ಗದಗ: ಕಲಾ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಸೇವೆ ಸಲ್ಲಿಸಿರುವ ವಿಜಯ ಕಲಾ ಮಂದಿರ ಸಂಸ್ಥೆಯ ನಿವೃತ್ತ ಪ್ರಾಚಾರ್ಯ ಆರ್. ಡಿ. ಕಡ್ಲಿಕೊಪ್ಪ ಅವರ 65 ನೇ ವರ್ಷದ ಅಭಿಮಾನೋತ್ಸವ ಹಾಗೂ ಅಭಿನಂದನಾ ಸಮಾರಂಭವನ್ನು ಏಪ್ರಿಲ್ 20, ಶನಿವಾರದಂದು ವಿಜ್ಞಾನ ನಗರ ಬಡಾವಣೆಯ ಶ್ರೀ ವಿಶ್ವಕರ್ಮ ಭವನದಲ್ಲಿ ಆಯೋಜಿಸಲಾಗಿದೆ. ಈ ಕುರಿತು ಗದಗ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅಭಿನಂದನಾ ಸಮಿತಿ ಅಧ್ಯಕ್ಷ ಡಾ. ಜಿ. ಬಿ. ಪಾಟೀಲ ಅವರು ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಹಿರಿಯ ರಾಜಕೀಯ ನಾಯಕರಾದ ಬಸವರಾಜ ಹೊರಟ್ಟಿ ಅವರು ಉದ್ಘಾಟಿಸಲಿದ್ದು, ಪ.ಪೂಜ್ಯ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಮಳೆ ರಾಜೇಂದ್ರಮಠ ಮುರನಾಳ ಕ್ಷೇತ್ರ, ನಂದೀಶ್ವರ ನಗರ, ಬಾಗಲಕೋಟೆ ಹಾಗೂ ಶ್ರೀ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಗಳು ಶ್ರೀ ವಿಶ್ವಕರ್ಮ ಏಕದಂಡಗಿಮಠ, ಶಹಪೂರ, ಜಿ. ಯಾದಗಿರಿ ಇವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ಮೇಲಿನ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಆರ್. ಡಿ. ಕಡ್ಲಿಕೊಪ್ಪ ಅವರು ನಾಲ್ಕು ದಶಕಗಳಿಗಿಂತ ಹೆಚ್ಚು ಕಾಲ ವಿಜಯ ಕಲಾ ಮಂದಿರ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಹಾಗೂ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಕಲಾ ವಿದ್ಯಾರ್ಥಿಗಳಿಗೆ ತನು-ಮನ-ಧನದಿಂದ ಸೇವೆ ಸಲ್ಲಿಸಿ, ಪ್ರಾಮಾಣಿಕ ಶಿಕ್ಷಣ ಹಾಗೂ ಸಾಂಸ್ಕೃತಿಕ ಬೆಂಬಲ ನೀಡಿದ ಇವರು ವಿದ್ಯಾರ್ಥಿಗಳಲ್ಲಿ ಅಪಾರ ಪ್ರೀತಿಯನ್ನು ಸಂಪಾದಿಸಿದ್ದಾರೆ. ಮೂಲತಃ ಕಲಾ ಕುಟುಂಬದಿಂದ ಬಂದ ಇವರು ಬಾಲ್ಯದಿಂದಲೇ ಕಲಾ ಹಾಗೂ ಸಂಸ್ಕೃತಿಯ ನೆಲೆಗಳನ್ನು ಹುರಿದುಂಬಿಸಿಕೊಂಡು ಬೆಳೆದವರು ಎಂದು ಡಾ. ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಪ್ರಕಾಶನಗಳ ಬಿಡುಗಡೆ ಸಮಾರಂಭವೂ ಜರಗಲಿದೆ. “ಕಲೋದ್ಯಮಿ” ಎಂಬ ವಿಶೇಷ ಅಭಿನಂದನಾ ಗ್ರಂಥವನ್ನು ಕರ್ನಾಟಕ ಸರ್ಕಾರದ ಕಾನೂನು ಸಚಿವರಾದ ಡಾ. ಎಚ್. ಕೆ. ಪಾಟೀಲ ಅವರು ಬಿಡುಗಡೆಗೊಳಿಸಲಿದ್ದು, “ವಿಶ್ವಕರ್ಮ ಸಾಹಿತ್ಯ ಸಂಪದ” ಗ್ರಂಥ ಬಿಡುಗಡೆ ಕಾರ್ಯವನ್ನು ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್. ವಿ. ಸಂಕನೂರ ನೆರವೇರಿಸಲಿದ್ದಾರೆ. ಈ ಸಮಾರಂಭದ ಅಧ್ಯಕ್ಷತೆಯನ್ನು ವಿಜಯ ಲಲಿತಕಲಾ ಸಂಸ್ಥೆಯ ಅಧ್ಯಕ್ಷ ಅಶೋಕ ಟಿ. ಅಕ್ಕಿ ವಹಿಸಲಿದ್ದಾರೆ.

ಅಭಿನಂದನಾ ನುಡಿಗಳನ್ನು ಖ್ಯಾತ ಶಿಕ್ಷಣ ತಜ್ಞ ಹಾಗೂ ಕಲಾವಿದ ಸುರೇಶ ಕುಲಕರ್ಣಿ ಅವರು ನೀಡಲಿದ್ದು, ವಿವಿಧ ಕ್ಷೇತ್ರಗಳ ಗಣ್ಯ ಅತಿಥಿಗಳು — ಶಿರಹಟ್ಟಿಯ ಎಫ್. ಎಮ್. ಡಬಾಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ. ಎನ್. ಡಬಾಲಿ ಹಾಗೂ ಇತರ ಗಣ್ಯರೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅಶೋಕ ಅಕ್ಕಿ, ಡಾ. ಉಮೇಶ್ ಪುರದ, ವಿಜಯ ಕಿರೇಸೂರ, ವಿಶ್ವನಾಥ ಕಮ್ಮಾರ, ಎನ್. ರಾಮರಾವ್, ಡಾ. ಜಿ. ಎಸ್. ಹಿರೇಮಠ, ಪ್ರಸನ್ನ ಕಡ್ಲಿಕೊಪ್ಪ, ಕೃಷ್ಣ ಕಡ್ಲಿಕೊಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.