ಗದಗ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ.) ಬೆಂಗಳೂರು ಇದರ ಅಂಗ ಸಂಸ್ಥೆಯಾದ ಗದಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಬಸವರಾಜ ಬಳ್ಳಾರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ಈ ಹಿನ್ನಲೆಯಲ್ಲಿ ಅವರ ಸನ್ಮಾನ ಕಾರ್ಯಕ್ರಮವನ್ನು ಭಾನುವಾರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಸ್ನೇಹಿತರು ಹಮ್ಮಿಕೊಂಡಿದ್ದರು.
ನಗರದ ಪತ್ರಿಕಾ ಭವನದಲ್ಲಿ ಜರುಗಿದ ಈ ಸನ್ಮಾನ ಸಮಾರಂಭದಲ್ಲಿ ಬಸವರಾಜ ಬಳ್ಳಾರಿ ಅವರನ್ನು ಶಾಲು ಹೊದಿಸಿ, ಭವ್ಯ ಹಾರ ಹಾಕಿ, ಫಲಪುಷ್ಪ ನೀಡಿ ಗೌರವಿಸಲಾಯಿತು. ಮಾಧ್ಯಮದವರಿಂದ ಈ ರೀತಿಯ ಗೌರವ ದೊರೆತಿರುವುದು ತಮ್ಮ ಜೀವನದಲ್ಲಿ ವಿಶಿಷ್ಟ ಅನುಭವವೆಂದು ಅವರು ಭಾವನಾತ್ಮಕವಾಗಿ ಅಭಿಪ್ರಾಯಪಟ್ಟರು.

ಮೇಲಿನ ಪೋಸ್ಟ್ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಸ್ನೇಹ, ಪ್ರೀತಿ ಎನ್ನುವುದು ಸೌಲಭ್ಯದಿಂದ ದೊರೆಯದು: ಬಸವರಾಜ ಬಳ್ಳಾರಿ
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಬಸವರಾಜ ಬಳ್ಳಾರಿ ಅವರು, “ಬದುಕಿನಲ್ಲಿ ಬೇಕಾದ ಎಲ್ಲವನ್ನೂ ಶ್ರಮಪಟ್ಟು ಪಡೆದುಕೊಳ್ಳಬಹುದು. ಆದರೆ ನಿಜವಾದ ಸ್ನೇಹ ಹಾಗೂ ಪ್ರೀತಿ ಸುಲಭವಾಗಿ ಯಾರಿಂದಲೂ ಸಿಗುವುದಿಲ್ಲ. ಗದಗ ಜಿಲ್ಲೆಯ ಮಾಧ್ಯಮ ಬಂಧುಗಳು ನನಗೆ ತೋರಿಸಿದ ಪ್ರೀತಿ, ನಂಬಿಕೆ ನನ್ನ ಹೃದಯದಲ್ಲಿ ಸದಾ ಉಳಿಯುತ್ತದೆ. ನಿಮ್ಮ ಈ ವಿಶ್ವಾಸಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ” ಎಂದು ಭಾವುಕತೆ ಮೆರೆದರು.
ಅವರು ಮುಂದುವರಿದು, “ಸರ್ಕಾರಿ ನೌಕರರ ಹಿತಾಸಕ್ತಿಗಾಗಿ ನಿಷ್ಠೆಯಿಂದ ಸೇವೆ ಸಲ್ಲಿಸುವುದೇ ನನ್ನ ಧ್ಯೇಯ. ಈ ಕಾರ್ಯದಲ್ಲಿ ರವಿ ಗುಂಜೀಕರ ಅವರ ಮಾರ್ಗದರ್ಶನ ಹಾಗೂ ಸಿ. ಎಸ್. ಷಡಕ್ಷರಿ ಅವರ ನಾಯಕತ್ವದಲ್ಲಿ ಸಂಘದ ಚಟುವಟಿಕೆಗಳನ್ನು ಮುಂದುವರಿಸುತ್ತೇನೆ. ಜಿಲ್ಲೆಯಲ್ಲಿ ಸರ್ಕಾರಿ ನೌಕರರ ಸಮಸ್ಯೆಗಳಿಗೆ ಸಮರ್ಪಿತವಾಗಿ ಪರಿಹಾರ ಕಂಡುಕೊಳ್ಳಲು ನಾನು ಬದ್ಧನಾಗಿದ್ದೇನೆ” ಎಂದು ಸ್ಪಷ್ಟಪಡಿಸಿದರು.

ಸರ್ಕಾರಿ ನೌಕರರು – ಮಾಧ್ಯಮದವರ ಉಲ್ಲಾಸಕ್ಕಾಗಿ ವಾರ್ಷಿಕ ಕ್ರೀಡಾಕೂಟ ಚಿಂತನೆ
ಸಮಾರಂಭದ ಅಂತ್ಯದಲ್ಲಿ ಅವರು, “ಸರ್ಕಾರಿ ನೌಕರರು ಹಾಗೂ ಮಾಧ್ಯಮದವರು ಪ್ರತಿದಿನವೂ ಕೆಲಸದ ಒತ್ತಡದಲ್ಲಿ ತೊಡಗಿರುವುದರಿಂದ ಅವರಿಗೆ ನಿರಾಳ ಕ್ಷಣ ನೀಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪತ್ರಕರ್ತರು ಹಾಗೂ ನೌಕರರ ಸಂಯುಕ್ತ ವಾರ್ಷಿಕ ಕ್ರೀಡಾಕೂಟವನ್ನು ಆಯೋಜಿಸುವ ಕುರಿತು ಚಿಂತನೆ ನಡೆಸಲಾಗಿದೆ. ಜಿಲ್ಲೆಯಲ್ಲಿ ನಡೆಯುವ ಈ ರೀತಿಯ ಚಟುವಟಿಕೆಗಳು ಇತರೆ ಜಿಲ್ಲೆಗಳಿಗೆ ಮಾದರಿಯಾಗಬೇಕು ಎಂಬದು ನಮ್ಮ ಆಶಯ” ಎಂದು ತಿಳಿಸಿದರು.
ಅಭಿಮಾನ ಭರಿತ ಅಭಿಪ್ರಾಯ: ಎಚ್. ಎಮ್. ಶರೀಫನವರ
ಹಿರಿಯ ಪತ್ರಕರ್ತ ಎಚ್. ಎಮ್. ಶರೀಫನವರ ಅವರು ಮಾತನಾಡಿ, “ಬಸವರಾಜ ಬಳ್ಳಾರಿ ಅವರ ಜಿಲ್ಲಾಧ್ಯಕ್ಷರಾಗಿರುವುದು ನಿಜಕ್ಕೂ ಸಂತೋಷದ ಸಂಗತಿ. ಅವರು ಸ್ನೇಹಪರ ವ್ಯಕ್ತಿಯಾಗಿ ಎಲ್ಲರೊಡನೆ ಉತ್ತಮ ಸಂಬಂಧ ಹೊಂದಿದ್ದಾರೆ. ಅಧಿಕಾರ ಸ್ಥಾನದಲ್ಲಿದ್ದರೂ ಅಹಂಕಾರವಿಲ್ಲದೆ ನಿಷ್ಠೆಯಿಂದ ಕೆಲಸ ಮಾಡುತ್ತಿರುವುದು ಗಮನಾರ್ಹ. ಇಂತಹ ವ್ಯಕ್ತಿತ್ವದವರು ಸಂಘದ ಅಧ್ಯಕ್ಷರಾಗಿರುವುದು ಅಭಿಮಾನದಿಂದ ಕೂಡಿದ ವಿಷಯ. ಅವರು ಭವಿಷ್ಯದಲ್ಲಿ ಇನ್ನೂ ಉನ್ನತ ಸ್ಥಾನಗಳಿಗೆ ಏರಲಿ ಎಂಬುದು ನನ್ನ ಹಾರೈಕೆ” ಎಂದು ಮನದಾಳದ ಶುಭಾಶಯಗಳನ್ನು ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರು ಸಂಜೀವ್ ಪಾಂಡ್ರೆ, ಗಿರೀಶ್ ಕಮ್ಮಾರ, ಮಂಜು ಪತ್ತಾರ, ಬನೇಶ ಕುಲಕರ್ಣಿ, ಗಣೇಶ ದೊಡ್ಡಮನಿ, ಸಂತೋಷ ಕೊಣ್ಣೂರ, ಸಲೀಂ ಬಳಬಟ್ಟಿ, ಶಂಕರ್ ಗುರಿಕಾರ, ಮಂಜು ಸಾಲೇರ, ನಿಂಗರಾಜ, ಅಶೋಕ ಹೂಗಾರ, ಗೌಸ್, ಶಂಭುಲಿಂಗ, ಸುಯಮೇಂದ್ರ ಕುಲಕರ್ಣಿ ಸೇರಿದಂತೆ ಜಿಲ್ಲೆಯ ವಿವಿಧ ಮಾಧ್ಯಮ ಸಂಸ್ಥೆಗಳ ವರದಿಗಾರರು ಮತ್ತು ಛಾಯಾಗ್ರಾಹಕರು ಉಪಸ್ಥಿತರಿದ್ದು, ಸಮಾರಂಭಕ್ಕೆ ಗೌರವ ಹೆಚ್ಚಿಸಿದರು.