ಗದಗ: ಹೈಟೆಕ್ ದರೋಡೆ ಗ್ಯಾಂಗ್ ಮೇಲೆ ಪೊಲೀಸರು ಫೈರಿಂಗ್ ನಡೆಸಿದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಹಾಗೂ ಡೋಣಿ ಗ್ರಾಮದ ನಡುವೆ ನಡೆದಿದೆ. ನಿನ್ನೆ (ಮಾ.30) ರಾತ್ರಿ 7-30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಈ ವೇಳೆ ನಟೋರಿಯಸ್ ದರೋಡೆಕೋರ ಜಯಸಿಂಹ ಮೊಡಕೆರ್ ಕಾಲಿಗೆ ಎರಡು ಸುತ್ತು ಗುಂಡೇಟು ತಗಲಿದೆ.
ವರದಿ-ಮಹಲಿಂಗೇಶ್ ಹಿರೇಮಠ.
ರಾಜ್ಯ ಹಾಗೂ ಅಂತರರಾಜ್ಯಕ್ಕೆ ಸವಾಲಾಗಿದ್ದ ಗ್ಯಾಂಗ್
ರಾಜ್ಯ ಹಾಗೂ ಅಂತರರಾಜ್ಯ ಪೊಲೀಸ್ ಇಲಾಖೆಗೆ ತಲೆನೋವಾಗಿದ್ದ ಈ ಗ್ಯಾಂಗ್ ಪತ್ತೆ ಹಚ್ಚಲು,ಗದಗ ಎಸ್ಪಿ ಬಿ.ಎಸ್.ನೇಮಗೌಡ ಸೂಚನೆ ಮೇರೆಗೆ, ಎಡಿಎಸ್ಪಿ ಎಸ್.ಬಿ.ಸಂಕದ ಮಾರ್ಗದರ್ಶನದಲ್ಲಿ ಮುಂಡರಗಿ ಸಿಪಿಐ ಮಂಜುನಾಥ ಕುಸುಗಲ್, ಮುಳಗುಂದ ಸಿಪಿಐ ಸಂಗಮೇಶ್ ಶಿವಯೋಗಿ, ಹಾಗೂ ಬೆಟಗೇರಿ ಸಿಪಿಐ ಧೀರಜ್ ಶಿಂಧೆ ಸೇರಿದಂತೆ ನುರಿತ ಸಿಬ್ಬಂದಿಗಳ ತಂಡವನ್ನ ರಚಿಸಲಾಗಿತ್ತು. ಹೀಗೆ ಖದೀಮರ ಜಾಡು ಹಿಡಿದಿದ್ದ ಪೊಲೀಸರ ಕೈಗೆ ಆರೋಪಿಗಳು ಸಿಕ್ಕಿಬಿದ್ದಿದ್ದರು.ಅಲ್ಲದೇ ಮೊಬೈಲ್ ಸಂಪರ್ಕ ಬಿಟ್ಟು ಇನ್ಸ್ಟಾಗ್ರಾಂ ಮೂಲಕ ಈ ಗ್ಯಾಂಗ್ ಸಂವಹನ ನಡೆಸುತ್ತಿತ್ತು. ಹೀಗಾಗಿ ಇವರನ್ನ ಕಂಡು ಹಿಡಿಯುವದು ಖಾಕಿಗೆ ಸವಾಲಾಗಿತ್ತು. ಗ್ಯಾಂಗ್‌ನ ಮೇಲೆ ನಿಗಾ ಇರಿಸಿಕೊಂಡಿದ್ದ ಜಿಲ್ಲೆಯ ಖಾಕಿಗೆ ಕೊನೆಗೂ ಆರೋಪಿಗಳನ್ನ ಸೆರೆ ಹಿಡಿಯುವಲ್ಲಿ ಗದಗ ಪೊಲೀಸರ ತಂತ್ರ ಫಲ ನೀಡಿದೆ.
ಪತ್ತೆ ನಂತರ ಡ್ರಾಮೇಟಿಕ್ ಘಟನೆ
ನಿನ್ನೆ ವಿಜಯನಗರ ಜಿಲ್ಲೆ ಬಳಿ ಪೊಲೀಸರು ಜಯಸಿಂಹನನ್ನ ವಶಕ್ಕೆ ಪಡೆದು ಗದಗದ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಕರೆದುಕೊಂಡು ಬರುತ್ತಿದ್ದರು. ಈ ವೇಳೆ ಮಂಜುನಾಥ ಮೊಡಕೆರ್, ರಮೇಶ್ ಮೊಡಕೆರ್, ಮತ್ತು ಜಯಸಿಂಹ ಮೊಡಕೆರ್ ಅವರನ್ನು ಪೊಲೀಸರು ಒಟ್ಟಿಗೆ ಕರೆದುಕೊಂಡು ಬರುತ್ತಿದ್ದರು.

ಈ ವೇಳೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಹಾಗೂ ಡೋಣಿ ಗ್ರಾಮದ ಮಧ್ಯೆ ಪೊಲೀಸ್ ವಾಹನದಲ್ಲಿಯೇ ನಟೋರಿಯಸ್ ಆರೋಪಿಯು ಪೊಲೀಸರ ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಈ ಸಂದರ್ಭ ಆತ್ಮರಕ್ಷಣೆಗಾಗಿ ಸಿಪಿಐ ಮಂಜುನಾಥ ಕುಸುಗಲ್ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ಕೂಡ ನೀಡಿದ್ದಾರೆ.ಆದರೆ ಇದಾವದಕ್ಕೂ ಜಗ್ಗದ ಆರೋಪಿ ಎಡಗಾಲಿಗೆ ಎರೆಡು ಸುತ್ತು ಫೈರಿಂಗ್ ನಡೆಸಿದ್ದು, ಜಯಸಿಂಹನ ಕಾಲಿಗೆ ಗುಂಡು ತಗಲಿದೆ.
ಹಿರಿಯ ಅಧಿಕಾರಿಗಳ ಪರಿಶೀಲನೆ
ಗಾಯಗೊಂಡ ಆರೋಪಿಯನ್ನು ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿಗೆ ಭೇಟಿ ನೀಡಿದ ಗದಗ ಎಸ್ಪಿ ಬಿ.ಎಸ್. ನೇಮಗೌಡ ಅವರು ಗಾಯಾಳು ಆರೋಪಿ ಮತ್ತು ಪೊಲೀಸ್ ಸಿಬ್ಬಂದಿ ವೀರೇಶ್ ಬಿಸ್ನಳ್ಳಿಯ ಆರೋಗ್ಯ ವಿಚಾರಿಸಿದರು. ಅವರು ಘಟನೆಯ ಕುರಿತು ಪೊಲೀಸರಿಂದ ವಿವರಗಳನ್ನ ಪಡೆದುಕೊಂಡರು. ಅಲ್ಲದೇ ಫೈರಿಂಗ್ ನಡೆದ ಸ್ಥಳಕ್ಕೂ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಗ್ಯಾಂಗ್‌ನ ಭಯಾನಕ ಕೈಚಳಕ
ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ,ಜಾಲಹಳ್ಳಿಯಜನತಾ ಪ್ಲಾಟ ನಿವಾಸಿಯಾಗಿರುವ
ಜಯಸಿಂಹ ಮತ್ತು ಅವನ ಗ್ಯಾಂಗ್ ರಾಜ್ಯದ ಹಲವಾರು ಕಡೆಗಳಲ್ಲಿ ದರೋಡೆ, ಮನೆ ಕಳ್ಳತನ, ಮತ್ತು ಇತರ ಅಪರಾಧಗಳಲ್ಲಿ ತೊಡಗಿಸಿಕೊಂಡಿದ್ದರು. ಅವರ ಕ್ರಿಮಿನಲ್ ಚಟುವಟಿಕೆಗಳು ಅಂತ್ಯವಾಗಲು ಗದಗ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.
ಈ ಘಟನೆ ರಾಜ್ಯದ ಎಲ್ಲಾ ಪೊಲೀಸ್ ಇಲಾಖಾ ವ್ಯಾಪ್ತಿಯ ಆರೋಪಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದ್ದು, ಅಪರಾಧಿಗಳಿಗೆ ದಿಟ್ಟ ಪ್ರತಿಯಾಗಿದೆ.ಸದ್ಯ ಪೊಲೀಸರು ಈ ಪ್ರಕರಣದ ತನಿಖೆ ಮುಂದುವರಿಸುತ್ತಿದ್ದಾರೆ.