ಲಕ್ಷೇಶ್ವರ, ಎಪ್ರಿಲ್ 29 – ಗದಗ ಜಿಲ್ಲೆಯ ಲಕ್ಷೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಸೂರಣಗಿ ಗ್ರಾಮದಲ್ಲಿ ಅನಾಮಿಕ ಮಹಿಳೆಯ ಶವ ಪತ್ತೆಯಾಗಿದ್ದು, ಪ್ರಕರಣದ ತನಿಖೆಯಲ್ಲಿ ಇದು ಪ್ರಣಯ ಸಂಬಂಧದ ಹಿನ್ನೆಲೆಯಲ್ಲಿ ನಡೆದ ಹತ್ಯೆ ಎಂಬುದು ಬೆಳಕಿಗೆ ಬಂದಿದೆ. ಮೃತಳ ತಂಗಿಯು ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಏಪ್ರಿಲ್ 23ರಂದು ಸೂರಣಗಿ ಹತ್ತಿರದ ಬೈಲ ಬಸವೇಶ್ವರ ಕಟ್ಟೆ ಬಳಿ ರಸ್ತೆಗೆ ಹೊಂದಿ ಇರುವ ಸರೂವಿನಲ್ಲಿ ಸುಮಾರು 30-35 ವರ್ಷದ ಮಹಿಳೆಯ ಶವ ಪತ್ತೆಯಾಗಿತ್ತು. ಪ್ರಕರಣವನ್ನು ಸಂಬಂಧಪಟ್ಟ ಕಲಂ 194(3)(iv) ಬಿ.ಎನ್.ಎಸ್.ಎಸ್. 2023 ಅಡಿಯಲ್ಲಿ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಲಾಗಿತ್ತು.

ಪೋಲೀಸರು ಕೈಗೊಂಡ ತನಿಖೆಯಲ್ಲಿ ಮೃತಳನ್ನು ಶ್ರೀಮತಿ ಲಕ್ಷ್ಮೀ ಎಂಬವರು ಎಂದು ಗುರುತಿಸಲಾಯಿತು. ಅವರು ದೇವಿಹಾಳ ಮೂಲದವರು ಹಾಗೂ ನೆಲೊಗಲ್ ನಿವಾಸಿಯಾಗಿದ್ದು, ಜೀವನೋಪಾಯಕ್ಕಾಗಿ ಮಂಗಳೂರಿಗೆ ತೆರಳಿ ಅಲ್ಲಿಯೇ ಆರೋಪಿ ಸುನೀಲ್ ಅಶೋಕ ಮಲ್ಲಾರಿ ಎಂಬವನೊಂದಿಗೆ ಪ್ರೇಮ ಸಂಬಂಧ ಬೆಸೆದಿದ್ದರು. ನಂತರ ಸಂಬಂಧದಲ್ಲಿನ ಒತ್ತಡ ಮತ್ತು ಹಣದ ಬೇಡಿಕೆಯ ಹಿನ್ನೆಲೆಯಲ್ಲಿ ಆರೋಪಿ ಹಾಗೂ ಅವನ ಮೂವರು ಸ್ನೇಹಿತರು ಸೇರಿ ಹತ್ಯೆ ಮಾಡಿರುವುದಾಗಿ ಪೋಲೀಸರಿಗೆ ಗೊತ್ತಾಗಿದೆ.
ಆರೋಪಿ ಸುನೀಲ್ ಮಲ್ಲಾರಿ (31, ಗೊಟಗೋಡಿ), ಸಿದ್ದಪ್ಪ ಕುಬಸದ (23, ಬಿಸೆಟ್ಟಿಕೊಪ್ಪ), ನಟರಾಜ ನಿರಲಗಿ (24, ಗೊಟಗೋಡಿ), ಹಾಗೂ ರಮೇಶ್ ಅಲಿಯಾಸ್ ಮುತ್ತುರಾಜ ತಳವಾರ (21, ಮಡ್ಲಿ) ಎಂಬುವರು ಸೇರಿ ಲಕ್ಷ್ಮಿಯನ್ನು ಹಾನಗಲ್ ಬಳಿ ಕಾರಿನಲ್ಲಿ ಕೊಂದು ನಂತರ ಶವವನ್ನು ಸೂರಣಗಿ ಬಳಿ ಬಿಸಾಕಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಮೇಲಿನ ಪೋಸ್ಟ್ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಆರೋಪಿಗಳಿಂದ ಹತ್ಯೆಗೆ ಬಳಸಿದ ಬಿಳಿ ಬಣ್ಣದ ಕಾರು (ಕೆಎ-20 Z 2410), ಬೈಕ್ (ಕೆಎ-27 EG 7952), ಕೇಬಲ್ ವೈರ್ ಮತ್ತು ನಾಲ್ಕು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣವನ್ನು ಬೇಧಿಸಲು ಶಿರಹಟ್ಟಿ ವೃತ್ತದ ಸಿಪಿಐ ನಾಗರಾಜ ಮಾಡಳ್ಳಿ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಹೆಚ್ಚುವರಿ ಎಸ್.ಪಿ ಎಮ್.ಬಿ. ಸಂಕದ, ಡಿಎಸ್‌ಪಿ ಪ್ರಭು ಕಿರೆದಳ್ಳಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಪೊಲೀಸರ ಈ ಉತ್ಕೃಷ್ಟ ಕಾರ್ಯವನ್ನು ಗದಗ ಎಸ್‌ಪಿ ಬಿ.ಎಸ್.ನೇಮಗೌಡ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ತನಿಖಾ ತಂಡದ ಎಲ್ಲಾ ಅಧಿಕಾರಿಗಳಿಗೆ ಶ್ಲಾಘನೆ ಸಲ್ಲಿಸಿದ್ದಾರೆ.
