ಗದಗ: ಮೈಕ್ರೋಪ್ರೊಸೆಸರ್‌ಗಳ ಆವಿಷ್ಕಾರದಿಂದ ಗಣಕಯಂತ್ರಗಳು ಚಿಕ್ಕದಾಗಿ, ವೇಗವಾಗಿ, ಕೈಗೆಟುಕುವ ದರದಲ್ಲಿ ಲಭ್ಯವಾಗುತ್ತಿದ್ದು, ಮೊದಲು ಕೇವಲ ಲೆಕ್ಕಪಾಠಕ್ಕಾಗಿ ಬಳಸಿದ ಗಣಕಯಂತ್ರ, ಇಂದು ವೈದ್ಯಕೀಯ, ಶಿಕ್ಷಣ, ವ್ಯವಹಾರ, ಮನರಂಜನೆ, ಕೃತಕ ಬುದ್ಧಿಮತ್ತೆ (AI), ಡೇಟಾ ವಿಶ್ಲೇಷಣೆ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಬಹುಮುಖವಾಗಿ ಬಳಕೆಯಾಗುತ್ತಿದೆ. ಒಟ್ಟಾರೆ ಗಣಕಯಂತ್ರಗಳ ಬೆಳವಣಿಗೆಯು ಮಾನವ ಬದುಕನ್ನು ಸಂಪೂರ್ಣವಾಗಿ ರೂಪಾಂತರ ಮಾಡಿದೆ ಎಂದು ಹುಬ್ಬಳ್ಳಿಯ ಮಹೇಶ ಆಕ್ಸಪರ್ಡ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರವಿರಾಜ ಸಿದ್ಲಿಂಗ್ ಹೇಳಿದರು.
ನಗರದ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ ಚಿಕ್ಕಟ್ಟಿ ಬಿಸಿಎ ಕಾಲೇಜಿನಲ್ಲಿ ನಡೆದ ಫನ್ ವೀಕ್ -2025 ರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಆರಂಭದಲ್ಲಿ ಉಪಯೋಗಿಸುತ್ತಿದ್ದ ಅಬ್ಯಾಕಸ್ ದಿಂದ ಹಿಡಿದುಕೊಂಡು ಪ್ರಸ್ತುತ ಗಣಕಯಂತ್ರದ ರೂಪಗಳಲ್ಲಿ ತಂತ್ರಜ್ಞಾನದಲ್ಲಿ ಆಗಿರುವ ವ್ಯತ್ಯಾಸಗಳನ್ನು ಸವಿವರವಾಗಿ ತಿಳಿಸಿಕೊಟ್ಟರು. ಬಿಸಿಎ ಕಲಿಯುವ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನ ಉಜ್ವಲಗೊಳಿಸಲು ಬಯಸುವ ಎಲ್ಲ ಆಸಕ್ತ ಮನಸ್ಸುಗಳಿಗೆ ಉಪಯೋಗವಾಗುವ ಎಲ್ಲ ಅಂಶಗಳನ್ನು ಪಿಪಿಟಿ, ಎಲ್.ಇ.ಡಿ ತಂತ್ರಜ್ಞಾನದ ಮೂಲಕ ಸೂಕ್ತವಾಗಿ ಮಾರ್ಗದರ್ಶನ ನೀಡಿ ಚಿಕ್ಕಟಿ ಬಿಸಿಎ ಕಾಲೇಜಿನ ಅಧ್ಯಕ್ಷರು, ಪ್ರಾಚಾರ್ಯರು, ಸಿಬ್ಬಂದಿ ವರ್ಗದ ಪರಿಶ್ರಮವನ್ನು ಶ್ಲಾಘಿಸಿ ಉತ್ತಮ ಭವಿಷ್ಯಕ್ಕೆ ಶುಭ ಹಾರೈಸಿದರು.

ವಿನಯ್ ಚಿಕ್ಕಟ್ಟಿ ಕಾಲೇಜಿನ ಪ್ರಾಂಶುಪಾಲರಾದ ವಿನಯ್ ಎಸ್ ಚಿಕ್ಕಟ್ಟಿಯವರು ಮಾತನಾಡಿ,ಫನ್‌ವೀಕ್‌ನಲ್ಲಿ ಆಟೋಟ, ರಂಗೋಲಿ, ಆಹಾರ ತಯಾರಿಕಾ ಸ್ಪರ್ಧೆ ಹಾಗೂ ಸಾಮಾಜಿಕ ಕಳಕಳಿಯ ಸಂಸ್ಕೃತಿಯನ್ನು ಬಿಸಿಎ ವಿದ್ಯಾರ್ಥಿಗಳಲ್ಲಿ ಬಿತ್ತುವುದರೊಂದಿಗೆ ಆರಂಭವಾದ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ಮುಂದುವರೆಯುವುದರಲ್ಲಿ ಸಂದೇಹವಿಲ್ಲ, ಅಲ್ಲದೇ ನಮ್ಮ ಮಿತ್ರರು ಕೆಲವೊಮ್ಮೆ ಆಸ್ತಿಗಳಾಗಿ ಪರಿವರ್ತನೆಗೊಂಡು ನಮ್ಮಲ್ಲಿ ಸಕಾರಾತ್ಮಕವಾದ ಅಂಶಗಳನ್ನು ಬಿತ್ತುತ್ತಾರೆ ಅಂತವರಲ್ಲಿ ನನ್ನ ಮಿತ್ರ ಪ್ರೊ. ರವಿರಾಜ ಸಿದ್ಲಿಂಗ್ ಅವರು ಕೂಡಾ ನನಗೆ ದೊಡ್ಡ ಆಸ್ತಿ ಇದ್ದಂತೆ, ಏಕೆಂದರೆ ಅವರು ಹೋದ ಕಡೆಗಳೆಲ್ಲ ಸಕರಾತ್ಮಕವಾದ ವಿಚಾರಧಾರೆಗಳನ್ನು ಪಸರಿಸುತ್ತ, ತಮ್ಮ ನಿರಂತರ ಅಧ್ಯಯನ ಶೀಲತೆಯ ಜ್ಞಾನವನ್ನು ತಿಳಿಸುತ್ತಾರೆ ಎಂದು ಪ್ರೊ. ರವಿರಾಜ ಸಿದ್ಲಿಂಗ್‌ರವರನ್ನು ಪ್ರಶಂಸಿದರು.
ಬಿಸಿಎ ಕಾಲೇಜ ಪ್ರಾಂಶುಪಾಲರಾದ ಬಿಪಿನ್ ಎಸ್ ಚಿಕ್ಕಟ್ಟಿಯವರು ವೇದಿಕೆಯಲ್ಲಿರುವ ಎಲ್ಲ ಗಣ್ಯಮಾನ್ಯರನ್ನು ಸಿಬ್ಬಂದಿ ವರ್ಗದವರನ್ನು ಹಾಗೂ ವಿದ್ಯಾರ್ಥಿ ಬಳಗವನ್ನು ಸ್ವಾಗತಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ,ಪ್ರೊ.ಎಸ್.ವಾಯ್.ಚಿಕ್ಕಟ್ಟಿ ಗುರುಗಳು ಮಾತನಾಡಿ, ಈ ಬಿಸಿಎ ಫನ್‌ವೀಕ್ ಸಂಗಮ್ ಡೇ ಮತ್ತು ಪ್ರಾಂರಭ – 2025, ವಿನೂತನ ಪ್ರಯೋಗಗಳೊಂದಿಗೆ ಪ್ರಾರಂಭವಾಗಿ ಬಹು ವಿಜೃಂಭಣೆಯಿಂದ ಜರುಗಿದ್ದು ಶಿಕ್ಷಣ ರಂಗದಲ್ಲಿ ನನಗೆ ಹೊಸ ಅನುಭವವನ್ನು ನೀಡಿದೆ. ಎಲ್ಲ ಬಿಸಿಎ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗು ನೀಡಿ, ಕೇವಲ ವಿದ್ಯಾರ್ಥಿನಿಯರಲ್ಲದೆ, ಗಂಡು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಶಿಕ್ಷಣ ರಂಗದಲ್ಲಿಯೇ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ.
ಇಂತಹ ಕಾರ್ಯಕ್ರಮಕ್ಕೆ ಪ್ರಾಚಾರ್ಯರಾದ ಪ್ರೊ. ಬಿಪಿನ್.ಎಸ್.ಚಿಕ್ಕಟ್ಟಿ, ಸಮನ್ವಯಾಧಿಕಾರಿಗಳಾದ ಪ್ರೊ. ಸುಭಾಷ ಗೌಡ್ರ, ಹಿರಿಯ ಪ್ರಾಧ್ಯಾಪಕರಾದ ಪ್ರೊ. ಬಿ.ವಿ.ಜೋಷಿ, ಸಾಮಾಜಿಕ ಕಳಕಳಿಯ ಹಿರಿಯ ವ್ಯಕ್ತಿತ್ವ ಪ್ರೊ. ಅನಿಲ್ ನಾಯ್ಕ, ಎಲ್ಲಾ ಸಿಬ್ಬಂದಿ ವರ್ಗದ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ಈ ಪನ್‌ವೀಕ್ ಯಶಸ್ವಿಗೆ ಕಾರಣಿಭೂತವಾಗಿದೆ ಎಂದು ಬಿಸಿಎ ವಿದ್ಯಾರ್ಥಿಗಳನ್ನು ಹಾಗೂ ಸಿಬ್ಬಂದಿ ವರ್ಗದವರನ್ನು ಶ್ಲಾಘಿಸಿದರು.
ಫನ್‌ವೀಕ್ ಕಾರ್ಯಕ್ರಮ ಮೊದಲ ದಿನ ಪ್ರೊ. ನಿಸಾರ್ ಅಹ್ಮದ ಹಾಗೂ ಪ್ರೊ. ವಿನುತಾ ಹಿರೇಮಠರವರ ನೆತೃತ್ವದಲ್ಲಿ ರಂಗೋಲಿ ಸ್ಪರ್ಧೆ, ಚಿತ್ರಕಲೆ ಹಾಗೂ ಕ್ರಾಪ್ಟ್ ಸ್ಪರ್ಧೆ ಏರ್ಪಡಿಸಲಾಗಿತ್ತು. ನಿರ್ಣಾಯಕರಾಗಿ ಆಡಳಿತಧಿಕಾರಿಗಳಾದ ಕಲಾವತಿ ಕೆಂಚರಾಯುತ ಹಾಗೂ ಕನ್ನಡ ಉಪನ್ಯಾಸಕರಾದ ಶ್ರೀಶೈಲ ಬಡಿಗೇರ ತೀರ್ಪು ನೀಡಿದರು.
ಎರಡನೇಯ ದಿನ ಪ್ರೊ.ಶೋಭಾ ಟಿ.ಎಚ್.ಎಮ್ ಹಾಗೂ ಮಾಧುರಿ ಮ ಶೇಷನಗೌಡ್ರ ಇವರ ನೇತೃತ್ವದಲ್ಲಿ ಭಾರತೀಯ ಸಾಂಪ್ರದಾಯಕ ಪಾಕಪದ್ದತಿ ಪ್ರದರ್ಶನ ಮತ್ತು ಶುಚಿ, ರುಚಿ, ಅಡುಗೆ ತಯಾರಿಕೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ನಿರ್ಣಾಯಕರಾಗಿ ಶಿಕ್ಷಕಿಯರಾದ ಸಲೋಮಿ ಗುವಲಾ ಹಾಗೂ ಶಿಕ್ಷಕರಾದ ಗಣೇಶ ಬಡ್ನಿ ಅವರು ತೀರ್ಪು ನೀಡಿದರು.

ನಂತರ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನ ಉತ್ತೇಜಿಸಲು ಭಾರತೀಯ ಮೂಲದ ಆಟೋಟಗಳನ್ನು ಹಮ್ಮಿಕೊಳ್ಳಲಾಗಿತ್ತು. ನಿರ್ಣಾಯಕರಾಗಿ ದೈಹಿಕ ಶಿಕ್ಷಕರಾದ ಶರಣಪ್ಪ ಗುಗಲೋತ್ತರರವರು ಹಾಗೂ ಶಿಕ್ಷಕಿಯರಾದ ಆಶಾಬಿ ಎ ಬಿರಾದಾರ ತೀರ್ಪು ನೀಡಿದರು.
ನಾಲ್ಕನೇ ದಿನ ಮಲ್ಲಸಮುದ್ರದ ಆನಂದ ವೃದ್ದಾಶ್ರಮ ಭೇಟಿ ಹಮ್ಮಿಕೊಳ್ಳಲಾಗಿತ್ತು.ವೃದ್ಧಾಶ್ರಮದ ಹಿರಿಯರನ್ನು ಭೇಟಿಯಾಗುವುದರಿಂದ ಒಂಟಿತನ ಕಡಿಮೆಯಾಗಿ ಭಾವನಾತ್ಮಕ ಮನೋಭಾವ ಮತ್ತು ಒಡನಾಟವನ್ನು ವೃಧ್ಧಿಸುತ್ತದೆ. ಸಾಮಾಜಿಕ ಜವಾಬ್ಧಾರಿ ಮತ್ತು ಅಂತರ್ಜನಾಗೀಯ ಬಂಧ ವೃದ್ಧಾಶ್ರಮದ ಹಿರಿಯರಿಗೂ ಸಂದರ್ಶಕರಿಗೂ ಭಾವನಾತ್ಮಕ ಸಂಬಂಧ ಹೆಚ್ಚಾಗುವಂತೆ ಪ್ರೇರೆಪಿಸಿತು.
ವೃದ್ಧಾಶ್ರಮ ಭೇಟಿಯ ಮುಂದಾಳತ್ವವನ್ನು ಹಿರಿಯ ಪ್ರಾಧ್ಯಾಪಕರಾದ ಅನಿಲ್ ನಾಯಕ ಅವರು ವಹಿಸಿದ್ದರು. ಪ್ರಾಂಶುಪಾಲರಾದ ಬಿಪಿನ್ ಎಸ್ ಚಿಕ್ಕಟ್ಟಿಯವರ ಅಧ್ಯಕ್ಷತೆಯಲ್ಲಿ ಆನಂದ ವೃದ್ಧಾಶ್ರಮ ಸಂಸ್ಥಾಪಕರಾದ ಗಂಗಾಧರ ನಾಭಾಪೂರ ಅವರ ನೇತೃತ್ವದಲ್ಲಿ ವೃದ್ಧಾಶ್ರಮದ ಹಿರಿಯರನ್ನು ಗೌರವಿಸುವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಪ್ರಾಂಶುಪಾಲರಾದ ಬಿಪಿನ್ ಎಸ್ ಚಿಕ್ಕಟ್ಟಿಯವರು ಮಾತನಾಡಿ, ನಮ್ಮ ಭಾರತೀಯ ಸಂಪ್ರದಾಯದಲ್ಲಿ ಕೂಡು ಕುಟುಂಬ ಪದ್ಧತಿ ಇದೆ. ಕುಟುಂಬದ ಸದಸ್ಯರೆಲ್ಲರೂ ಒಂದೇ ಮನೆಯಲ್ಲಿ ಸ್ನೇಹ ಭಾವದಿಂದ ವಾಸಿಸುವುದು ಭಾರತೀಯರ ಸಂಪ್ರದಾಯವಾಗಿದ್ದರೂ ಸಹ ಕೆಲವರು ತಮ್ಮ ಹಿರಿಯ ಪಾಲಕರನ್ನು ಇಂತಹ ವೃದ್ಧಾಶ್ರಮದಲ್ಲಿ ಬಿಟ್ಟಿರುತ್ತಾರೆ. ಅಂತಹ ಹಿರಿಯ ವೃದ್ಧರೆಲ್ಲರಿಗೂ ಶ್ರೀ ಆನಂದವೆಂಬ ವೃದ್ಧಾಶ್ರಮವನ್ನು ಸ್ಥಾಪಿಸಿ ಹಿರಿಯರಿಗೆ ಅನ್ನ, ಅರಿವೆ, ಅರಿವು ಹಾಗೂ ವಸತಿಯನ್ನ ಕೊಟ್ಟು ತಮ್ಮ ತಂದೆ ತಾಯಿಯಂತೆ ನೋಡಿಕೊಳ್ಳುತ್ತಿರುವ ಆಶ್ರಮದ ಅಧ್ಯಕ್ಷರಿಗೆ ನಮ್ಮ ಚಿಕ್ಕಟ್ಟಿ ಸಂಸ್ಥೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳು ಎಂದು ತಿಳಿಸಿದರು.
ಹಿರಿಯ ಪ್ರಾದ್ಯಾಪಕರಾದ ಅನಿಲ್ ನಾಯ್ಕ, ವೃದ್ಧಾಶ್ರಮದ ಅಧ್ಯಕ್ಷರಾದ ಗಂಗಾಧರ ನಾಭಾಪೂರ ಹಾಗೂ ಉಪನ್ಯಾಸಕರಾದ ಶ್ರೀಶೈಲ್ ಬಡಿಗೇರ ಅವರು ಮಾತನಾಡಿದರು.
ಬಿಸಿಎ ವಿದ್ಯಾರ್ಥಿ/ವಿದ್ಯಾರ್ಥಿನಿಯರು ನಿರೂಪಣೆಗೈದರು. ಫನ್‌ವೀಕ್ ಕಾರ್ಯಕ್ರಮದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳ ವರದಿಯನ್ನು ಬಿಸಿಎ ಕನ್ನಡ ಪ್ರಾದ್ಯಾಪಕರಾದ ಮರಿಯಪ್ಪ ಹರಿಜನ ಓದಿದರೆ, ಮುಖ್ಯ ಅತಿಥಿಗಳು ಪ್ರಶಸ್ತಿ ಪತ್ರ ವಿತರಿಸಿ ಶುಭ ಹಾರೈಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
