Headlines

ಕಾಂತರಾಜು ವರದಿ ಕುರಿತಂತೆ ಸಿಡಿದ ಪಾಟೀಲ..! ಲಿಂಗಾಯತರಾಗಿ ಹುಟ್ಟಿದ್ರೆ ತಪ್ಪಾ?’ಗದಗದಿಂದ ಸಿಎಂಗೆ ಪಾಟೀಲರ ಪ್ರಶ್ನೆ: ಜಾತಿ ಜಟಾಪಟಿ…!

ಗದಗ, ಏಪ್ರಿಲ್ 12:
ರಾಜ್ಯ ರಾಜಕಾರಣದಲ್ಲಿ ಗದರಿಕೆಯಿಂದಲೇ ಹರಿದಾಡುತ್ತಿರುವ ಜಾತಿ ಜನಗಣತಿ ವರದಿಗೆ ಗದಗದಿಂದ ಗಟ್ಟಿ ಪ್ರತಿಸ್ಪಂದನೆ ಹೊರಬಿದ್ದಿದೆ. ಮಾಜಿ ಸಚಿವ ಹಾಗೂ ಗದಗ ಜಿಲ್ಲೆಯ ಹಾಲಿ ಶಾಸಕ ಸಿ.ಸಿ. ಪಾಟೀಲ ಸಿಎಂ ಸಿದ್ದರಾಮಯ್ಯನವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, “ನಮ್ಮ ಮನೆಗೆ ಯಾವ ಸಮೀಕ್ಷಾ ತಂಡವೂ ಬಂದಿಲ್ಲ. ಈ ವರದಿ ಎಷ್ಟು ನಿಖರ?” ಎಂಬ ಪ್ರಶ್ನೆ ಸಿಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಸಿ. ಪಾಟೀಲ, “ಸಿಎಂ ಸಿದ್ದರಾಮಯ್ಯನವರ ಮನೆಗೂ, ಗದಗದ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರ ಮನೆಗೂ ಸಮೀಕ್ಷೆ ತಂಡ ಹೋಗಿದೆಯಾ?” ಎಂದು ತಿರುಗೇಟು ಹಾರಿಸಿದರು. “ನಮ್ಮ ಮನೆಗೆ ಯಾರೂ ಬಂದಿಲ್ಲ. ಅದ್ರೆ ವರದಿಯಲ್ಲಿ ಲಂಬಾಣಿಯವರು ಇಲ್ಲದ ಕ್ಷೇತ್ರದಲ್ಲಿ 4000 ಜನಸಂಖ್ಯೆ ಇಟ್ಟುಕೊಂಡಿದ್ದಾರೆ. ಇದೇ ರೀತಿ ಇಳಿಗೇರ್ ಸಮುದಾಯದವರಿಲ್ಲದಿದ್ದರೂ 3000 ಜನ ಎಂದು ಬರೆದಿದ್ದಾರೆ. ಇದು ಹೇಗೆ ಸಾಧ್ಯ?” ಎಂದು ಕೇಳಿದರು.

ಪಾಟೀಲರು ಆರೋಪಿಸಿದಂತೆ, “ಈ ವರದಿ ಲಿಂಗಾಯತ ಸಮುದಾಯದ ಹಿತವಚನವಲ್ಲ. ಇದು ಚುನಾವಣೆಗೆ ಲೆಕ್ಕಾಚಾರದ ಸರಣಿ ಭಾಗ. ಸರ್ಕಾರ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳಿಗೆ ಸೌಲಭ್ಯ ಕೊಡಲಿ – ನಮ್ಮಿಂದ ವಿರೋಧವಿಲ್ಲ. ಆದರೆ ಈ ಗಣತಿ ಲಿಂಗಾಯತರ ಸ್ಥಾನಮಾನವನ್ನು ಕುಂದಿಸುವ ಕೆಲಸ ಮಾಡುತ್ತಿದೆ.”ಎಂದರು.

ಹೆಚ್ಚು ತೀವ್ರ ಸ್ವರದಲ್ಲಿ ಮಾತನಾಡಿದ ಸಿ.ಸಿ.ಪಾಟೀಲ, “ಸಿಎಂ ಹೇಳ್ತಾರೆ – 136 ಅಥವಾ 139 ಶಾಸಕರು ಈ ವರದಿಗೆ ಬೆಂಬಲ ನೀಡಿದ್ದಾರೆ. ಆದರೆ ಅದು ಭಸ್ಮಾಸುರ ಬೆಂಬಲ ಆಗಬಾರದು! ಭಸ್ಮಾಸುರ ಯಾರೆಲ್ಲರನ್ನೂ ಸುಟ್ಟು ತಾನೇ ಕೈ ತಲೆಮೇಲೆ ಇಟ್ಟುಕೊಂಡವನಲ್ಲವೇ?” ಎಂದು ವ್ಯಂಗ್ಯವಾಡಿದರು.

ಪಾಟೀಲರು ಕೊನೆಗೆ ಭಾವನಾತ್ಮಕವಾಗಿ ಸಿಎಂ ನೇರವಾಗಿ ಪ್ರಶ್ನಿಸಿದರು – “ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ನಡೆಯುತ್ತೆ. ಆದರೆ ಆ ಸರ್ಕಾರದಲ್ಲಿ ಲಿಂಗಾಯತರಾಗಿ ಹುಟ್ಟಿದ್ರೆ ಅದು ತಪ್ಪು ಆಗುತ್ತಾ?” ಎಂದು ಕಿಡಿಕಾರಿದರು. “ಈ ವರದಿಯನ್ನು ನಾವು ಗದಗ ಜಿಲ್ಲೆಯಿಂದಲೇ ಚಾಲೆಂಜ್ ಮಾಡುತ್ತೇವೆ” ಎಂದೂ ಎಚ್ಚರಿಸಿದರು.

Leave a Reply

Your email address will not be published. Required fields are marked *