ಗದಗ: ಕೇಂದ್ರ ಸರ್ಕಾರ ಸಂಸತ್ ಅಧಿವೇಶನದಲ್ಲಿ ದೇಶದ ಕೋಟ್ಯಾಂತರ ಮುಸ್ಲಿಂ ಸಮುದಾಯದ ಜನರ ವಿರೋಧದ ನಡುವೆ ವಕ್ಫ್ ಕಾಯ್ದೆ ತಿದ್ದುಪಡಿ ತಂದು ಮುಸಲ್ಮಾನರ ಭಾವನೆಗೆ ದಕ್ಕೆ ತರುವುದರ ಜೊತೆಗೆ ಒಂದು ಸಮುದಾಯ ಗುರಿಯಾಗಿಸಿದೆ. ಇದನ್ನು ಖಂಡಿಸಿ ಏಪ್ರಿಲ್ 19 ರಂದು ಪ್ರತಿಭಟನೆ ಮಾಡಲಾಗುವುದು ಎಂದು ಇಮ್ತಿಯಾಜ್ ಮಾನ್ವಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿಭಟನಾ ರ್ಯಾಲಿಯು ಮುಳಗುಂದ ನಾಕಾ ಹತ್ತಿರದ ಶಾಹಿ ಈದ್ಗಾ ಮಸೀದಿಯಿಂದ ಆರಂಭಗೊಂಡು, ಮುಳಗುಂದ ನಾಕಾ, ಟಿಪ್ಪು ಸುಲ್ತಾನ್ ಸರ್ಕಲ್, ಹೊಸ ಕೋರ್ಟ್ ಮಾರ್ಗವಾಗಿ ಜಿಲ್ಲಾಧಿಕಾರಿ ಕಛೇರಿ ತಲುಪಲಾಗುವುದು. ಡಿಸಿ ಅವರ ಮೂಲಕ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ಪ್ರತಿಭಟನಾ ರ್ಯಾಲಿಯಲ್ಲಿ ಗದಗ ಜಿಲ್ಲೆಯಾಧ್ಯಂತ ಸಾವಿರಾರು ಸಂಖ್ಯೆಯಲ್ಲಿ ಮುಸಲ್ಮಾನ ಬಾಂಧವರು ಭಾಗವಹಿಸಲಿದ್ದು, ವಿವಿಧ ಸಂಘಟನೆಗಳು ನಮ್ಮ ಹೋರಾಟಕ್ಕೆ ಬೆಂಬಲ ನೀಡಲಿವೆ ಅಂತ ಮಾಹಿತಿ ನೀಡಿದರು.

ಕೇಂದ್ರ ಸರ್ಕಾರವು ನಮ್ಮ ದೇಶದ ಸಂವಿಧಾನದ ವಿರುದ್ಧವಾಗಿ ಈ ಕಾಯ್ದೆಯನ್ನು ಜಾರಿಗೆ ತಂದಿರುವುದನ್ನು ನಾವು ಖಂಡಿಸುತ್ತೇವೆ. ಕೇಂದ್ರ ಸರ್ಕಾರವು ವಕ್ಫ್ (ತಿದ್ದುಪಡಿ) ಕಾಯ್ದೆ 202 ಅಧಿಸೂಚನೆ ಹೊರಡಿಸಿದೆ. ಇದು ಎರಡೂ ಸದನಗಳಲ್ಲಿ ಎನ್.ಡಿ.ಎ ಮಿತ್ರ ಪಕ್ಷಗಳ ಬಹುಮತ ಇರುವುದರಿಂದ ವಿರೋಧ ಪಕ್ಷಗಳ ಸಹಕಾರವಿಲ್ಲದೇ ತರಾತುರಿಯುಲ್ಲಿ ವಕ್ಫ್ ಕಾಯ್ದೆ ಜಾರಿಗೆ ತರಲಾಗಿದೆ ಅಂತ ಆಕ್ರೋಶ ವ್ಯಕ್ತಪಡಿಸಿದರು.
ಲೋಕಸಭೆಯಲ್ಲಿ 288 ಸಂಸದರು ಕಾಯ್ದೆ ಪರವಾಗಿ ಹಾಗೂ 232 ಸಂಸದರು ಕಾಯ್ದೆ ವಿರುದ್ಧವಾಗಿ ಮತ ಚಲಾಯಿಸಿದರೇ, ರಾಜ್ಯ ಸಭೆಯಲ್ಲಿ 128 ಸದಸ್ಯರು ಕಾಯ್ದೆ ಪರವಾಗಿ ಮತ್ತು 9 ಸದಸ್ಯರು ಕಾಯ್ದೆ ವಿರುದ್ಧವಾಗಿ ಮತ ಚಲಾಯಿಸಿದರು. ಒಂದು ಸಮುದಾಯವನ್ನು ಹತ್ತಿಕ್ಕುವ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೆ ತಂದು ಬಲವಂತವಾಗಿ ಮುಸ್ಲಿಂ ಸಮಾಜದ ಮೇಲೆ ಒತ್ತಡ ಹೇರಲಾಗುತ್ತಿದೆ. ವಕ್ಫ್ ಕಾಯ್ದೆ ಜಾರಿಗೆ ತಂದಿರುವುದು ಮುಸ್ಲಿಂರ ವಿರುದ್ಧವಾಗಿ ಅಲ್ಲ, ವಕ್ಫ್ ಆಸ್ತಿ ಸಂರಕ್ಷಣೆಗಾಗಿ ಎಂದು ನಮ್ಮ ಪ್ರಧಾನ ಮಂತ್ರಿಗಳು ಹೇಳುತ್ತಿದ್ದಾರೆ. ಆದರೆ ಇಷ್ಟು ದಿನ ವಕ್ಫ್ ಆಸ್ತಿಗಳ ಸಂರಕ್ಷಣೆ ಆಗಿಲ್ಲವೇ ಅಂತ ಪ್ರಶ್ನಿಸಿದರು.

ಮೇಲಿನ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ
ನಮ್ಮ ದೇಶದ ಎಲ್ಲಾ ಜಾತಿ ಸಮುದಾಯಗಳು ತಮ್ಮ-ತಮ್ಮ ಧರ್ಮಗಳ ಆಚರಣೆ ಮಾಡಲು ನಮ್ಮ ದೇಶದ ಸಂವಿಧಾನ ನಮಗೆ ಹಕ್ಕು ನೀಡಿದೆ. ಆದರೆ, ಕೇಂದ್ರ ಸರ್ಕಾರ ಸಂವಿಧಾನದ ಆಶೆಯವನ್ನು ಗಾಳಿಗೆ ತೂರಿ ಕೇವಲ ಒಂದು ಸಮುದಾಯವನ್ನು ಗುರಿಯಾಗಿ ಇಟ್ಟಿಕೊಂಡು ತಮ್ಮ ಅಧಿಕಾರವನ್ನು ದುರಪಯೋಗ ಪಡಿಸಿಕೊಂಡು ಜನ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಮುಸ್ಲಿಂ ಸಮುದಾಯಗಳ ಆಸ್ತಿಗಳನ್ನು ಕಬಳಿಸಿಕೊಳ್ಳುವ ಹುನ್ನಾರ ನಡೆಸಲಾಗುತ್ತಿದೆ ಎಂದು ಕೇಂದ್ರದ ವಿರುದ್ದ ಆರೋಪಿಸಿದರು.

ಈ ವೇಳೆ ಸೈಯದ್ ಅಲಿ ಕೊಪ್ಪಳ, ಮೌಲಾನಾ ಮುಪ್ತಿ ಆರೀಪ್, ಉಮರ್ ಫಾರೂಖ್ ಹುಬ್ಬಳ್ಳಿ, ಬಾಬಾಜಾನ್ ಬಳಗಾನೂರ, ಎಂ. ಎಂ ಮಾಳೆಕೋಪ್ಪ, ಮಹಮ್ಮದ್ ಶಾಲಗಾರ, ಮಹಮ್ಮದ್ ರಫೀಕ್, ಅನ್ವರ್ ಶಿರಹಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.