ಲಕ್ಷ್ಮೇಶ್ವರ: ಗ್ರಾಮೀಣ ಭಾಗದ ಜನರು ಕೆಲಸಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸಿ, ಸ್ಥಳೀಯವಾಗಿಯೇ ಉದ್ಯೋಗ ನೀಡಿ ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಜಾರಿಗೆ ಬಂದಿದೆ. ಗ್ರಾಮೀಣ ಭಾಗದ ಜನರಿಗೆ ಯೋಜನೆ ವರದಾನವಾಗಿದೆ ದಿನಕ್ಕೆ 370 ರೂ. ಹಣ ಪಾವತಿಸಲಾಗುತ್ತದೆ ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಧರ್ಮರ ಕೃಷ್ಣಪ್ಪ ಹೇಳಿದರು.
ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರ ಗ್ರಾಮದ ಹಳ್ಳ ಹೂಳೆತ್ತುವ ಕಾಮಗಾರಿ ಸ್ಥಳ ಪರಿಶೀಲನೆ ಮಾಡಿ ಮಾತನಾಡಿದ ಅವರು, ಕೆರೆ ಹೂಳೆತ್ತುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ಕೊಳವೆ ಬಾವಿಗಳಲ್ಲಿ ನೀರಿನ ಏರಿಕೆ ಆಗಲಿದೆ. ಗ್ರಾಮಸ್ಥರು ತಮ್ಮ ಗ್ರಾಮದ ಕೆರೆಯ ಸಂರಕ್ಷಣೆಗೆ ಒತ್ತು ಕೊಡುವಂತೆ ಸಲಹೆ ನೀಡಿದರು.ನರೇಗಾ ಯೋಜನೆಯು ಗ್ರಾಮೀಣ ಜನರ ಮಹತ್ವಾಕಾಂಕ್ಷೆ ಯೋಜನೆ ಇದಾಗಿದೆ. ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರಿಗೂ ನರೇಗಾ ಯೋಜನೆಯಲ್ಲಿ ಕೆಲಸ ಒದಗಿಸಿ ಸ್ವಾವಲಂಬಿಗಳಾಗಿ ಮಾಡಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
ಗ್ರಾಮೀಣ ಪ್ರದೇಶದ ಜನರು ಕೂಲಿ ಕೆಲಸಕ್ಕಾಗಿ ಪಟ್ಟಣಗಳಿಗೆ ಗುಳೆ ಹೋಗುವುದನ್ನು ತಪ್ಪಿಸಿ ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಒದಗಿಸುವ ಕಾರ್ಯ ಮಾಡಲಾಗುತ್ತಿದೆ. ಪ್ರತಿಯೊಬ್ಬರೂ ನರೇಗಾ ಯೋಜನೆ ಅಡಿಯಲ್ಲಿ ಒಂದು ದಿನಕ್ಕೆ 370 ರೂ. ಪಡೆಯಬಹುದು. ವರ್ಷದಲ್ಲಿ 100 ಮಾನವ ದಿನಗಳ ಪಡೆಯಬಹುದಾಗಿದೆ. ಇದರ ಜೊತೆಗೆ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಹೇಳಿದರು.

ನರೇಗಾ ಯೋಜನೆ ಅಡಿಯಲ್ಲಿ ಬೇಸಿಗೆ ಅವಧಿಯಲ್ಲಿ 60 ದಿನಗಳ ಕಾಲ ಕೆಲಸ ಪಡೆದು ಗರಿಷ್ಠ 22,200 ರೂ. ಗಳಿಕೆ ಮಾಡಬಹುದು. ಇದರಿಂದ ರೈತರು ತಮ್ಮ ಕುಟುಂಬದ ಅಗತ್ಯಕ್ಕೆ ಬಳಕೆಗೆ ಅನುಕೂಲವಾಗಲಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಗ್ರಾಮದ ಜನರು ಸ್ವಂತ ಊರಲ್ಲೇ ಕೂಲಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ದೊಡ್ಡೂರ ಗ್ರಾಪಂ ಅಧ್ಯಕ್ಷರಾದ ಚಂದ್ರಶೇಖರ ಈಳಗೇರ, ಗ್ರಾಪಂ ಸದಸ್ಯರಾದ ಮಲ್ಲೇಶ ಮಣ್ಣಮ್ಮನವರ, ಪ್ರಮುಖರಾದ ನಾನಪ್ಪ ಲಮಾಣಿ, ಗ್ರಾಪಂ ಕಾರ್ಯದರ್ಶಿ ಆರ್.ಕೆ. ಗುರುವಿನ, ಬಿಎಫ್‌ಟಿ ತೀರಕಪ್ಪ ಲಮಾಣಿ, ಮಲ್ಲಿಕಾರ್ಜುನ ತಳವಾರ ಇತರರಿದ್ದರು.