ಗದಗ, ಮೇ 26:ನಗರದ ಪ್ರತಿಷ್ಠಿತ ತೋಂಟದಾರ್ಯ ಮಠದ ಜಾತ್ರೆಯಲ್ಲಿ ಅನ್ಯ ಧರ್ಮದ ಹಾಗೂ ಇತರ ರಾಜ್ಯಗಳಿಂದ ಬಂದ ವ್ಯಾಪಾರಸ್ಥರಿಗೆ ಅವಕಾಶ ನೀಡಲಾಗಿದೆ ಎಂಬ ಕಾರಣದಿಂದ ಶ್ರೀರಾಮಸೇನೆ ಗದಗ ನಗರದಲ್ಲಿ ಇಂದು ಬಂದ್ಗೆ ಕರೆ ನೀಡಿತ್ತು. ಈ ಬಂದ್ ಮತ್ತು ಪ್ರತಿಭಟನೆ ಹಿನ್ನೆಲೆ ನಗರದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗುವ ಮುನ್ಸೂಚನೆ ಹಿನ್ನೆಲೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.
ಬಂದ್ಗೆ ಕಾರಣವೇನು?
ಪ್ರತಿ ವರ್ಷ ಸಹಸ್ರಾರು ಜನರು ಭಾಗವಹಿಸುವ ತೋಂಟದಾರ್ಯ ಮಠದ ಜಾತ್ರೆ ಈ ಬಾರಿ ಎಲ್ಲರ ಗಮನ ಸೆಳೆದದ್ದು, ಜಾತ್ರೆಯಲ್ಲಿ ಬೇರಧರ್ಮದ ಹಾಗೂ ಇತರ ರಾಜ್ಯದ ವ್ಯಾಪಾರಸ್ಥರಿಗೆ ಅವಕಾಶ ನೀಡಿರುವುದಕ್ಕೆ ಶ್ರೀರಾಮಸೇನೆ ತೀವ್ರ ವಿರೋಧ ವ್ಯಕ್ತಪಡಿಸಿದೆ. “ಇದು ನಮ್ಮ ಸಂಸ್ಕೃತಿ, ಮಠದ ಆಚರಣೆಗಳಲ್ಲಿ ಬೇರಧರ್ಮದ ವ್ಯಾಪಾರಸ್ಥರ ಹಸ್ತಕ್ಷೇಪ ಅನುಚಿತ” ಹಾಗೂ ಜಾತ್ರಾ ಅಂಗಡಿಗಳ ರಸ್ತೆ ವಿಷಯ ಸೇರಿದಂತೆ, ಜಾತ್ರೆ ಮುಂಚಿತ ದಿನಗಳಿಂದಲೂ, ಶ್ರೀರಾಮಸೇನೆ ಸಂಘಟನೆ ಹಾಗೂ ತೋಂಟದಾರ್ಯ ಮಠದ ಭಕ್ತರ ನಡುವೆ ಈ ವಿಷಯವಾಗಿ ಹಗ್ಗ-ಜಗ್ಗಾಟ ನಡೆಯುತ್ತಲೇ ಬಂದಿದೆ. ಇದೀಗ ಮುಂದುವರೆದು ಇಂದು ಸಂಘಟನೆ ಗದಗ ಬಂದ್ ಗೆ ಕರೆ ನೀಡಿತ್ತು.
ಮುಂಜಾಗ್ರತಾ ಕ್ರಮಗಳು
ಬಂದ್ ಹಿನ್ನೆಲೆ ಗದಗ-ಬೆಟಗೇರಿ ಅವಳಿ ನಗರದಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಆಡಳಿತ ನಿಷೇಧಾಜ್ಞೆ ಜಾರಿಗೆ ಹೇರಿತ್ತು. ಎರಡು ಕೆಎಸ್ಆರ್ಪಿ ತುಕಡಿಗಳು, ಆರು ಡಿಆರ್ ಪೆಟ್ರೋಲ್ ತಂಡಗಳು, 200 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ನಾಲ್ವರು ಡಿವೈಎಸ್ಪಿ, 10 ಸಿಪಿಐ ಹಾಗೂ 10 ಪಿಎಸ್ಐಗಳನ್ನು ನೇಮಿಸಲಾಗಿತ್ತು. ಮಠದ ಸುತ್ತ ಹಾಗೂ ಪ್ರಮುಖ ರಸ್ತೆಗಳನ್ನು ಸಂಪೂರ್ಣವಾಗಿ ಖಾಕಿ ಸೇನೆ ಆವರಿಸಿಕೊಂಡಿತ್ತು.

ಮೇಲಿನ ಈ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ
ಆದರೂ ಪ್ರತಿಭಟನೆಯ ಲೀಲೆಯೇ ಬೇರೆ!
ಎಲ್ಲ ದಿಕ್ಕುಗಳಿಂದ ಮುಚ್ಚಿದ ಭದ್ರತಾ ವ್ಯವಸ್ಥೆಯ ನಡುವೆಯೂ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ್ ಕಣ್ಣು ತಪ್ಪಿಸಿ ಜಾತ್ರಾ ಬೀದಿಗೆ ನುಗ್ಗಿ ತಮ್ಮ ಹಠ ಸಾಧಿಸಿದರು. ಪಕ್ಕದ ರಸ್ತೆಯಿಂದ ಜಾತ್ರಾ ರಸ್ತೆಗೆ ಸಂಪರ್ಕವಿರುವ ಕಿರಿದಾದ ಮಾರ್ಗ ಹುಡುಕಿ ಒಳನುಸುಳಿದ ಪ್ರತಿಭಟನಾಕಾರರು “ಜೈ ಶ್ರೀರಾಮ” ಘೋಷಣೆ ಕೂಗುತ್ತ ವೇಗವಾಗಿ ಜಾತ್ರಾ ಅಂಗಡಿಗಳ ಮಧ್ಯೆ ಪ್ರವೇಶಿಸಿ, ಧಿಕ್ಕಾರ ಘೋಷಣೆ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.ಪೊಲೀಸರು ತಕ್ಷಣವೇ ಮಧ್ಯಪ್ರವೇಶಿಸಿ, ಕಾರ್ಯಕರ್ತರನ್ನು ಬಂಧಿಸಿದರು. ಈ ವೇಳೆ ನೂಕುನುಗ್ಗಲು, ತಳ್ಳಾಟವೂ ಆಯಿತು,ಶ್ರೀರಾಮಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ್ ಸೇರಿ 20 ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.
ಯಶಸ್ವಿಯಾಗದ ಬಂದ್..! ಆದರೆ ಪ್ರತಿಭಟನೆಯ ಹಠ..
ನಸುಕಿನ ಜಾವದಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಮುಖ ನಾಯಕರನ್ನು ವಶಕ್ಕೆ ತೆಗೆದುಕೊಂಡರೂ, ಕೆಲವು ಕಾರ್ಯಕರ್ತರು ಬದಲಾದ ಮಾರ್ಗಗಳಿಂದ ಪ್ರತಿಭಟನೆ ನಡೆಸಿದ್ದು, ಪೊಲೀಸರ ಪಾಲಿಗೆ ಸವಾಲಾಗಿ ಪರಿಣಮಿಸಿತು. ನಾಲ್ಕೂ ದಿಕ್ಕಿನಲ್ಲೂ ಪೊಲೀಸ್ ತನ್ನ ಭದ್ರ ಕೋಟೆ ನಿರ್ಮಿಸಿದ್ದರೂ ಸಹ, ಅದೆಲ್ಲವನ್ನೂ ಬೇಧಿಸಿ, ಕಾರ್ಯಕರ್ತರು ಒಳನುಸುಳಿದ್ದು, ಪೊಲೀಸರ ತಲೆಬಿಸಿ ಮಾಡಿದ್ದಂತೂ ಸುಳ್ಳಲ್ಲ..ಇತ್ತ ಬೆಳಿಗ್ಗೆಯಿಂದಲೇ ಠಿಕಾಣಿ ಹೂಡಿರೋ ಪೊಲೀಸರು, ಜಿಟಿಜಿಟಿ ಮಳೆಯ ನಡುವೆಯೂ, ಚಳಿ, ಗಾಳಿ, ಮಳೆ ಎನ್ನದೇ, ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದಂತೂ ಸಹ ಅಷ್ಟೇ ಸತ್ಯ..

ಇನ್ನು ಶ್ರೀರಾಮಸೇನೆ ಹಾಗೂ ಇನ್ನಿತರ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಬಂದ್ ಬಹುತೇಖವಾಗಿ ಯಶಸ್ವಿ ಆಗಲಿಲ್ಲ. ಎಲ್ಲೋ ಒಂದೆರೆಡು ಅಂಗಡಿ, ಮುಗ್ಗುಟ್ಟುಗಳು ಬಾಗಿಲು ಹಾಕಿಕೊಂಡಿದ್ದು ಬಿಟ್ಟರೆ,ಗದಗ ಬೆಟಗೇರಿ ಅವಳಿ ನಗರ ಯಥಾಸ್ಥಿತಿಯಿಂದಲೇ ಕೂಡಿತ್ತು. ಆದರೆ ಯಾವುದೇ ಧಿಕ್ಕಾರ, ಘೋಷಣೆ ಕೂಗದ ಹಾಗೆ, ಇಂದಿನ ದಿನವನ್ನ ಯಶಸ್ವಿಗೊಳಿಸಬೇಕೆಂದುಕೊಂಡಿದ್ದ ಪೊಲೀಸರಿಗೆ, ಸ್ವಲ್ಪ ನಿರಾಶೆಯಾಯಿತು. ಕಾರಣ, ಅಷ್ಟೆಲ್ಲಾ ಖಾಕಿ ಸರ್ಪಗಾವಲನ್ನೂ ಬೆಧಿಸಿ ಬಂದ ಕಾರ್ಯಕರ್ತರು, ತಮ್ಮ ಪ್ರತಿಭಟನಾ ಘೋಷಣೆಗಳ ಮೂಲಕ, ಪ್ರತಿಭಟನೆಗೆ ಯತ್ನಿಸಿ ಕೊನೆಗೂ ತಮ್ಮ ಹಠ ತೀರಿಸಿಕೊಂಡರು.
