ಗದಗ:
ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಯುವತಿಗೆ ಒಬ್ಬ ವ್ಯಕ್ತಿ 25 ಲಕ್ಷ ರೂಪಾಯಿ ನೀಡಿ, ನಂತರ ಹಣ ಮರಳಿಸಿಕೊಳ್ಳಲು ಹೋದಾಗ ನ್ಯಾಯ ಸಿಗದೇ ಪೀಡಿತನನ್ನ ಅನುಭವಿಸುತ್ತಿರುವ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿನ ಗಜೇಂದ್ರಗಡದಲ್ಲಿ ನಡೆದಿದೆ.
ರಾಘವೇಂದ್ರ ರಾಠೋಡ ಎಂಬುವರಿಗೆ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಯುವತಿಗೆ ಹಂತ ಹಂತವಾಗಿ ಒಟ್ಟು 25 ಲಕ್ಷ ರೂ. ನೀಡಿದರು. ನಂತರ ಹಣ ವಾಪಸ್ ಕೇಳಿದಾಗ ಯುವತಿ ಹಣ ಕೊಡಲು ನಿರಾಕರಿಸಿದರು. ಈ ಹಿನ್ನೆಲೆಯಲ್ಲಿ ಹತಾಶನಾಗಿ ಆತ್ಮಹತ್ಯೆಗೆ ಯತ್ನಿಸಿದರು.
ರಾಘವೇಂದ್ರ ಪೊಲೀಸರ ಸಹಾಯಕ್ಕಾಗಿ ರೋಣ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದು, ಅಲ್ಲಿ ಸಿಪಿಐ ಸಿದ್ದಪ್ಪ ಬೀಳಗಿ ಅವರ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ. ಅವರ ಪ್ರಕಾರ, ದೂರು ದಾಖಲಿಸಿಕೊಳ್ಳುವ ಬದಲು ಸಿಪಿಐ ಸಿದ್ದಪ್ಪ ಬೀಳಗಿ ಅವರನ್ನು ಬೆದರಿಸಿ 15 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ. ಇದರಲ್ಲಿ ಈಗಾಗಲೇ 3 ಲಕ್ಷ ರೂ. ವಸೂಲಿ ಮಾಡಿರುವುದಾಗಿ ಮತ್ತು ಉಳಿದ ಹಣಕ್ಕಾಗಿ ನಿರಂತರ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿದ್ದಾರೆ.

ಮೇಲಿನ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ರಾಘವೇಂದ್ರ ಮಾಹಿತಿ ಹಕ್ಕಿನಡಿ ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಗಳನ್ನು ನೀಡುವಂತೆ ಕೇಳಿದ್ದಾರೆ. ಅವರ ಪ್ರಕಾರ, ಸಿಪಿಐ ಅವರ ಮೇಲೆ ಹಲ್ಲೆ ನಡೆಸಿದ್ದು, ಬೆದರಿಕೆ ಹಾಕಿ “ನಿನ್ನ ಮೇಲೆ ಅತ್ಯಾಚಾರ (ರೇಪ್) ಕೇಸ್ ಹಾಕಿಸ್ತೀನಿ” ಎಂದು ಬೆದರಿಸಿರುವುದಾಗಿ ತಿಳಿಸಿದ್ದಾರೆ.
ಈ ಕುರಿತಾಗಿ ಗದಗ ಎಸ್ಪಿ ಬಿ.ಎಸ್ ನೇಮಗೌಡ ಮಾಧ್ಯಮದೊಂದಿಗೆ ಮಾತನಾಡಿ, “ಸಿಪಿಐ ವಿರುದ್ಧ ಕೇಳಿಬಂದಿರುವ ಬೆದರಿಕೆ ಮತ್ತು ಲಂಚದ ಆರೋಪಗಳು ಸತ್ಯವಲ್ಲ. ಮಹಿಳೆಗೆ ನೀಡಿದ ಹಣ ಮರಳಿಸಲು ನಮ್ಮ ಅಧಿಕಾರಿಗಳಿಗೆ ಒತ್ತಡ ಬಂದಿತ್ತು. ಈ ಸಂಬಂಧ ತನಿಖೆಗೆ ನರಗುಂದ ಡಿವೈಎಸ್‌ಪಿ ನೇತೃತ್ವದಲ್ಲಿ ಆದೇಶಿಸಲಾಗಿದೆ. ಸಿಪಿಐ ವಿರುದ್ಧ ಆರೋಪ ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಸ್ಪಷ್ಟಪಡಿಸಿದರು.

ಒಟ್ಟಾರೆ, ಇನ್‌ಸ್ಟಾಗ್ರಾಂ ಪರಿಚಯದಿಂದ ಪ್ರೀತಿಗೆ, ನಂತರ ವಂಚನೆಗೆ ತಿರುಗಿದ ಈ ಘಟನೆ ಇದೀಗ ನ್ಯಾಯಕ್ಕಾಗಿ ಪೀಡಿತ ಪ್ರೇಮಿಯ ಹೋರಾಟದ ಕಥೆಯಾಗಿ ಪರಿಣಮಿಸಿದೆ.
