ಗದಗ: ಗದಗ ತಹಶೀಲ್ದಾರ್ ಕಚೇರಿಯಲ್ಲಿ ಉಪತಹಶೀಲ್ದಾರ ಹಾಗೂ ಅವರ ಸಹಚರರು ನಡೆಸಿದ ಹಲ್ಲೆ ಪ್ರಕರಣ ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಹಲವು ಪ್ರಶ್ನೆಗಳನ್ನು ಎಬ್ಬಿಸಿದ್ದು, ಉಪ ತಹಶೀಲ್ದಾರ್ ಹಾಗೂ ಕಾಂಗ್ರೆಸ್ ಮುಖಂಡ &ಟೀಂ ಗೂಂಡಾ ವರ್ತನೆ ನಡೆಸಿದ್ದು, ಈ ಕುರಿತು ಮಾಜಿ ಸಚಿವ ಸಿ.ಸಿ. ಪಾಟೀಲ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಉಪತಹಶೀಲ್ದಾರನನ್ನ ಸೇವೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತು ಗದಗನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿ.ಸಿ.ಪಾಟೀಲ ಅವರು “ಇಂತಹ ಘಟನೆಗಳು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿತಕ್ಕೊಳಗಾಗಿರುವುದನ್ನೇ ಸೂಚಿಸುತ್ತವೆ. ಕಳೆದ ಒಂದು ವರ್ಷದಿಂದ ಜನತೆ ಕಾನೂನು ಮತ್ತು ಶಾಂತಿಸುಧಾರಣೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಹಲವಾರು ಗಂಭೀರ ಘಟನೆಗಳು ನಡೆದರೂ ಅದಕ್ಕೆ ಯಾವುದೇ ಕಠಿಣ ಕ್ರಮ ಕೈಗೊಳ್ಳಲಾಗುತ್ತಿಲ್ಲ,” ಅದರಲ್ಲೂ ತಹಶೀಲ್ದಾರ ಕಚೇರಿಯ ಘಟನೆ ಕಾನೂನು ಸಚಿವರ ತವರಲ್ಲೇ ಕಾನೂನು ಹದಗೆಟ್ಟು ಹೋಗಿದೆ ಅನ್ನೋದಕ್ಕೆ ಸಾಕ್ಷೀಕರಿಸುತ್ತದೆ ಎಂದು ಕಿಡಿಕಾರಿದರು.

*ಮೇಲಿನ ಪೋಸ್ಟ್ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ*
“ಚೇರ್ ಎತ್ತಿಕೊಂಡು ಹೊಡೆದ ದೃಶ್ಯ ಜನತೆ ನೋಡಿದ್ದಾರೆ”
ಘಟನೆ ಕುರಿತು ಪಾಟೀಲರು ಕಿಡಿಕಾರಿದ್ದು, “ಉಪ ತಹಶೀಲ್ದಾರ್ ವಾಲ್ಮೀಕಿ ಅವರು ಕಚೇರಿಯಲ್ಲಿಯೇ ಗಲಾಟೆ ಮಾಡಿಕೊಂಡು, ಕುರ್ಚಿ ಎತ್ತಿಕೊಂಡು ಹೊಡೆಯುವಂತೆ ವರ್ತಿಸಿದ್ದಾರೆ. ಇದು ನಿಜವಾದ ಆಡಳಿತವೋ ಅಥವಾ ದಬ್ಬಾಳಿಕೆಯ ರಾಜಕಾರಣವೋ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ,” ಎಂದು ಹೇಳಿದರು.
ಸಸ್ಪೆನ್ಶನ್ ಸಾಕಾಗದು, ಸೇವೆಯಿಂದ ವಜಾ ಮಾಡಬೇಕು..
ಜಿಲ್ಲಾಧಿಕಾರಿ (ಡಿಸಿ) ಅವರಿಂದ ಈ ಕುರಿತು ಮಾಹಿತಿ ಪಡೆದಿರುವುದಾಗಿ ಪಾಟೀಲ ತಿಳಿಸಿದ್ದಾರೆ. ಡಿಸಿ ಅವರು ಉಪ ತಹಶೀಲ್ದಾರ್ ಎಸ್.ಬಿ.ವಾಲ್ಮೀಕಿ ಅವರನ್ನು ಸಸ್ಪೆಂಡ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆಂದು ಹೇಳಲಾಗಿದೆ. ಆದರೆ ಪಾಟೀಲರ ಅಭಿಪ್ರಾಯದಲ್ಲಿ, “ಸಸ್ಪೆನ್ಶನ್ ಅಷ್ಟೇ ಸಾಲದು, ಇಂಥವರನ್ನು ತಕ್ಷಣ ಸೇವೆಯಿಂದ ವಜಾ ಮಾಡಬೇಕು. ಇಲ್ಲದಿದ್ದರೆ ಜನರು ನ್ಯಾಯಕ್ಕಾಗಿ ಬೀದಿಗೆ ಇಳಿಯಬೇಕಾದ ಸ್ಥಿತಿ ಬರಬಹುದು,” ಎಂದು ಎಚ್ಚರಿಸಿದರು.

ಡಿಸಿ ಕಚೇರಿ ಎದುರು ಧರಣಿಗೆ ಎಚ್ಚರಿಕೆ
“ನಾನು ಈ ಘಟನೆಯ ಸಂಪೂರ್ಣ ವರದಿ ಪಡೆದು ಸರ್ಕಾರದ ಗಮನಕ್ಕೆ ತರಲು ನಿರ್ಧರಿಸಿದ್ದೇನೆ. ಉಪ ತಹಶೀಲ್ದಾರ್ ಎಸ್.ಬಿ.ವಾಲ್ಮೀಕಿ ಅವರನ್ನು ವಜಾ ಮಾಡದಿದ್ದರೆ, ನಾನು ಡಿಸಿ ಕಚೇರಿ ಎದುರು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡುತ್ತೇನೆ,” ಎಂದು ಪಾಟೀಲರು ಹೇಳಿದರು.
ಸಾಮಾನ್ಯ ನಾಗರಿಕರ ಭದ್ರತೆ ಪ್ರಶ್ನಾರ್ಥಕ
ರಾಜ್ಯ ಗೃಹಸಚಿವ ಪರಮೇಶ ಅವರ ವ್ಯಕ್ತಿತ್ವವನ್ನು ಗೌರವಿಸುತ್ತೇನೆ ಎಂದು ತಿಳಿಸಿದ ಪಾಟೀಲರು ಆದರೆ, “ಅವರು ಒಳ್ಳೆಯ ವ್ಯಕ್ತಿಯಾಗಿದ್ದರೂ ಇಲಾಖೆ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ. ಇಂತಹ ಘಟನೆಗಳು ಸಾರ್ವಜನಿಕರಲ್ಲಿ ಭೀತಿಯ ಪರಿಸ್ಥಿತಿಯನ್ನು ಉಂಟುಮಾಡುತ್ತವೆ,” ಎಂದು ಟೀಕಿಸಿದರು.
ಈ ಘಟನೆಯ ಕುರಿತು ಜಿಲ್ಲೆಯ ಆಡಳಿತ ಮತ್ತು ರಾಜ್ಯ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಮತ್ತು ರಾಜಕೀಯ ಪಕ್ಷಗಳು ಒತ್ತಾಯಿಸುತ್ತಿವೆ. ಕಾನೂನು ಸುವ್ಯವಸ್ಥೆ ಸಾಬೀತುಪಡಿಸುವ ನಿಟ್ಟಿನಲ್ಲಿ ಸ್ಪಷ್ಟ ಕ್ರಮಕೈಗೊಳ್ಳಬೇಕಿದೆ ಎಂದರು.
