ಟ್ ತೀರ್ಪು ಬಂದಿದೆಯಾ ಅನ್ನೋದು ನನಗೆ ತಿಳಿದಿಲ್ಲ, ಈ ಬಗ್ಗೆ ತಿಳಿದುಕೊಂಡು ಮಾತ್ರ ಪ್ರತಿಕ್ರಿಯಿಸುತ್ತೇನೆ” ಎಂದು ಉತ್ತರಿಸಿದರು.
ಬಿಜೆಪಿಯಿಂದ ತೀವ್ರ ವಾಗ್ದಾಳಿ
ಇದರ ಬೆನ್ನಲ್ಲೇ ಬಿಜೆಪಿ ಮುಖಂಡ ಸಿಟಿ ರವಿ ತೀವ್ರವಾಗಿ ಪ್ರತಿಕ್ರಿಯಿಸುತ್ತಾ, “ಕೋರ್ಟ್ ತೀರ್ಪು ಸ್ವಾಗತಾರ್ಹ. ಹಿಂದೂ ಸತ್ತರೆ ರೌಡಿ ಶೀಟರ್, ಹಿಂದುಯೇತರರಾದರೆ ಕರುಳು ಕಿತ್ತು ಬರುತ್ತದೆ. ಹೀಗಾಗಿ ನ್ಯಾಯಾಲಯ ಕೊಟ್ಟ ತೀರ್ಪು ಸಮಯೋಚಿತ .ಕೇಸ್ ವಾಪಸ್ ಪಡೆದ ಪರಿಣಾಮವೇ ಉದಯಗಿರಿ ಘಟನೆ ನಡೆಯಿತು. ಯಾವುದನ್ನು ರಾಜಕೀಯಕ್ಕೆ ಬಳಸಬಾರದು ಎಂಬ ಪ್ರಜ್ಞೆ ಇಲ್ಲ. ಹಾಗಾಗಿ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿದ್ದು ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದೊಂದು ಪಕ್ಷಪಾತದ ರಾಜಕಾರಣ. ಹಿಂದುಗಳ ಮೇಲೆ ಕೇಸ್ ಇದ್ದರೆ ರೌಡಿ ಅಂತ ಹೇಳ್ತಾರೆ, ಇತರರ ಬಗ್ಗೆ ಬಂದರೆ ಕರುಣೆ ತೋರ್ತಾರೆ. ಹಾಗಾಗಿ ನ್ಯಾಯಾಲಯದ ಛೀಮಾರಿ ಸಿದ್ಧರಾಮಯ್ಯ ಸರ್ಕಾರಕ್ಕೆ ತರಬೇತಿ ಆಗಬೇಕು” ಎಂದು ಹರಿಹಾಯ್ದರು.

ಹುಬ್ಬಳ್ಳಿ ಗಲಭೆ ಏನು?
2022ರ ಏಪ್ರಿಲ್ 16ರಂದು ಹುಬ್ಬಳ್ಳಿಯಲ್ಲಿ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿದ್ದ. ಇದರಿಂದ ಕೋಮು ಗಲಭೆ ಹೊತ್ತಿಕೊಂಡಿತ್ತು. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ಪ್ರತಿಭಟನೆಯಿಂದ ಗಲಭೆ ಉಂಟಾಗಿ, ಕಲ್ಲು ತೂರಾಟ, ವಾಹನ ಹಾನಿ ಹಾಗೂ ಪೊಲೀಸರು ಗಾಯಗೊಂಡ ಘಟನೆ ನಡೆದಿತ್ತು. ಈ ಸಂಬಂಧ 11 FIR ದಾಖಲಾಗಿದ್ದು, 155 ಮಂದಿ ವಿರುದ್ಧ ಕೇಸ್ ದಾಖಲಿಸಲಾಗಿತ್ತು.
2024ರ ಸೆಪ್ಟೆಂಬರ್ನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಎಸ್ಪಿ ಹಾಗೂ ಕಮಿಷನರ್ಗಳಿಗೆ ಪತ್ರ ಬರೆದ ಡಿಜಿ-ಐಜಿ, ಕೇಸ್ ಹಿಂಪಡೆಯಲು ವರದಿ ಕೋರಿದ್ದರು. ನಂತರ ಕ್ಯಾಬಿನೆಟ್ ಸಭೆಯಲ್ಲಿ ಈ ಪ್ರಕರಣವನ್ನು ಹಿಂಪಡೆಯಲು ನಿರ್ಧಾರವಾಯಿತು.
ಹೈಕೋರ್ಟ್ ಎಚ್ಚರಿಕೆ: “ಸರ್ಕಾರದ ಕ್ರಮ ನ್ಯಾಯಸಮ್ಮತವಲ್ಲ”
PIL ವಿಚಾರಣೆಯ ವೇಳೆ ನ್ಯಾಯಮೂರ್ತಿಗಳು “ಸರ್ಕಾರದ ಈ ನಿರ್ಧಾರ ನಿಯಮಬಾಹಿರವಾಗಿದ್ರೆ ನಾವು ಒಪ್ಪಲಾರದು. ಪ್ರಕರಣಗಳ ಹಿಂಪಡೆಗೆ ಸರಿಯಾದ ವಿಧಾನ ಹಾಗೂ ಕಾರಣವಿರಬೇಕು” ಎಂದು ಎಚ್ಚರಿಸಿದ್ದರು. ಹಾಗಾಗಿ ಕೊನೆಗೆ ನ್ಯಾಯಾಲಯದ ತೀರ್ಪು ಸರ್ಕಾರದ ವಿರುದ್ಧ ಹೊರಬಿದ್ದು, ಆದೇಶವನ್ನು ರದ್ದುಗೊಳಿಸಲಾಗಿದೆ.
ಇದು ಮುಂದಿನ ರಾಜಕೀಯ ಚರ್ಚೆಗೆ ನಾಂದಿ?
ಈ ತೀರ್ಪು ರಾಜ್ಯ ರಾಜಕೀಯದಲ್ಲಿ ಹೊಸ ಬೆಳವಣಿಗೆಗೆ ನಾಂದಿಯಾಗಬಹುದು. ಸಿದ್ದರಾಮಯ್ಯ ಸರ್ಕಾರದ ನಿರ್ಧಾರ, ಹೈಕೋರ್ಟ್ ತೀರ್ಪು, ವಿರೋಧ ಪಕ್ಷದ ಆಕ್ರೋಶ – ಈ ಎಲ್ಲವೂ ಮುಂದಿನ ದಿನಗಳಲ್ಲಿ ನೀತಿಯ ಪ್ರಶ್ನೆ, ರಾಜಕೀಯ ಮೌಲ್ಯಗಳು ಮತ್ತು ಸಾಮಾನ್ಯ ಜನರ ಭದ್ರತೆ ಬಗ್ಗೆ ಭಾರೀ ಚರ್ಚೆಗಳಿಗೆ ಕಾರಣವಾಗಲಿದೆ.
