ಗದಗ: ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಹೊರವಲಯದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಸೋಮಶೇಖರ್ ಬಟಕೊರ್ಕಿ ಎಂಬ ರೈತನ ನಾಲ್ಕು ಎಕರೆ ಜಮೀನಿನಲ್ಲಿ ಕಟಾವು ಮಾಡಿದ ಗೋವಿನಜೋಳದ ರಾಶಿ ಸಂಪೂರ್ಣವಾಗಿ ಭಸ್ಮವಾಗಿದೆ. ಈ ಅವಘಡದಲ್ಲಿ ಅಂದಾಜು ₹4 ಲಕ್ಷ ಮೌಲ್ಯದ ಗೋವಿನಜೋಳ ಬೆಂಕಿಗೆ ಆಹುತಿಯಾಗಿದೆ.

ಬೆಂಕಿ ಹೇಗೆ ಹೊತ್ತಿಕೊಂಡಿದೆ ಎಂಬುದು ಸ್ಪಷ್ಟವಾಗಿಲ್ಲ. ಘಟನೆಯ ಮಾಹಿತಿಯು ಸ್ಥಳೀಯರಿಗೆ ತಿಳಿದ ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದು, ಹೆಚ್ಚಿನ ಹಾನಿಯನ್ನು ತಪ್ಪಿಸಲು ಯಶಸ್ವಿಯಾದರು.

ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಕಿ ಅವಘಡದ ಹಿಂದಿನ ಸಾಧ್ಯಿತ ಕಾರಣಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೆಳೆ ನಷ್ಟದಿಂದ ಸಂಕಟಕ್ಕೀಡಾದ ರೈತರಿಗೆ ಸರಕಾರದಿಂದ ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.