ಮುಂಡರಗಿ (ಗದಗ):
ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಮಧ್ಯರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಪಟ್ಟಣದ ಪ್ರಮುಖ ನ್ಯೂ ಮಹಾಂತೇಶ ಬೇಕರಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಪ್ರಾಥಮಿಕ ಮಾಹಿತಿಯಂತೆ, ಈ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣವಾಗಿದೆ ಎನ್ನಲಾಗಿದೆ.
ಬೆಂಕಿ ರಾತ್ರಿ ಅನಿದ್ರವಾಗಿದ್ದ ಜನರಿಗೆ ಆಘಾತಕಾರಿ ದೃಶ್ಯವನ್ನೇ ಸೃಷ್ಟಿಸಿತು. ಪಟ್ಟಣದ ಬಸ್ ನಿಲ್ದಾಣದ ಎದುರುಗಡೆಯಲ್ಲಿರುವ ಈ ಬೇಕರಿಯಲ್ಲಿ ರಾತ್ರಿ ವೇಳೆ ಬೃಹತ್ ಅಗ್ನಿ ಹೊತ್ತಿಕೊಂಡು ಕ್ಷಣಗಳಲ್ಲಿ ಜ್ವಾಲೆ ಆಕಸ್ಮಿಕವಾಗಿ ವ್ಯಾಪಿಸಿತು. ಬೇಕರಿಯೊಳಗಿದ್ದ ಹಲವಾರು ತಿನಿಸು ಪದಾರ್ಥಗಳು, ಪರಿಕರಗಳು ಮತ್ತು ಇತರೆ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಈ ಅವಘಡದಿಂದಾಗಿ ಬೇಕರಿಗೆ ಸುಮಾರು ರೂ. 25 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂಬುದು ಅಂಗಡಿ ಮಾಲೀಕರ ಪ್ರಾಥಮಿಕ ಅಂದಾಜು.
ಸ್ಥಳಕ್ಕೆ ತಕ್ಷಣವೇ ಮುಂಡರಗಿ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ, ಬೆಂಕಿ ನಂದಿಸುವಲ್ಲಿ ಹರಸಾಹಸ ಪಟ್ಟು ಶ್ರಮಿಸಿದರು. ಬೆಂಕಿಯ ಹೊತ್ತಿಗೆಯು ನೆರೆಹೊರೆಯ ಅಂಗಡಿಗಳಿಗೂ ವ್ಯಾಪಿಸುವ ಮುನ್ನವೇ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಮೇಲಿನ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಅವಘಡದ ಮಾಹಿತಿಯ ನಂತರ ತಹಶೀಲ್ದಾರ ಶ್ರೀ ಪಿ.ಎಸ್. ಯರ್ರಿಸ್ವಾಮಿ ಹಾಗೂ ಪುರಸಭೆ ಸದಸ್ಯರು ಸ್ಥಳಕ್ಕೆ ತಕ್ಷಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಗ್ನಿ ಅವಘಡದ ನಿಖರವಾದ ಕಾರಣ ಮತ್ತು ನಷ್ಟದ ಪ್ರಮಾಣವನ್ನು ಲೆಕ್ಕಹಾಕಲು ಅಂಗಡಿ ಮಾಲೀಕರಿಗೆ ಪೊಲೀಸ್ ಠಾಣೆಗೆ ದೂರು ನೀಡುವಂತೆ ಸೂಚಿಸಿದರು.
ಇನ್ನು ಮಧ್ಯರಾತ್ರಿ ಬೆಂಕಿಯ ಹೊತ್ತಿಗೆಯಲ್ಲಿ ತನ್ನ ಜೀವನಕ್ಕೆ ಆಧಾರವಾಗಿದ್ದ ವ್ಯಾಪಾರವನ್ನೇ ಕಳೆದುಕೊಂಡ ನ್ಯೂ ಮಹಾಂತೇಶ ಬೇಕರಿಯ ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ತಮ್ಮ ನಿತ್ಯ ಜೀವನದ ಆಧಾರವಾಗಿದ್ದ ಅಂಗಡಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ದೃಶ್ಯ ನೋಡಿ ಅವರು ತೀವ್ರ ಅಘಾತಕ್ಕೊಳಗಾಗಿದ್ದಾರೆ.

“ವರ್ಷಗಳ ನಂಬಿಕೆ, ಪರಿಶ್ರಮ, ಕುಟುಂಬದ ಸಹಕಾರದೊಂದಿಗೆ ನಾವು ಈ ಅಂಗಡಿಯನ್ನು ಬೆಳೆಸಿದ್ದೆವು. ನಮ್ಮ ಬದುಕಿಗೆ ಆಧಾರವಾಗಿದ್ದ ಈ ಬೇಕರಿಯೇ ಕಣ್ಣೆದುರೆಯಲ್ಲೇ ಬೆಂಕಿಗೆ ಆಹುತಿಯಾಯಿತು. ಇದೊಂದು ಕನಸು ಕರಕಲಾಗಿದಂತಾಗಿದೆ. ಶ್ರಮಪಟ್ಟ ಸಂಪತ್ತು ಕಣ್ಮುಂದೇ ನಾಶವಾಯಿತು. ಈ ಘಟನೆ ತುಂಬಾ ನೋವು ತಂದಿದೆ,” ಎಂದು ಭಾವುಕರಾದ ಅಂಗಡಿ ಮಾಲೀಕರು ತಮ್ಮ ನೋವನ್ನು ಹಂಚಿಕೊಂಡರು. ಸ್ಥಳೀಯರು ಮತ್ತು ನೆರೆಹೊರೆಯ ವ್ಯಾಪಾರಸ್ಥರು ಕೂಡ ಈ ದುರ್ಘಟನೆಯ ಬಗ್ಗೆ ಶೋಕ ವ್ಯಕ್ತಪಡಿಸಿದ್ದಾರೆ.

ಹಳೆಯ ವಿದ್ಯುತ್ ಸಂಪರ್ಕ ವ್ಯವಸ್ಥೆ ಹಾಗೂ ತಾಂತ್ರಿಕ ನಿರ್ಲಕ್ಷ್ಯದಿಂದ ಇಂತಹ ಅವಘಡಗಳು ಆಗುತ್ತಿರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ವ್ಯಾಪಾರಸ್ಥರು ಮತ್ತು ನಾಗರಿಕರು ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗಿದೆ. ಅಧಿಕಾರಿಗಳು ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.