ಕಿತ್ತೂರು, ಬೆಳಗಾವಿ: ಶಾಸಕ ರಾಜು ಕಾಗೆ ಅವರ ಸಹೋದರನ ಪುತ್ರನಿಂದ ಕಾರು ಅಪಘಾತ ಸಂಭವಿಸಿ ಬೈಕ್ ಸವಾರ ಸಾವನ್ನಪ್ಪಿದ ದುರ್ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಗೋಕಾಕ್ ತಾಲೂಕಿನ ಬಸವರಾಜ ಪುಡಕಲಕಟ್ಟಿ (22) ಮೃತ ದುರ್ದೈವಿ. ಈ ಅಪಘಾತದಲ್ಲಿ ಸಣ್ಣವಿಠ್ಠಲ್ ದುರದುಂಡಿ ಮತ್ತು ನಿಂಗಪ್ಪ ಹೆಬ್ಬಾಳ ಎಂಬ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಘಟನೆ ರಾಷ್ಟ್ರೀಯ ಹೆದ್ದಾರಿ-4, ಬೆಂಗಳೂರು-ಪುಣೆ ಹೆದ್ದಾರಿಯಲ್ಲಿ ನಡೆದಿದೆ. ಬೆಳಗಾವಿಯಿಂದ ಕಿತ್ತೂರಿಗೆ ಕೆಲಸಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಅವರ ಬೈಕ್ ಗೆ ಹಿಂದಿನಿಂದ ಬಂದ ಕಾರು ಗುದ್ದಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಕಾರನ್ನು ಶಾಸಕ ರಾಜು ಕಾಗೆ ಅವರ ಸಹೋದರನ ಪುತ್ರ ಶ್ರೀಪ್ರಸಾದ್ ಸಿದ್ದನಗೌಡ ಕಾಗೆ ಚಲಾಯಿಸುತ್ತಿದ್ದುದಾಗಿ ತಿಳಿದು ಬಂದಿದೆ. ಅಪಘಾತದ ನಂತರ ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಬಸವರಾಜ ಸ್ಥಳದಲ್ಲೇ ಸಾವಿಗೀಡಾದರು. ಮೃತದೇಹವನ್ನು ಬಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಈ ಕುರಿತು ಕಿತ್ತೂರು ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.