ಗದಗ: “ಭಾರತ ಎಂಬ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಸಮಾನತೆಯ ತತ್ವಗಳ ಆಧಾರದಲ್ಲಿ ಬೃಹತ್ ಸಂವಿಧಾನ ರಚಿಸಿದ ಮಹಾನ್ ನಾಯಕ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ರನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿದೆ” ಎಂದು ಸ್ಟುಡೆಂಟ್ಸ್ ಎಜ್ಯುಕೇಶನ್ ಸಂಸ್ಥೆಯ ಅಧ್ಯಕ್ಷ ಪ್ರೊ. ರಾಜೇಶ್ ಕುಲಕರ್ಣಿ ತಿಳಿಸಿದರು.
ನಗರದ ಸನ್ಮಾರ್ಗ ಪದವಿ ಪೂರ್ವ ಕಾಲೇಜಿನಲ್ಲಿ ಡಾ. ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಪ್ರೊ. ರಾಜೇಶ್ ಅವರು, “ಅಂಬೇಡ್ಕರ್ ಅವರನ್ನು ಕೇವಲ ಒಂದು ಸಮುದಾಯ ಅಥವಾ ವರ್ಗಕ್ಕೆ ಸೀಮಿತಗೊಳಿಸುವ ಪ್ರಯತ್ನ ತಪ್ಪು. ಅವರು ಸಂವಿಧಾನ ಶಿಲ್ಪಿಯಾಗಿರುವುದಕ್ಕಿಂತಲೂ ಮಿಕ್ಕಷ್ಟು ಮಹತ್ವಪೂರ್ಣವಾಗಿ, ಎಲ್ಲರಿಗೂ ಸಮಾನ ಹಕ್ಕುಗಳ ಭರವಸೆ ನೀಡಿದ ಸ್ತಂಭಸ್ವರೂಪ. ಜಾತಿ, ಧರ್ಮ, ಲಿಂಗ ಅಥವಾ ಆರ್ಥಿಕ ಹಿನ್ನಲೆ ನೋಡದೇ, ಎಲ್ಲರಿಗೂ ಸಮಾನ ಅವಕಾಶ ಸೃಷ್ಟಿಸುವಂತೆ ಮಾಡಿದವರೇ ಡಾ.ಬಿ.ಆರ್.ಅಂಬೇಡ್ಕರ್ ಅವರು ,” ಎಂದು ನುಡಿದರು.

ಮೇಲಿನ ಈ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಡಾ. ಅಂಬೇಡ್ಕರ್ರವರು ಬಾಲ್ಯದಲ್ಲೇ ಸಾಮಾಜಿಕ ಅಸಮಾನತೆಯ ನೋವನ್ನು ಅನುಭವಿಸಿ, ತೀವ್ರ ಪಡಿತರ ನಡುವೆಯೂ ಸಾಧನೆಯ ಶಿಖರಕ್ಕೇರಿದ ಮೇಧಾವಿ. ಅವರು ಕೇವಲ ನ್ಯಾಯಶಾಸ್ತ್ರದಲ್ಲಷ್ಟೇ ಅಲ್ಲದೆ, ಅರ್ಥಶಾಸ್ತ್ರ, ಇತಿಹಾಸ, ತತ್ವಶಾಸ್ತ್ರ, ಧರ್ಮ, ರಾಜಕೀಯ ಇವುಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದವರು. ಅವರ “Annihilation of Caste” (ಅನೈಹಿಲೇಷನ್ ಆಫ್ ಕಾಸ್ಟ್) ಪುಸ್ತಕವು ಇಂದು ಕೂಡ ಭಾರತೀಯ ಸಮಾಜದ ಸಾಮಾಜಿಕ ಪುನರ್ನಿರ್ಮಾಣಕ್ಕೆ ಪ್ರೇರಣೆಯಾಗಿದೆ. ಸಂವಿಧಾನದ ಮೂಲಕ ನೀಡಿದ ಮೌಲಿಕ ಹಕ್ಕುಗಳು, ಜಾತ್ಯಾತೀತತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳು ನಮ್ಮ ರಾಷ್ಟ್ರದ ಆಧಾರಸ್ತಂಭಗಳಾಗಿವೆ.
ಅವರ ಸಾಧನೆಗಳನ್ನು ನೆನೆಯುವ ಮೂಲಕ ನಾವು ಸಮಾನತೆ, ಭ್ರಾತೃತ್ವ ಮತ್ತು ಸ್ವಾತಂತ್ರ್ಯದ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. “ಅಂಬೇಡ್ಕರ್ ಬಗ್ಗೆ ಮಾತನಾಡುವುದು ಕೇವಲ ಗೌರವದ ವಿಷಯವಲ್ಲ, ಅವರ ಮಾರ್ಗವನ್ನು ಅನುಸರಿಸುವ ಜವಾಬ್ದಾರಿಯೂ ನಮ್ಮೆಲ್ಲರ ಮೇಲಿದೆ,” ಎಂದು ಪ್ರೊ. ರಾಜೇಶ್ ಕುಲಕರ್ಣಿ ತಮ್ಮ ಭಾಷಣದಲ್ಲಿ ಅಭಿವ್ಯಕ್ತಿಪಡಿಸಿದರು.
ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಪ್ರೊ. ಉಡುಪಿ ದೇಶಪಾಂಡೆ ಮಾತನಾಡುತ್ತಾ, “೩೨ ಪದವಿ ಮತ್ತು ೬೪ ಬಿರುದುಗಳನ್ನು ಪಡೆದಂತಹ ಮಹಾ ಮೇಧಾವಿಯಾದ ಡಾ. ಅಂಬೇಡ್ಕರ್ರನ್ನು ಗೌರವಿಸುವುದು ಎಂದರೆ ನಮ್ಮ ಸಂವಿಧಾನಕ್ಕೆ ಗೌರವ ಸಲ್ಲಿಸಿದಂತೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಪ್ರೊ. ರೋಹಿತ್, ಪ್ರೊ. ರಾಹುಲ್ ಒಡೆಯರ್, ಪ್ರೊ. ಸೈಯದ್ ಮತೀನ್ ಮುಲ್ಲಾ, ಪ್ರಾಚಾರ್ಯರಾದ ಪ್ರೊ. ಪ್ರೇಮಾನಂದ ರೋಣದ, ಆಡಳಿತಾಧಿಕಾರಿ ಎಂ.ಸಿ. ಹಿರೇಮಠ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.